ADVERTISEMENT

ಹೆಸರಿಗಷ್ಟೇ ಶುದ್ಧ ನೀರಿನ ಘಟಕ

ನಿರ್ವಹಣೆ ಇಲ್ಲದೆ ಘಟಕಗಳು ಹಾಳು, ಜವಾಬ್ದಾರಿ ಹೊತ್ತ ಗುತ್ತಿಗೆದಾರರಿಗೆ ಅಧಿಕಾರಿಗಳ ಹುಡುಕಾಟ

​ಪ್ರಜಾವಾಣಿ ವಾರ್ತೆ
Published 11 ಜನವರಿ 2018, 5:45 IST
Last Updated 11 ಜನವರಿ 2018, 5:45 IST
ಚಿಂತಾಮಣಿ ಹೊರವಲಯದ ಕರಿಯಪ್ಪಲ್ಲಿ ಗ್ರಾಮದಲ್ಲಿ ನಿರ್ವಹಣೆ ಇಲ್ಲದೆ ಹಾಳಾಗಿರುವ ಶುದ್ದ ನೀರಿನ ಘಟಕ
ಚಿಂತಾಮಣಿ ಹೊರವಲಯದ ಕರಿಯಪ್ಪಲ್ಲಿ ಗ್ರಾಮದಲ್ಲಿ ನಿರ್ವಹಣೆ ಇಲ್ಲದೆ ಹಾಳಾಗಿರುವ ಶುದ್ದ ನೀರಿನ ಘಟಕ   

ಚಿಂತಾಮಣಿ: ಅಂತರ್ಜಲಮಟ್ಟ ತೀವ್ರವಾಗಿ ಕುಸಿದಿದ್ದು ಕೊಳವೆ ಬಾವಿಗಳ ನೀರು ಪ್ಲೋರೈಡ್‌ಯುಕ್ತವಾಗಿದ್ದು ಜನರು ನಾನಾ ಕಾಯಿಲೆಗಳಿಗೆ ತುತ್ತಾಗು ತ್ತಿದ್ದರು. ಜನತೆಗೆ ಪ್ಲೋರೈಡ್‌ಮುಕ್ತ ನೀರನ್ನು ಒದಗಿಸುವ ಸಲುವಾಗಿ ಸರ್ಕಾರ ರೂಪಿಸಿದ್ದ ‘ಶುದ್ಧ ನೀರಿನ ಘಟಕಗಳು’ ನಿರ್ವಹಣೆ ಇಲ್ಲದೆ ಹಾಳಾಗಿವೆ.

ಗುತ್ತಿಗೆದಾರರಿಗೆ ಹಣ, ಜನಪ್ರತಿನಿಧಿ ಗಳಿಗೆ ಮತ್ತು ಅಧಿಕಾರಿಗಳಿಗೆ ಕಮಿಷನ್‌ ಪಡೆಯುವುದಕ್ಕೆ ಘಟಕಗಳು ಸೀಮಿತವಾಗಿವೆ. ಚುನಾಯಿತ ಪ್ರತಿನಿಧಿ ಗಳು ಉದ್ಘಾಟನೆ ನೆರವೇರಿಸಿ ಭಾವಚಿತ್ರ ಹಾಕಿಸಿಕೊಂಡರೆ ಕರ್ತವ್ಯ ಮುಗಿಯಿತು ಎಂದು ಸ್ಥಳೀಯರು ಆರೋಪಿಸುವರು.

ಅಬ್ದುಲ್‌ ನಜೀರ್‌ ಸಾಬ್‌ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರಾಗಿದ್ದಾಗ ಊರು–ಕೇರಿಗಳಲ್ಲಿ ಕೊಳವೆ ಬಾವಿ ಕೊರೆಸಿ ಕುಡಿಯುವ ನೀರು ಒದಗಿಸಿದ್ದರು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿರುವ ಸಚಿವ ಎಚ್‌.ಕೆ. ಪಾಟೀಲ, ಶುದ್ಧ ಕುಡಿಯುವ ನೀರು ಒದಗಿಸಲು ಘಟಕ ಸ್ಥಾಪಿಸಿದರು. ತಾಲ್ಲೂಕಿನಲ್ಲಿ 135 ಶುದ್ಧ ನೀರಿನ ಘಟಕ ಸ್ಥಾಪಿಸಲಾಗಿದೆ. ಅವುಗಳಲ್ಲಿ 87 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಉಳಿದ 48 ಘಟಕಗಳು ದುರಸ್ತಿಯಲ್ಲಿವೆ ಎಂದು ಗ್ರಾಮೀಣ ನೀರು ಸರಬರಾಜು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡುವರು.

