ADVERTISEMENT

ಬೇಡಿಕೆ ಈಡೇರಿಕೆಗೆ ನೌಕರರ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 9:37 IST
Last Updated 9 ಫೆಬ್ರುವರಿ 2018, 9:37 IST

ಚಿಕ್ಕಬಳ್ಳಾಪುರ: ‘ಬಿಸಿಯೂಟ ನೌಕರರಿಗೆ ಮಾಸಿಕ ₹ 5 ಸಾವಿರ ವೇತನ ಹೆಚ್ಚಿಸಬೇಕು. ಈ ಯೋಜನೆ ಖಾಸಗೀಕರಣ ಮಾಡಬಾರದು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ‘ವಿಧಾನಸೌಧ ಚಲೋ’ ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗವಹಿಸಲು ನಗರದ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ (ಸಿಐಟಿಯು) ತಾಲ್ಲೂಕು ಸಮಿತಿಯ ಬಿಸಿಯೂಟ ನೌಕರರು ಗುರುವಾರ ಬೆಂಗಳೂರಿಗೆ ತೆರಳಿದರು.

ಅಕ್ಷರ ದಾಸೋಹ ನೌಕರರ ಸಂಘ ಜಿಲ್ಲಾ ಘಟಕದ ಕಾರ್ಯದರ್ಶಿ ಎ.ಆರ್‌.ಮಂಜುಳಾ ಮಾತನಾಡಿ, ‘ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪೂರಕವಾಗಿರುವ ಬಿಸಿಯೂಟ ಯೋಜನೆಯನ್ನು ಖಾಸಗಿ ಸಂಘ - ಸಂಸ್ಥೆಗಳಿಗೆ ಜವಾಬ್ದಾರಿ ನೀಡುತ್ತಿರುವುದು ಸಮಂಜಸವಲ್ಲ. 16 ವರ್ಷಗಳಿಂದ ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಸುವಲ್ಲಿ ಬಿಸಿಯೂಟ ನೌಕರರು ಶ್ರಮಿಸುತ್ತಿದ್ದಾರೆ. ನೌಕರರನ್ನು ಇದೀಗ ಕಡೆಗಣಿಸುತ್ತಿರುವುದು ಸರಿಯಲ್ಲ. ಬಿಸಿಯೂಟ ನೌಕರರಿಗೆ ₹ 5 ಸಾವಿರ ವೇತನ ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.

‘45ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸ್ಸಿನಂತೆ ಬಿಸಿಯೂಟ ನೌಕರರಿಗೆ ಕನಿಷ್ಠ ಕೂಲಿ, ಸಾಮಾಜಿಕ ಭದ್ರತೆ ಒದಗಿಸಬೇಕು. ಬಿಸಿಯೂಟ ಯೋಜನೆಗೆ ಬೇರೆ ಹೆಸರಿನಲ್ಲಿ ಇಡುವ ನಿರ್ಧಾರ ಕೈಬಿಡಬೇಕು. ಪ್ರತಿ ಶಾಲೆಗೆ ಎರಡು ಅಡುಗೆ ಕೋಣೆ ನಿರ್ಮಿಸಬೇಕು. ಬಿಸಿಯೂಟ ನೌಕರರನ್ನು ಶಿಕ್ಷಣ ಇಲಾಖೆಯಲ್ಲಿ ಕಾಯಂ ಗೊಳಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಸಿಪಿಎಂ ಮುಖಂಡ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ, ‘ಬಿಸಿಯೂಟ ನೌಕರರಿಗೂ ಬೇಸಿಗೆಯಲ್ಲಿ ರಜೆ ನೀಡಬೇಕು. ನೌಕರರನ್ನು ಯಾವುದೇ ಕಾರಣವಿಲ್ಲದೆ ಕೆಲಸದಿಂದ ಕೈಬಿಡಬಾರದು ಎನ್ನುವ ಸೇವಾ ನಿಯಮಾವಳಿ ಜಾರಿಗೊಳಿಸಬೇಕು. ವೇತನವನ್ನು ನಿಗದಿತ ದಿನಾಂಕದೊಳಗೆ ಪಾವತಿಸಬೇಕು. ಅಪಘಾತ ಸಂಭವಿಸಿದಾಗ ಬಿಸಿಯೂಟ ನೌಕರರಿಗೆ ಶೀಘ್ರ ಪರಿಹಾರ ವಿತರಿಸಬೇಕು. ಬಿಸಿಯೂಟ ಯೋಜನೆಯನ್ನು 12 ನೇ ತರಗತಿಯವರೆಗೆ ವಿಸ್ತರಣೆ ಮಾಡಬೇಕು’ ಎಂದು ಹೇಳಿದರು.

‘ಬಿಸಿಯೂಟ ನೌಕರರಿಗೆ ನೇರವಾಗಿ ಶಿಕ್ಷಣ ಇಲಾಖೆಯಡಿಯೇ ಮೇಲ್ವಿಚಾರಣೆ ಇರಬೇಕು. ಎಲ್ಲಾ ನೌಕರರಿಗೂ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ ಜಾರಿ ಮಾಡಬೇಕು. ರಾಜ್ಯ ಸರ್ಕಾರ ಹಾಜರಾತಿ ಆಧಾರದಲ್ಲಿ ಕೆಲಸದಿಂದ ತೆಗೆದು ಹಾಕುವ ಕ್ರಮ ನಿಲ್ಲಿಸಬೇಕು. ಹಾಜರಾತಿ ಆಧಾರದಲ್ಲಿ ಶಾಲೆಗಳನ್ನು ವಿಲೀನಗೊಳಿಸುವಾಗ ಶಿಕ್ಷಕರನ್ನು ವರ್ಗಾವಣೆ ಮಾಡುವ ಹಾಗೆ ಅಡುಗೆಯವರನ್ನು ಹತ್ತಿರದ ಶಾಲೆಗೆ ವರ್ಗಾವಣೆ ಮಾಡಬೇಕು. ಈ ನೌಕರರಿಗೆ ಪಿಂಚಣಿ ಸೌಲಭ್ಯ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಸಿಪಿಎಂ ಮುಖಂಡ ಬಿ.ಎನ್.ಮುನಿಕೃಷ್ಣಪ್ಪ, ಅಕ್ಷರ ದಾಸೋಹ ನೌಕರರ ಸಂಘ ಜಿಲ್ಲಾ ಘಟಕ ಅಧ್ಯಕ್ಷೆ ಜಿ.ಎಚ್‌.ಲಕ್ಷ್ಮೀದೇವಮ್ಮ, ಜಿಲ್ಲಾ ಘಟಕದ ಉಪಾಧ್ಯಕ್ಷೆ ಉಮಾ, ಖಜಾಂಚಿ ಭಾರತಿ, ಬಿಸಿಯೂಟ ನೌಕರರಾದ ಬಸಮ್ಮ, ನಾರಾಯಣಮ್ಮ, ಸುಜಾತಾ, ಭಾಗ್ಯಮ್ಮ ಇದ್ದರು.

* * 

ಬಿಸಿಯೂಟ ನೌಕರರಿಗೆ ಬರಗಾಲ ಮತ್ತು ವಿಶೇಷ ರಜಾ ದಿನಗಳಲ್ಲಿ ವೇತನ ನೀಡಬೇಕು. ಮುಖ್ಯವಾಗಿ ಕನಿಷ್ಠ ಕೂಲಿ, ಸಾಮಾಜಿಕ ಭದ್ರತೆ ಒದಗಿಸಬೇಕು
ಎಂ.ಪಿ.ಮುನಿವೆಂಕಟಪ್ಪ, ಸಿಪಿಎಂ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.