ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಗುರುವಾರ ಮತ್ತೆ 24 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 2722ಕ್ಕೆ ಏರಿದೆ.
ಗ್ರಾಮೀಣ ಮತ್ತು ನಗರ ಹೀಗೆ ಎರಡೂ ಪ್ರದೇಶಗಳಲ್ಲಿ ಸೋಂಕಿತರು ಕಂಡು ಬಂದಿದ್ದಾರೆ. ಕೆಲವು ದಿನಗಳಲ್ಲಿ ಪ್ರಕರಣಗಳು ನೂರರ ಗಡಿದಾಡುತ್ತಿದ್ದವು. ಆದರೆ ಗುರುವಾರ 24 ಮಂದಿಗೆ ಸೋಂಕು ಪತ್ತೆಯಾಗಿದೆ.
ನಗರ ಮತ್ತು ಗ್ರಾಮೀಣ ಭಾಗದ ಬಹುತೇಕ ಸಾರ್ವಜನಿಕ ಸ್ಥಳಗಳು, ಸರ್ಕಾರಿ ಕಚೇರಿಗಳು, ದೇವಸ್ಥಾನ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಬಳಸುವಂತೆ ಮತ್ತು ಅಂತರ ಕಾಪಾಡುವಂತೆ ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ.
ಚಿಂತಾಮಣಿ: 8 ಮಂದಿಗೆ ಸೋಂಕು
ಚಿಂತಾಮಣಿ: ನಗರದ ಹಾಗೂ ತಾಲ್ಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬುಧವಾರ ನಡೆದ ರ‍್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಮತ್ತು ಆರ್‌ಟಿಪಿಸಿಎಲ್ ತಪಾಸಣೆಯಲ್ಲಿ ನಗರದ 6 ಹಾಗೂ ಗ್ರಾಮೀಣ ಭಾಗದ ಇಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ವೆಂಕಟೇಶ್ವರ ಬಡಾವಣೆ ಯಲ್ಲಿ 2, ಅಗ್ರಹಾರ 1, ದೊಡ್ಡಪೇಟೆಯಲ್ಲಿ 1, ಚೌಡರೆಡ್ಡಿಪಾಳ್ಯದಲ್ಲಿ ಇಬ್ಬರು ಸೋಂಕಿಗೆ ಒಳಗಾಗಿದ್ದಾರೆ. ಚೌಡರೆಡ್ಡಿಪಾಳ್ಯದ ಇಬ್ಬರು 3 ವರ್ಷದ ಮಕ್ಕಳಾಗಿದ್ದಾರೆ.ಬಚ್ಚಪ್ಪನಹಳ್ಳಿ ಹಾಗೂ ಯನಮಲಪಾಡಿಯಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ.
ಸೋಂಕಿತರನ್ನು ಮಸ್ತೇನಹಳ್ಳಿ ಕೋವಿಡ್-19 ಕೇಂದ್ರಕ್ಕೆ ದಾಖಲಿಸಲಾಗಿದೆ. ಇವರ ಮನೆಗಳ ಸುತ್ತಮುತ್ತ ಸೀಲ್‌ಡೌನ್ ಮಾಡಲಾಗಿದೆ. ನಗರಸಭೆಯವರು ಸೋಂಕು ನಿವಾರಕ ಔಷಧಿ ಸಿಂಪಡಿಸಿದ್ದಾರೆ. ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕಿತರನ್ನು ಮನೆಗಳಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.