ಗೌರಿಬಿದನೂರು: ಸರ್ಕಾರದ ಸವಲತ್ತುಗಳನ್ನು ರೈತರಿಗೆ ತಲುಪಿಸುವ ಕೃಷಿ ಇಲಾಖೆ ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ. ರೈತರಿಗೆ ಮಳೆ ಕೊರತೆಯಿಂದ ಬರ ಉಂಟಾಗಿರುವಂತೆ, ತಾಲ್ಲೂಕಿನ ಕೃಷಿ ಇಲಾಖೆಯೂ ಐದು ವರ್ಷಗಳಿಂದ ಸಿಬ್ಬಂದಿ ಬರ ಎದುರಿಸುತ್ತಿದೆ.
ತಾಲ್ಲೂಕಿನಲ್ಲಿ, ಅತಿ ಸಣ್ಣ ರೈತರು, ಸಣ್ಣ ರೈತರು, ಮತ್ತು ಅರೆ ಮಧ್ಯಮ ರೈತರು ಸೇರಿದಂತೆ ಒಂದು ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ಇಲಾಖೆಯ ಕಾರ್ಯಕ್ರಮಗಳನ್ನು ಪರಿಣಾಮಕಾರಿ ಅನುಷ್ಠಾನ ಮಾಡುವುದಕ್ಕೆ ತೊಂದರೆಯಾಗಿ ಪರಿಣಮಿಸಿದೆ.
ಇಷ್ಟು ರೈತರಿಗೆ ಸರ್ಕಾರದ ಸವಲತ್ತುಗಳನ್ನು ಕಲ್ಪಿಸಲು ಕೃಷಿ ಇಲಾಖೆಯಲ್ಲಿ ಇರುವುದು ಕೇವಲ 6 ಮಂದಿ ಮಾತ್ರ. ಸರ್ಕಾರ ಕೃಷಿ ಇಲಾಖೆಗೆ 37 ಹುದ್ದೆಗಳನ್ನು ಮಂಜೂರು ಮಾಡಿದೆ. ಆದರೆ ಅದರಲ್ಲಿ ಭರ್ತಿಯಾಗಿರುವುದು ಕೇವಲ 6 ಹುದ್ದೆ ಮಾತ್ರ.
ತಾಲ್ಲೂಕಿನಲ್ಲಿ ಹೋಬಳಿವಾರು 6 ರೈತ ಸಂಪರ್ಕ ಕೇಂದ್ರಗಳಿವೆ. ಕಸಬಾ ಮತ್ತು ಸಹಾಯಕ ನಿರ್ದೇಶಕರ ಕಚೇರಿ, ಹೊಸೂರು, ನಗರಗೆರೆ, ಡಿ. ಪಾಳ್ಯ, ತೊಂಡೇಭಾವಿಗಳಲ್ಲಿ ಎರಡು ರೈತ ಸಂಪರ್ಕ ಕೇಂದ್ರಗಳಿಗೆ ಓರ್ವ ಕೃಷಿ ಅಧಿಕಾರಿಗೆ ಜವಾಬ್ದಾರಿ ನೀಡಲಾಗಿದೆ. ಸಹಾಯಕ ಕೃಷಿ ಅಧಿಕಾರಿಗಳ ಒಂದು ಹುದ್ದೆಯೂ ನೇಮಕವಾಗಿಲ್ಲ. ಇದರಿಂದ ಇರುವ ಅಧಿಕಾರಿಗಳ ಮೇಲೆ ಕೆಲಸದ ಒತ್ತಡ ಜಾಸ್ತಿಯಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡಿರುವ 6 ಜನರಿಂದಲೇ ಬಹುತೇಕ ಕೆಲಸಗಳನ್ನು ಮಾಡಿಸಿಕೊಳ್ಳಲಾಗುತ್ತಿದೆ. ಇದರಿಂದ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಸಕಾಲಕ್ಕೆ ತಲುಪಿಸಬೇಕಾದ ಬಿತ್ತನೆ ಬೀಜ, ಬೆಳೆ ವಿಮೆ, ಬೆಳೆ ಪರಿಹಾರ, ರಸಗೊಬ್ಬರ, ಕಿಸಾನ್ ಸಮ್ಮಾನ್, ಯಂತ್ರಧಾರೆ, ಫ್ರೂಟ್ ಐಡಿ ಸೃಜನೆ, ಹೀಗೆ ನಾನಾ ಯೋಜನೆಗಳ ಸಮರ್ಪಕ ಅನುಷ್ಠಾನ ಆಗುತ್ತಿಲ್ಲ. ಜೊತೆಗೆ ಹಲವು ಯೋಜನೆಗಳು ರೈತರಿಂದ ದೂರವೇ ಉಳಿದಿದೆ.
ತಾಲ್ಲೂಕಿನ ಇತ್ತೀಚಿನ ವರ್ಷಗಳಲ್ಲಿ ಬೆಳೆಗಳಿಗೆ ಕಾಡುತ್ತಿರುವ ರೋಗಬಾಧೆ, ಕ್ಷೇತ್ರ ಭೇಟಿ, ರೈತರಿಗೆ ತಾಂತ್ರಿಕ ಸಲಹೆ, ಕೀಟಬಾಧೆ ನಿರ್ವಹಣೆ ಮಾಹಿತಿ ನೀಡಲು ಕೃಷಿ ಅಧಿಕಾರಿಗಳ ಸೇವೆ ಅವಶ್ಯ. ಬೆಳೆ ನಷ್ಟವಾದರೆ ಸಮೀಕ್ಷೆ ನಡೆಸಿ ವರದಿ ನೀಡಲು ಸಿಬ್ಬಂದಿ ಅತ್ಯವಶ್ಯಕವಾಗಿದೆ. ಸಕಾಲದಲ್ಲಿ ಸರ್ಕಾರಕ್ಕೆ ವರದಿ ನೀಡಿದರೆ ಮಾತ್ರ ಸರ್ಕಾರದ ಅನುದಾನವಾಗಲಿ, ಪರಿಹಾರವಾಗಲಿ ಲಭಿಸುತ್ತದೆ. ಕೃಷಿ ಪ್ರಧಾನವಾಗಿರುವ ತಾಲ್ಲೂಕಿನಲ್ಲಿ, ಕೃಷಿ ಇಲಾಖೆ ಸಿಬ್ಬಂದಿ ಕೊರತೆಗೆ ಮುಕ್ತಿ ಕಾಣಿಸುವ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಬೇಕಿದೆ. ಸರ್ಕಾರ ಕೂಡಲೇ ಖಾಲಿ ಇರುವ ಹುದ್ದೆಗಳನ್ನು ಭರ್ತಿಗೊಳಿಸಬೇಕು ಎಂದು ರೈತರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.