ADVERTISEMENT

ಗಿಡಗಳಲ್ಲಿ ನಳನಳಿಸುತ್ತಿದೆ ಸೇಬು

ಮರಳುಕುಂಟೆಯ ಪ್ರಯೋಗಶೀಲ ಕೃಷಿಕ ನಾರಾಯಣಸ್ವಾಮಿ ಅವರ ತೋಟ

ಡಿ.ಎಂ.ಕುರ್ಕೆ ಪ್ರಶಾಂತ
Published 25 ಮೇ 2021, 8:23 IST
Last Updated 25 ಮೇ 2021, 8:23 IST
ಗಿಡದಲ್ಲಿ ಸೇಬು ಹಣ್ಣು
ಗಿಡದಲ್ಲಿ ಸೇಬು ಹಣ್ಣು   

ಚಿಕ್ಕಬಳ್ಳಾಪುರ: ಬಯಲು ಸೀಮೆಯಲ್ಲಿ ಸೇಬು ಬೆಳೆಯುವ ಮೂಲಕ ಗಮನ ಸೆಳೆದಿರುವ ತಾಲ್ಲೂಕಿನ ಮರಳುಕುಂಟೆಯ ಪ್ರಯೋಗಶೀಲ ಕೃಷಿಕ ನಾರಾಯಣಸ್ವಾಮಿ ಅವರ ತೋಟದಲ್ಲಿ ಈಗ ಸೇಬಿನ ಗಿಡಗಳು ನಳನಳಿಸುತ್ತಿವೆ. ಮೈ ತುಂಬಾ ಕಾಯಿಗಳನ್ನು ಹೊದ್ದ ಸೇಬಿನ ಗಿಡಗಳು ನಾರಾಯಣ ಸ್ವಾಮಿ ಅವರ ಪ್ರಯೋಗ ಶೀಲ ಕೃಷಿಗೆ ಸಾಕ್ಷಿಯಾಗಿವೆ.

ಇದೇ ಮೊದಲ ಬಾರಿಗೆ ತಮ್ಮ ತೋಟದಲ್ಲಿ ಬೆಳೆದಿರುವ ಸೇಬು ಹಣ್ಣನ್ನು ನಾರಾಯಣಸ್ವಾಮಿ ಮಾರಾಟ ಮಾಡಲು ಸಹ ಮುಂದಾಗಿದ್ದಾರೆ. ಇದು ಅವರಿಗೆ ದೊರೆತಿರುವ ಎರಡನೇ ಫಸಲು. ಕಳೆದ ವರ್ಷ ಬಂದ ಫಸಲು ಮನೆ ಬಳಕೆಗೆ ಮತ್ತು ನೆಂಟರು ಬಂಧುಬಳಗಕ್ಕೆ ಕೊಡಲು ಸಾಕಾಗಿತ್ತು. ಈ ಬಾರಿ ಮಾರಾಟಕ್ಕೆ ದೊರೆಯುವಷ್ಟು ಸೇಬಿನ ಫಸಲು ಆಗಿದೆ. ಮಾರಾಟಕ್ಕಿಂತ ಸೇಬಿನ ಕೃಷಿಯಲ್ಲಿ ಯಶಸ್ಸು ಸಾಧಿಸಿದ ಖುಷಿ ನಾರಾಯಣಸ್ವಾಮಿ ಅವರ ಮಾತುಗಳಲ್ಲಿ ಇಣುಕುತ್ತದೆ.

ಈಗಾಗಲೇ ಗ್ರಾಮದಲ್ಲಿಯೇ ಒಂದು ಕೆ.ಜಿ.ಗೆ ₹ 150ರಂತೆ ಐದು ಕೆ.ಜಿ ಸೇಬನ್ನು ಮಾರಾಟ ಮಾಡಿದ್ದಾರೆ. ಮೊದಲ ಬಾರಿಗೆ ಗಿಡಗಳಲ್ಲಿ ಸೇಬು ಮೈದುಂಬಿರುವುದನ್ನು ಕಂಡು ಖುಷಿಯಲ್ಲಿ ಇದ್ದಾರೆ. ಅವರ ತೋಟದಲ್ಲಿ 350 ಸೇಬಿನ ಗಿಡಗಳಿದ್ದು 150ಕ್ಕೂ ಹೆಚ್ಚು ಗಿಡಗಳು ಉತ್ತಮವಾಗಿ ಕಾಯಿ ಬಿಟ್ಟಿದೆ. ಗಿಡಗಳಲ್ಲಿ ಕಾಯಿ ಮತ್ತು ಹಣ್ಣುಗಳ ಗೊಂಚಲು ತೊನೆದಾಡುತ್ತಿದೆ.

