ADVERTISEMENT

ಅಂಗನವಾಡಿ ಕೇಂದ್ರಗಳು ರಾಷ್ಟ್ರದ ಬೆನ್ನೆಲುಬು

ಶಾಸಕ ಎನ್‌.ಎಚ್.ಶಿವಶಂಕರರೆಡ್ಡಿ ಅಭಿಮತ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 4:42 IST
Last Updated 10 ಆಗಸ್ಟ್ 2020, 4:42 IST
ಗೌರಿಬಿದನೂರು ಸಮೀಪದ ಕಲ್ಲಿನಾಯಕನಹಳ್ಳಿ ಅಂಗನವಾಡಿ ಕೇಂದ್ರದಲ್ಲಿನ ಸೌಲಭ್ಯಗಳನ್ನು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಹಾಗೂ ಅಧಿಕಾರಿಗಳು ಪರಿಶೀಲಿಸಿದರು
ಗೌರಿಬಿದನೂರು ಸಮೀಪದ ಕಲ್ಲಿನಾಯಕನಹಳ್ಳಿ ಅಂಗನವಾಡಿ ಕೇಂದ್ರದಲ್ಲಿನ ಸೌಲಭ್ಯಗಳನ್ನು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಹಾಗೂ ಅಧಿಕಾರಿಗಳು ಪರಿಶೀಲಿಸಿದರು   

ಗೌರಿಬಿದನೂರು: ಅಂಗನವಾಡಿ‌ ಕೇಂದ್ರಗಳು ಸುಭದ್ರವಾಗಿದ್ದರೆ ಇಡೀ ರಾಷ್ಟ್ರದ ಭವಿಷ್ಯ ಉತ್ತಮವಾಗಿರಲು ಸಹಕಾರಿಯಾಗುತ್ತದೆ ಎಂದು ಶಾಸಕ ಎನ್‌.ಎಚ್.ಶಿವಶಂಕರರೆಡ್ಡಿ ತಿಳಿಸಿದರು.

ತಾಲ್ಲೂಕಿನ ಕಲ್ಲಿನಾಯಕನಹಳ್ಳಿ ಯಲ್ಲಿನ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲಿಸಿ ಮಾತನಾಡಿದರು.

ಮಕ್ಕಳ ಪೂರ್ವ ಪ್ರಾಥಮಿಕ ಹಂತದ ಬೆಳವಣಿಗೆ ಮತ್ತು ಕಲಿಕೆಗೆ ಸಹಕಾರಿಯಾಗುವ ಅಂಗನವಾಡಿ ಕೇಂದ್ರಗಳ ಗೋಡೆ ಮೇಲೆ ಬರೆಸುವ ಅಕ್ಷರಗಳು‌ ಮತ್ತು ಚಿತ್ರಗಳು ಅವರ ಭವಿಷ್ಯಕ್ಕೆ ಆಸರೆಯಾಗುವಂತಿರಬೇಕು. ಜತೆಗೆ ಕೇಂದ್ರಗಳ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿರಿಸಿಕೊಳ್ಳುವ ಮೂಲಕ ಮಕ್ಕಳ ಆರೋಗ್ಯದ ಮೇಲೆ ನಿಗಾವಹಿಸಬೇಕಾಗಿದೆ. ಪ್ರತಿದಿನ ನೀಡುವ ಪೌಷ್ಟಿಕ ಆಹಾರವು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗುವಂತಿರಲಿ ಎಂದು ಹೇಳಿದರು.

ADVERTISEMENT

ಸಿಡಿಪಿಒ ಉಸ್ಮಾನ್ ಮಾತನಾಡಿ, ‘ತಾಲ್ಲೂಕಿನ ಪ್ರತಿ ಅಂಗನವಾಡಿ ‌ಕೇಂದ್ರದಲ್ಲಿಯೂ ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಮತ್ತು ತಾಯಂದಿರಿಗೆ ನೀಡುವ ಪೌಷ್ಟಿಕ ಆಹಾರವನ್ನು ‌ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಕಾರ್ಯಕರ್ತೆಯರಿಂದ ಮಾಡಲಾಗಿತ್ತು. ಜತೆಗೆ ಗ್ರಾಮದಲ್ಲಿನ ಪ್ರತಿ ಮನೆಯಲ್ಲಿ ಕೋವಿಡ್ ಮುಂಜಾಗ್ರತಾ ‌ಕ್ರಮಗಳನ್ನು ಪಾಲಿಸುವಂತೆ ತಿಳಿಸಲಾಗಿತ್ತು. ಕೇಂದ್ರದಲ್ಲಿ‌ ಯಾವುದೇ ಸಮಸ್ಯೆಗಳು ತಲೆದೋರದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದರು.

ಇದೇ ವೇಳೆ ಜಿಲ್ಲಾ ಪಂಚಾಯಿತಿ ಸದಸ್ಯರಾದ ಸರಸ್ವತಮ್ಮ ಅಶ್ವತ್ಥನಾರಾಯಣಗೌಡ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಆರ್.ಲೋಕೇಶ್, ಇಒ ಎನ್.ಮುನಿರಾಜು, ನರೇಗಾ ಎಡಿ ಪಿ.ಚಿನ್ನಪ್ಪ, ಪಿಡಿಒ ಬಸವ ರಾಜ್ ಬಳೂಟಗಿ, ಎಸಿಡಿಪಿಒ ರಾಮ ಚಂದ್ರ, ಮೇಲ್ವಿಚಾರಕಿ ಸುನಿತಾ, ಅಂಗನವಾಡಿ ಕಾರ್ಯಕರ್ತೆ ಮಂಜುಳಾ, ಮುಖಂಡರಾದ ಗಿರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.