ADVERTISEMENT

ವಾಸ್ತವವಾಗಿ ತಾಲ್ಲೂಕಿನಲ್ಲಿ ಶೇ 50 ಶುದ್ಧ ನೀರಿನ ಘಟಕಗಳು ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ. ದುರಸ್ತಿ ಮಾಡುವವರೇ ಇಲ್ಲದೆ ಹಾಳಾಗಿವೆ. ಜನರಿಗೆ ಶುದ್ದ ಕುಡಿಯುವ ನೀರನ್ನು ಒದಗಿಸುವ ಮೂಲಕ ಆರೋಗ್ಯವನ್ನು ಕಾಪಾಡುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಕುಂಟುತ್ತಾ ತೆವಳುತ್ತಾ ಸಾಗುತ್ತಿದೆ. ಕೆಲವೆಡೆ ಘಟಕ ಸ್ಥಾಪನೆಯಾಗಿದ್ದರೂ ಜನರ ಉಪಯೊಗಕ್ಕೆ ಬರದಂತಾಗಿವೆ. ಕೆಲವು ನೀರಿನ ಘಟಕಗಳನ್ನು ಸ್ಥಾಪಿಸಿ ವರ್ಷವೇ ಕಳೆದಿದ್ದರೂ ಕಾರ್ಯಾರಂಭ ಮಾಡಿಲ್ಲ. ಲಕ್ಷಾಂತರ ವೆಚ್ಚದ ಯಂತ್ರೋಪಕರಣಗಳು ತುಕ್ಕು ಹಿಡಿಯುತ್ತಿವೆ.

ತಾಲ್ಲೂಕಿನಲ್ಲಿ ಒಟ್ಟು 6 ಏಜೆನ್ಸಿಗಳಿಗೆ ಶುದ್ದ ನೀರಿನ ಘಟಕ ಸ್ಥಾಪಿಸಲು ಗುತ್ತಿಗೆ ನೀಡಲಾಗಿತ್ತು. ಹೈದರಾಬಾದ್‌ನ ಫೈಬ್ರೋ ಕಂಪನಿಗೆ 14, ಫಂಟಾಸ್‌ 18, ಸಾಯಿ ಕಂಪನಿಗೆ 39, ಇಸಾವೇಸ್‌ 22, ಸಹಕಾರಿ ರಂಗ ಸಂಸ್ಥೆಗೆ 19, ಭೂಸೇನಾ ನಿಗಮಕ್ಕೆ 23 ಘಟಕಗಳನ್ನು ಗುತ್ತಿಗೆಗೆ ನೀಡಲಾಗಿದೆ. ನಿಯಮಾನುಸಾರ ಶುದ್ಧ ನೀರಿನ ಘಟಕ ಸ್ಥಾಪಿಸಲು ಅನುಮತಿ ಪಡೆದ ಏಜೆನ್ಸಿಗಳು 5 ವರ್ಷ ನಿರ್ವಹಣೆ ಮಾಡಬೇಕು. ಆದರೆ ಯಾವ ಕಂಪನಿಯೂ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ಇಲಾಖೆ ಮೂಲಗಳು ತಿಳಿಸಿವೆ.

500 ಎಲ್‌ಪಿಎಚ್‌ ಸಾಮರ್ಥ್ಯದ ಶುದ್ಧ ನೀರಿನ ಘಟಕದ ಸ್ಥಾಪನೆಗೆ ₹ 5ರಿಂದ 7 ಲಕ್ಷ ಹಾಗೂ 1000ಎಲ್‌ಪಿಎಚ್‌ ಸಾಮರ್ಥ್ಯದ ಘಟಕ ಸ್ಥಾಪನೆಗೆ ₹ 12 ಲಕ್ಷ ವೆಚ್ಚವಾಗುತ್ತದೆ. ಸರಾಸರಿ ಪ್ರತಿ ಘಟಕಕ್ಕೆ ₹ 10 ಲಕ್ಷ ವೆಚ್ಚ ಮಾಡಲಾಗಿದೆ.

ಶುದ್ಧ ನೀರಿನ ಘಟಕಗಳಲ್ಲಿ ತಾಂತ್ರಿಕ ಸಮಸ್ಯೆಯಾದರೆ ಪರಿಹರಿಸಲು ಹಾಗೂ ಘಟಕಗಳನ್ನು ನಿರ್ವಹಿಸಲು ಏಜೆನ್ಸಿಗಳು ಯಾವುದೇ ವ್ಯಕ್ತಿಯನ್ನು ನೇಮಕ ಮಾಡುತ್ತಿಲ್ಲ. ನೇಮಕ ಮಾಡಿದ ವ್ಯಕ್ತಿಗಳೂ ಯಾರ ಕೈಗೂ ಸಿಗುತ್ತಿಲ್ಲ ಎಂಬುದು ಅಧಿಕಾರಿಗಳ ಆರೋಪ.

ಘಟಕದಿಂದ ಸರಾಸರಿ ₹ 5 ವೆಚ್ಚದಲ್ಲಿ 20 ಲೀಟರ್‌ ನೀರನ್ನು ಪಡೆಯಬಹುದು. ಮಾರುಕಟ್ಟೆ ದರಕ್ಕೆ ಹೋಲಿಸಿದರೆ ಶುದ್ಧೀಕರಿಸಿದ ನೀರು ಅಗ್ಗವಾಗಿದೆ. ನಿಗದಿತ ಮೊತ್ತದ ನಾಣ್ಯವನ್ನು ಹಾಕಿ ಅಥವಾ ಸ್ಮಾರ್ಟ್‌ ಕಾರ್ಡ್‌ (ವಿತರಿಸಿದ್ದರೆ) ಬಳಸಿ ನೀರನ್ನು ಪಡೆಯಬಹುದು.
–ಎಂ.ರಾಮಕೃಷ್ಣಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.