ADVERTISEMENT

‘ಅಣ್ಣ’ ತಳಿಯ ಸೇಬಿನಗಿಡಗಳಲ್ಲಿ ಒಳ್ಳೆಯ ಇಳುವರಿ ಬಂದಿದೆ. ಒಂದು ಗಿಡದಲ್ಲಿ ಕನಿಷ್ಠ ಎರಡರಿಂದ ಐದು ಕೆ.ಜಿ ಕಾಯಿ ಹಿಡಿದಿದೆ. ಹರಿಮನ್ ಶರ್ಮಾ 99 ತಳಿಯ ಸೇಬಿನ ಗಿಡಗಳಲ್ಲಿ ನಾಲ್ಕೈದು ಕಾಯಿಗಳಿವೆ. ಆದರೆ ಈ ಗಿಡಗಳು ಸಮೃದ್ಧವಾಗಿ ಬೆಳೆದಿವೆ. ಬಹುಶಃ ಮುಂದಿನ ವರ್ಷ ಇವು ಒಳ್ಳೆಯ ಫಸಲು ನೀಡಬಹುದು. ಈ ಎರಡೂ ತಳಿಗಳನ್ನು ಹಿಮಾಚಲಪ್ರದೇಶದಿಂದ ತಂದು ನಾಟಿ ಮಾಡಿದ್ದೆ’ ಎಂದು ನಾರಾಯಣಸ್ವಾಮಿ ತಿಳಿಸುವರು.

‘ಹಿಮಾಚಲಪ್ರದೇಶದ ಗೋವರ್‌ವಿನ್ ನಗರದಲ್ಲಿನ ರಣಜಿತ್ ಬಯೊಟೆಕ್‌ನ ರಾಜೇಶ್ ಅವರು ನನಗೆ ಎಲ್ಲ ರೀತಿಯ ಮಾರ್ಗದರ್ಶನ ನೀಡುತ್ತಿದ್ದಾರೆ. ಸೇಬು ಬೆಳೆ ವಿಚಾರವಾಗಿ ಅವರ ಸಲಹೆ, ಸೂಚನೆಗಳನ್ನು ಪಾಲಿಸುವೆ’ ಎನ್ನುತ್ತಾರೆ.

‘ಈ ಬಾರಿ ಸರಾಸರಿ ಮೂರೂವರೆಯಿಂದ ನಾಲ್ಕು ಕ್ವಿಂಟಲ್ ಸೇಬು ದೊರೆಯಬಹುದು. ಎಲ್ಲವೂ ಕಾಯಿಯಿಂದ ಬಣ್ಣಕ್ಕೆ ತಿರುಗಿವೆ. ನಾವು ಇನ್ನೂ ಮಾರಾಟದ ಬಗ್ಗೆ ಆಲೋಚಿಸಿಲ್ಲ. ಈಗ ಅದು ಸಾಧ್ಯವೂ ಆಗುತ್ತಿಲ್ಲ. ನಮ್ಮ ಗ್ರಾಮದಲ್ಲಿ ಗೊತ್ತಿದ್ದವರಿಗೆ ಮಾರಾಟ ಮಾಡುತ್ತಿದ್ದೇನೆ‘ ಎಂದು ಹೇಳಿದರು.

‘ಫಸಲು ಆರಂಭವಾದ ನಾಲ್ಕೈದು ವರ್ಷಗಳಿಗೆ ಒಳ್ಳೆಯ ಇಳುವರಿ ದೊರೆಯುತ್ತದೆ. ಮತ್ತೆ ಸೀಬಿನ ಗಿಡಗಳನ್ನು ನಾಟಿ ಮಾಡಬೇಕು ಎನ್ನುವ ಆಲೋಚನೆ ಇಲ್ಲ. ಮತ್ತಷ್ಟು ಬೇರೆ ಬೇರೆ ತಳಿಯ ಹಣ್ಣನ್ನು ಬೆಳೆಯುತ್ತಿದ್ದೇನೆ. ಕೃಷಿಯಲ್ಲಿ ಪ್ರಯೋಗ ಮಾಡುವುದು ನನಗೆ ಇಷ್ಟ’ ಎನ್ನುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.