ADVERTISEMENT

ಜನರಿಗೆ ಧೈರ್ಯ ತುಂಬಿದ ಶಾಸಕ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2021, 4:19 IST
Last Updated 12 ನವೆಂಬರ್ 2021, 4:19 IST
ಚಿಂತಾಮಣಿ ತಾಲ್ಲೂಕಿನ ಮಿಟ್ಟಹಳ್ಳಿ ಗ್ರಾಮಕ್ಕೆ ಗುರುವಾರ ಶಾಸಕ ಎಂ. ಕೃಷ್ಣಾರೆಡ್ಡಿ ಭೇಟಿ ನೀಡಿ ಪರಿಶೀಲಿಸಿದರು
ಚಿಂತಾಮಣಿ ತಾಲ್ಲೂಕಿನ ಮಿಟ್ಟಹಳ್ಳಿ ಗ್ರಾಮಕ್ಕೆ ಗುರುವಾರ ಶಾಸಕ ಎಂ. ಕೃಷ್ಣಾರೆಡ್ಡಿ ಭೇಟಿ ನೀಡಿ ಪರಿಶೀಲಿಸಿದರು   

ಚಿಂತಾಮಣಿ: ನಿಗೂಢ ಶಬ್ದದಿಂದ ಜನರು ದಿಕ್ಕೆಟ್ಟು ಗುಳೆ ಹೋಗುತ್ತಿರುವ ತಾಲ್ಲೂಕಿನ ಮಿಟ್ಟಹಳ್ಳಿ ಗ್ರಾಮಕ್ಕೆ ಗುರುವಾರ ಶಾಸಕ ಎಂ. ಕೃಷ್ಣಾರೆಡ್ಡಿ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿದರು. ಬಳಿಕ ಗ್ರಾಮದ ವಿವಿಧ ಭಾಗಗಳಲ್ಲಿ ಸಂಚರಿಸಿ ಜನರ ಅಹವಾಲು ಸ್ವೀಕರಿಸಿದರು.

‘ತಾಲ್ಲೂಕು ಆಡಳಿತ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತದೆ. ಗ್ರಾಮಸ್ಥರು ಆತಂಕಪಡದೆ ಸಮಾಧಾನದಿಂದ ಇರಬೇಕು. ತಹಶೀಲ್ದಾರ್, ಕಾರ್ಯ ನಿರ್ವಹಣಾಧಿಕಾರಿ, ಜಿಲ್ಲಾಧಿಕಾರಿ ಮತ್ತು ಎಸ್ಪಿ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಜನರು ಭಯದಿಂದ ದೂರವಾಗಬೇಕು’ ಎಂದು ಶಾಸಕರು ಮನವಿ ಮಾಡಿದರು.

‘ಗಣಿ ಮತ್ತು ಭೂ ವಿಜ್ಞಾನ ಸಚಿವರೊಂದಿಗೆ ಮಾತನಾಡಿದ್ದೇನೆ. ಪ್ರಕೃತಿ ವಿಕೋಪ ಇಲಾಖೆಯ ಅಧಿಕಾರಿಗಳನ್ನು ಕಳುಹಿಸುವುದಾಗಿ ಭರವಸೆ ನೀಡಿದ್ದಾರೆ. ಜಂಟಿ ನಿರ್ದೇಶಕ ಡಾ.ರಾಮಣ್ಣ ಅವರೊಂದಿಗೂ ದೂರವಾಣಿ ಮೂಲಕ ಸಂಪರ್ಕಿಸಿ ಇಲ್ಲಿನ ಜನರ ಆತಂಕವನ್ನು ಮನವರಿಕೆ ಮಾಡಿದ್ದೇನೆ. ಅವರು ಇಂತಹ ವಿಷಯಗಳಲ್ಲಿ ತುಂಬಾ ಪರಿಣತರು. ಗ್ರಾಮಸ್ಥರು ಭಯಭೀತರಾಗಿ ಕುಟುಂಬ ಸಮೇತ ಗುಳೆ ಹೋಗಲು ಸಿದ್ಧರಾಗಿದ್ದಾರೆ ಎಂದೂ ತಿಳಿಸಿದ್ದೇನೆ’ ಎಂದರು.

ADVERTISEMENT

‘ಇದು ಭೂ ಕಂಪನವಂತೂ ಅಲ್ಲ. ಈ ಬಗ್ಗೆ ಗೌರಿಬಿದನೂರು ಮತ್ತು ಬೆಂಗಳೂರಿನ ಭೂಕಂಪ ಮಾಪನ ಕೇಂದ್ರದ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಭೂ ಕಂಪನದ ಬಗ್ಗೆ ರಿಕ್ಟರ್ ಮಾಪನದಲ್ಲಿ ಸ್ವಲ್ಪ ಪ್ರಮಾಣದಲ್ಲೂ ದಾಖಲಾಗಿಲ್ಲವೆಂದುಅಧಿಕೃತವಾಗಿ ಕೇಂದ್ರದ ವಿಜ್ಞಾನಿಗಳು ತಿಳಿಸಿದ್ದಾರೆ’ ಎಂದರು.

ಮಳೆ ಅಧಿಕವಾಗಿದ್ದು ಕೊಳವೆಬಾವಿಗಳ ಮರುಪೂರಣ ಸಂದರ್ಭಗಳಲ್ಲಿ ಈ ರೀತಿ ಆಗುವ ಸಂಭವ ಇರುತ್ತದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ ಎಂದರು.

ಜಿಲ್ಲಾಧಿಕಾರಿ ಸಹ ಪ್ರಕೃತಿ ವಿಕೋಪ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಜಂಟಿ ನಿರ್ದೇಶಕ ಡಾ.ರಾಮಣ್ಣ ಅವರ ತಂಡ ಮತ್ತು ಪ್ರಕೃತಿ ವಿಕೋಪ ಇಲಾಖೆಯ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಶಬ್ದದ ನಿಗೂಢತೆ ಬಗ್ಗೆ ಖಚಿತ ಮಾಹಿತಿ ನೀಡಲಿದೆ. ಗ್ರಾಮಸ್ಥರು ಭಯ, ಆತಂಕದಿಂದ ಹೊರಬಂದು ಎಂದಿನಂತೆ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.