ADVERTISEMENT

ಜನರನ್ನು ವಂಚಿಸಲು ಹೊರಟ ಕೇಂದ್ರ: ಜಿ.ವಿ.ಶ್ರೀರಾಮರೆಡ್ಡಿ ಆರೋಪ

ಪ್ರಜಾ ಸಂಘರ್ಷ ಸಮಿತಿ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 13:19 IST
Last Updated 26 ಸೆಪ್ಟೆಂಬರ್ 2020, 13:19 IST

ಚಿಕ್ಕಬಳ್ಳಾಪುರ: ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ಮತ್ತು ಕಾರ್ಮಿಕ ವಿರೋಧಿ ಧೋರಣೆ ಖಂಡಿಸಿ ಸೆ.28ರಂದು ನಡೆಸುತ್ತಿರುವ ಬಂದ್‌ಗೆ ಪ್ರಜಾ ಸಂಘರ್ಷ ಸಮಿತಿ ಸಂಪೂರ್ಣ ಬೆಂಬಲ ನೀಡುವ ಜತೆಗೆ ಬಂದ್‌ನಲ್ಲಿ ಸಕ್ರಿಯವಾಗಿ ಭಾಗವಹಿಸಲಿದೆ’ ಎಂದು ಪ್ರಜಾ ಸಂಘರ್ಷ ಸಮಿತಿ ಅಧ್ಯಕ್ಷ ಜಿ.ವಿ.ಶ್ರೀರಾಮರೆಡ್ಡಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ರೈತರ, ಕಾರ್ಮಿಕರ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಬಹುರಾಷ್ಟ್ರೀಯ ಕಂಪನಿಗಳಿಗೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ತಿಳಿಸಿದರು.

‘ಭೂಸುಧಾರಣಾ ಕಾಯ್ದೆಯ ತಿದ್ದುಪಡಿಯಿಂದ ಹಣದಾಸೆಗೆ ರೈತರು ಭೂಮಿ ಕಳೆದುಕೊಳ್ಳಲಿದ್ದಾರೆ. ಉಳ್ಳವರು, ಕಪ್ಪು ಹಣ ಹೊಂದಿದವರು ಯಥೇಚ್ಛವಾಗಿ ಭೂಮಿ ಖರೀದಿಸಿ ಬೇಲಿ ಹಾಕಿ, ರಿಯಲ್‌ ಎಸ್ಟೇಟ್‌ ಉದ್ಯಮದ ಮೂಲಕ ಹಣ ಮಾಡುವ ದಂಧೆ ಆರಂಭಿಸಲಿದ್ದಾರೆ. ಅನ್ನದಾತರಿಗೆ ಮಾರಕವಾದ ಈ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಲಾಕ್‌ಡೌನ್‌ನಂತಹ ವಿಷಮ ಪರಿಸ್ಥಿತಿಯಲ್ಲಿ ಸರ್ಕಾರಗಳು ಕೃಷಿ ಕ್ಷೇತ್ರವನ್ನು ಕಳ್ಳರ ರೀತಿಯಲ್ಲಿ ಕಾರ್ಪೋರೆಟ್‌ ಕಂಪೆನಿಗಳಿಗೆ ಧಾರೆ ಎರೆದಿರುವುದು ಅತ್ಯಂತ ಅಮಾನವೀಯ ಕ್ರಮ. ಇಡೀ ಜನಜೀವನದ ಮೇಲೆ ಪರಿಣಾಮ ಬೀರುವಂತಹ ತಿದ್ದುಪಡಿಗಳನ್ನು ಶಾಸನಸಭೆ, ಸಂಸತ್ತಿನಲ್ಲಿ ಚರ್ಚಿಸದೆ ಸುಗ್ರಿವಾಜ್ಞೆ ಮೂಲಕ ಕಾಯ್ದೆ ಜಾರಿಗೆ ಮುಂದಾಗುತ್ತಿರುವುದು ಜನರನ್ನು ವಂಚಿಸುವ ಕೆಲಸ’ ಎಂದು ಆರೋಪಿಸಿದರು.

‘ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ಮಾರುಕಟ್ಟೆಯಲ್ಲಿ ಖಾಸಗಿ ಕಂಪನಿಗಳ ನಿಯಂತ್ರಣ ಹೆಚ್ಚಾಗುತ್ತಿದೆ. ಕಾರ್ಮಿಕ ಕಾಯ್ದೆ ತಿದ್ದುಪಡಿ ಮೂಲಕ ಕಾರ್ಮಿಕರ ಹಕ್ಕು ಕಸಿದುಕೊಳ್ಳುವ ಹುನ್ನಾರ ನಡೆಸಲಾಗಿದೆ. ಉದ್ಯಮಿಗಳಿಗೆ ಅನುಕೂಲ ಕಲ್ಪಿಸಲು ಪ್ರಧಾನಿ ಮೋದಿ ರೈತರು, ಕಾರ್ಮಿಕರು ಮತ್ತು ಜನಸಾಮಾನ್ಯರಿಗೆ ಮಾರಕವಾಗುವಂತೆ ಕಾಯ್ದೆಗಳನ್ನು ಸರ್ವಾಧಿಕಾರಿ ಧೋರಣೆ ಮೂಲಕ ತಿದ್ದುಪಡಿ ಮಾಡಲು ಹೊರಟಿದ್ದಾರೆ’ ಎಂದರು.

‘ಕೇಂದ್ರ ಸರ್ಕಾರದ ನಿರ್ಧಾರದಿಂದಾಗಿ ಭವಿಷ್ಯದಲ್ಲಿ ಕೃಷಿ ಕ್ಷೇತ್ರ ಅಧೋಗತಿಗೆ ಹೋಗಿ, ಭಾರತಕ್ಕೆ ಆಹಾರದ ಕೊರತೆ ಉಂಟಾಗಿ, ವಿದೇಶದಿಂದ ಆಹಾರ ಆಮದು ಮಾಡಿಕೊಳ್ಳುವ ದುಸ್ಥಿತಿ ಒದಗಿ ಬಂದು ದೇಶದ ಸಾರ್ವಭೌಮತ್ವಕ್ಕೆ ಧಕ್ಕೆಯಾಗಲಿದೆ. ಇದನ್ನೆಲ್ಲ ಬಚ್ಚಿಟ್ಟು ಸರ್ಕಾರಗಳು ಕಾಯ್ದೆಗಳ ತಿದ್ದುಪಡಿ ಕುರಿತು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ’ ಎಂದು ಹೇಳಿದರು.

ಸಮಿತಿಯ ಜಿಲ್ಲಾ ಸಹಸಂಚಾಲಕ ಆರ್.ಎನ್.ರಾಜು, ಚೆನ್ನರಾಯಪ್ಪ, ಮಧು, ಫಯಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.