ADVERTISEMENT

ತಿರುವು ಪಡೆದ ರಾಜೀನಾಮೆ ‘ಪ್ರಹಸನ’

​ಪ್ರಜಾವಾಣಿ ವಾರ್ತೆ
Published 19 ಜನವರಿ 2018, 9:24 IST
Last Updated 19 ಜನವರಿ 2018, 9:24 IST
ಪಿ.ಎನ್.ಕೇಶವರೆಡ್ಡಿ
ಪಿ.ಎನ್.ಕೇಶವರೆಡ್ಡಿ   

ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಅವರು ಗುರುವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಗುರುದತ್ ಹೆಗ್ಡೆ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಆದರೆ, ನಿಯಮಾನುಸಾರ ಸಿಇಒ ಅವರಿಗೆ ಅಧ್ಯಕ್ಷರ ರಾಜೀನಾಮೆ ಪತ್ರ ಅಂಗೀಕರಿಸುವ ಅಧಿಕಾರ ಇಲ್ಲ ಎನ್ನಲಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ (ಆರ್‌.ಡಿ.ಪಿ.ಆರ್‌) ಇಲಾಖೆ ನಿಯಮಾವಳಿ ಪ್ರಕಾರ ಅಧ್ಯಕ್ಷರು ಆರ್‌ಡಿಪಿಆರ್ ಪ್ರಧಾನ ಕಾರ್ಯದರ್ಶಿ ಅವರ ಎದುರಿನಲ್ಲೇ ‘ನನ್ನ ಸ್ವಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ರಾಜೀನಾಮೆ ಪತ್ರದಲ್ಲಿ ಬರೆದು ಸಲ್ಲಿಸಬೇಕು. ಆದರೆ ಕೇಶವರೆಡ್ಡಿ ಅವರು ಸಿಇಒ ಅವರಿಗೆ ಸಲ್ಲಿಸಿದ ಪತ್ರದಲ್ಲಿ ‘ಪಕ್ಷದ ಹೈಕಮಾಂಡ್ ಸೂಚನೆಯಂತೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.

ಕೇಶವರೆಡ್ಡಿ ಅವರು ಸಲ್ಲಿಸಿದ ರಾಜೀನಾಮೆಯು ಕಾನೂನುಬದ್ಧವಾಗಿಲ್ಲ ಎಂದು ಆರ್‌ಡಿಪಿಆರ್‌ನ ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು. ಈ ಕುರಿತು ಗುರುದತ್ ಹೆಗ್ಡೆ ಅವರನ್ನು ಪ್ರಶ್ನಿಸಿದರೆ, ‘ಕೇಶವರೆಡ್ಡಿ ಅವರು ರಾಜೀನಾಮೆ ಪತ್ರ ಸಲ್ಲಿಸಿದ್ದು ನಿಜ. ಆದರೆ ಅದನ್ನು ಅಂಗೀಕರಿಸುವ ಅಧಿಕಾರ ನನಗೆ ಇದೆಯೋ ಇಲ್ಲವೋ ಎನ್ನುವ ಪ್ರಶ್ನೆ ಉದ್ಭವಿಸಿದೆ. ಆ ಬಗ್ಗೆ ಪರಿಶೀಲಿಸಿ ಶುಕ್ರವಾರ ಬೆಳಿಗ್ಗೆ ಈ ವಿಚಾರದಲ್ಲಿ ಕಾನೂನು ಏನು ಹೇಳುತ್ತದೆ ಎನ್ನುವುದು ಸ್ಪಷ್ಟಪಡಿಸುತ್ತೇನೆ’ ಎಂದು ಹೇಳಿದರು.

ADVERTISEMENT

‘ಗುರುವಾರ ಆರ್‌ಡಿಪಿಆರ್‌ ಪ್ರಧಾನ ಕಾರ್ಯದರ್ಶಿ ಅವರಿಗೆ ರಾಜೀನಾಮೆ ಸಲ್ಲಿಸುತ್ತೇನೆ’ ಎಂದು ಕೇಶವರೆಡ್ಡಿ ಅವರು ಬುಧವಾರ ಹೇಳಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಅವರು ರಾಜೀನಾಮೆ ನೀಡುವಲ್ಲಿ ತೋರಿದ ನಡೆ ಅವರ ‘ಪದತ್ಯಾಗ’ಕ್ಕೆ ಒತ್ತಾಯಿಸಿ ಕಳೆದ ಒಂದು ವರ್ಷದಿಂದ ‘ಬಂಡಾಯ’ ಎಂದಿದ್ದ ಸದಸ್ಯರನ್ನು ಮತ್ತಷ್ಟು ಕೆರಳಿಸಿದೆ ಎನ್ನಲಾಗಿದೆ. ಈ ಕುರಿತು ವಿಚಾರಿಸಲು ಕೇಶವರೆಡ್ಡಿ ಅವರನ್ನು ಸಂಪರ್ಕಿಸಿದರೆ ಕರೆ ಸ್ವೀಕರಿಸಲಿಲ್ಲ.

28 ಸದಸ್ಯ ಬಲ ಹೊಂದಿರುವ ಜಿಲ್ಲಾ ಪಂಚಾಯಿತಿಯಲ್ಲಿ 21 ಕಾಂಗ್ರೆಸ್‌ ಸದಸ್ಯರು, ಐದು ಜೆಡಿಎಸ್‌, ಬಿಜೆಪಿ ಮತ್ತು ಸಿಪಿಎಂ ತಲಾ ಒಬ್ಬ ಸದಸ್ಯರು ಇದ್ದಾರೆ. ಆದರೆ ರಾಜಕೀಯ ‘ಹಿತಾಸಕ್ತಿ’ ಸಂಘರ್ಷದಿಂದ ಜಿಲ್ಲೆಯ ಕಾಂಗ್ರೆಸ್‌ ಪಾಳೆಯದಲ್ಲಿ ಮೂರು ಬಣಗಳಾಗಿವೆ.

ಪರಿಣಾಮ, ಆಡಳಿತಾರೂಢ ಪಕ್ಷದವರಲ್ಲಿಯೇ 14 ಸದಸ್ಯರು ಶಾಸಕ ಡಾ.ಕೆ.ಸುಧಾಕರ್ ಅವರ ತಂದೆಯಾಗಿರುವ ಕೇಶವರೆಡ್ಡಿ ಅವರ ಆಡಳಿತ ವೈಖರಿ ವಿರುದ್ಧ ಸಿಡಿದೆದ್ದು ಕಳೆದ ಒಂದು ವರ್ಷದಿಂದ ರಾಜೀನಾಮೆಗೆ ಒತ್ತಾಯಿಸುತ್ತಲೇ ಬಂದಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಅನೇಕ ವರಿಷ್ಠರು ನಡೆಸಿ ‘ಸಂಧಾನ’ಗಳೆಲ್ಲ ವಿಫಲಗೊಂಡ ಬಳಿಕ ಮಧ್ಯ ಪ್ರವೇಶಿಸಿದ ಪಕ್ಷದ ಹೈಕಮಾಂಡ್ ಕೇಶವರೆಡ್ಡಿ ಅವರಿಗೆ ರಾಜೀನಾಮೆ ನೀಡುವಂತೆ ಸೂಚನೆ ನೀಡಿತ್ತು ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.