ADVERTISEMENT

ಚಾಲಕನಿಂದ ಹಲ್ಲೆ: ವಿದ್ಯಾರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 2:49 IST
Last Updated 26 ಫೆಬ್ರುವರಿ 2021, 2:49 IST
ಚಿಂತಾಮಣಿಯ ಸಾರಿಗೆ ಸಂಸ್ಥೆಯ ಘಟಕದ ಮುಂದೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು
ಚಿಂತಾಮಣಿಯ ಸಾರಿಗೆ ಸಂಸ್ಥೆಯ ಘಟಕದ ಮುಂದೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು   

ಚಿಂತಾಮಣಿ: ‘ತಾಲ್ಲೂಕಿನ ಕೈವಾರ ಕ್ರಾಸ್ ಬಳಿ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಿರುವ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಚಾಲಕ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿ ನೂರಾರು ವಿದ್ಯಾರ್ಥಿಗಳು ಗುರುವಾರ ಸಂಸ್ಥೆಯ ಘಟಕಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

‘ಹಿರೇಪಾಳ್ಯ ಗ್ರಾಮದ ವಿದ್ಯಾರ್ಥಿ ಮನೋಜ್ ಶಿಡ್ಲಘಟ್ಟದ ಐ.ಟಿ.ಐ ವಿದ್ಯಾರ್ಥಿ. ಗುರುವಾರ ಎಂದಿನಂತೆ ಕಾಲೇಜಿಗೆ ಹೋಗಲು ಕೈವಾರ ಕ್ರಾಸ್ ಬಳಿ ಬಸ್ ನಿಲ್ಲಿಸಲು ಮುಂದೆ ಬಂದು ಕೈ ಸನ್ನೆ ಮಾಡಿದ್ದಾನೆ. ನಿಲ್ದಾಣದಲ್ಲಿ ನಿಲ್ಲಿಸದೆ ಬಹಳ ದೂರ ಹೋಗಿ ನಿಲ್ಲಿಸಿ ಹತ್ತಿಸಿಕೊಂಡ. ಚಾಲಕ ನಂತರ ಬಸ್ಸಿನಲ್ಲಿ ಜಗಳ ತೆಗೆದು ವಿದ್ಯಾರ್ಥಿ ಮೇಲೆ ಕೈಮಾಡಿದ್ದಾರೆ’ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆರೋಪಿಸಿದರು.

ಘಟಕದ ವ್ಯವಸ್ಥಾಪಕ ಅಪ್ಪಿರೆಡ್ಡಿ ರಜೆಯಲ್ಲಿದ್ದ ಕಾರಣ ಇತರೆ ಸಿಬ್ಬಂದಿ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಲು ಮುಂದಾದರು. ವಿದ್ಯಾರ್ಥಿ ಮುಖಂಡರು ಅವರ ಮಾತು ಕೇಳದೆ ಆಕ್ರೋಶ ವ್ಯಕ್ತಪಡಿಸಿ, ಚಾಲಕನ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕು. ಇಂತಹ ಘಟನೆಗಳು ಪದೆ ಪದೇ ನಡೆಯುತ್ತಿವೆ ಎಂದು ಪ್ರತಿಭಟನೆ ಪಟ್ಟುಹಿಡಿದು ಕುಳಿತರು.

ADVERTISEMENT

ನಂತರ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ಅಧಿಕಾರಿಗಳು ಮತ್ತು ವಿದ್ಯಾರ್ಥಿ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ವಿಚಾರಣೆ ನಡೆಸಿ ಕಾನೂನು ರೀತಿ ಚಾಲಕನ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗುವುದು. ಎಲ್ಲ ನಿಲ್ದಾಣಗಳಲ್ಲಿ ಬಸ್‌ಗಳನ್ನು ನಿಲ್ಲಿಸುವಂತೆ ಆದೇಶ ನೀಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.

ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಮೇಲೆ ಈ ರೀತಿ ಘಟನೆಗಳು ನಡೆದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಹಿಂಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.