ADVERTISEMENT

ಪ್ಲಾಸ್ಟಿಕ್ ಬಗ್ಗೆ ಅರಿವು ಮೂಡಿಸಿ

ನಗರದ ಶಾಲಾ ಶಿಕ್ಷಕರುಗಳಿಗೆ ತ್ಯಾಜ್ಯ ನಿರ್ವಹಣೆ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 14:54 IST
Last Updated 19 ಜುಲೈ 2019, 14:54 IST
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಮಾತನಾಡಿದರು.   

ಚಿಕ್ಕಬಳ್ಳಾಪುರ: ‘ಪ್ರತಿಯೊಬ್ಬರು ಮನೆಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಲ್ಲಿಸಿ, ಪರಿಸರ ಸ್ನೇಹಿ ವಸ್ತುಗಳ ಬಳಸುವ ಪಣ ತೊಡಬೇಕಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಲ್ಲಿ ಅರಿವು ಮೂಡಿಸುವ ಮೂಲಕ ಸಮಾಜದಲ್ಲಿ ಪರಿವರ್ತನೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಹೇಳಿದರು.

ನಗರದಲ್ಲಿ ಶುಕ್ರವಾರ ಜಿಲ್ಲಾಡಳಿತ, ನಗರಸಭೆ, ಬೆಂಗಳೂರಿನ ಹಸಿರು ದಳ ಸಂಘಟನೆ ಸಹಯೋಗದಲ್ಲಿಆಯೋಜಿಸಿದ್ದ ನಗರದ ಶಾಲಾ ಶಿಕ್ಷಕರುಗಳಿಗೆ ತ್ಯಾಜ್ಯ ನಿರ್ವಹಣೆ ಕುರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಇಂದು ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವಿನ ಕೊರತೆ ಇದೆ. ಪ್ಲಾಸ್ಟಿಕ್‌ನಿಂದಲೇ ಗಾಳಿ, ನೀರು, ಮಣ್ಣು ಮತ್ತು ವಾತಾವರಣ ಕಲುಷಿತಗೊಂಡು ರೋಗಗಳು ಹರಡುತ್ತಿವೆ. ಜತೆಗೆ ಮಳೆ ಪ್ರಮಾಣ ಕಡಿಮೆಯಾಗಿದೆ. ಇದು ಹೀಗೆ ಮುಂದುವರೆದರೆ ಮುಂದಿನ ಪೀಳಿಗೆ ಹಲವು ಸಮಸ್ಯೆಗಳು ಎದುರಿಸಬೇಕಾಗಿದೆ’ ಎಂದು ತಿಳಿಸಿದರು.

ADVERTISEMENT

‘ಜಿಲ್ಲೆಯಲ್ಲಿ 2007ರ ನಂತರ ಮಳೆಯ ತೀವ್ರ ಕೊರತೆ ಎದುರಾಗಿದೆ. ನೀರಿನ ಬವಣೆ ನೀಗಿಸಿಕೊಳ್ಳಲು ದೂರದಿಂದ ನೀರು ತರುವ ಯೋಜನೆಗಳ ಬಗ್ಗೆ ಮಾತನಾಡಬೇಕಿದೆ. ಆದರೆ ನಮ್ಮಲ್ಲಿಯೇ ಬಿದ್ದ ಮಳೆ ನೀರನ್ನು ಇಂಗು ಗುಂಡಿಗಳನ್ನು ನಿರ್ಮಿಸಿ ಹಿಡಿದಿಟ್ಟುಕೊಳ್ಳಲು ಜಾಗೃತಿ ವಹಿಸುತ್ತಿಲ್ಲ. ಸರಿಯಾಗಿ ಕಸದ ನಿರ್ವಹಣೆ ಮಾಡುತ್ತಿಲ್ಲ. ಪ್ಲಾಸ್ಟಿಕ್ ಮಿತ ಬಳಕೆ ಮಾಡುತ್ತಿಲ್ಲ. ಇದಕ್ಕೆಲ್ಲ ಜನರ ಅರಿವಿನ ಕೊರತೆಯೇ ಕಾರಣ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪ್ಲಾಸ್ಟಿಕ್ ಬಳಕೆ ಮನುಷ್ಯನಿಗೆ ಅರಿವಿಲ್ಲದೇ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡುತ್ತಿದೆ. ಆದ್ದರಿಂದ ಶಿಕ್ಷಕರು ತರಗತಿಗಳಲ್ಲಿ ಪಾಠ ಮಾಡುವಾಗ ಪರಿಸರದ ಸಂರಕ್ಷಣೆ ಕುರಿತು ಮಕ್ಕಳಿಗೆ ಅರಿವು ಮೂಡಿಸುವ ಜತೆಗೆ ಪರಿಸರಕ್ಕೆ ಹಾನಿ ಉಂಟು ಮಾಡುವ ವಸ್ತುಗಳನ್ನು ಬಳಕೆ ಮಾಡದಂತೆ ತಿಳಿ ಹೇಳಬೇಕು’ ಎಂದರು.

‘ದೇಶದ ದೊಡ್ಡ ನಗರಗಳಲ್ಲಿ ಕಸದ ಬೆಟ್ಟ ರಾಶಿಗಳು ಬೀಳುತ್ತಿವೆ. ಅದಕ್ಕೆಲ್ಲ ನಾವೇ ಕಾರಣ ಆದ್ದರಿಂದ ನಾವೇ ಉತ್ತರ ಕಂಡುಕೊಳ್ಳಬೇಕು. ನಮ್ಮ ಸ್ವಾರ್ಥಕ್ಕಾಗಿ ವಸ್ತುಗಳನ್ನು ಬಳಕೆ ಮಾಡಿ ಬೇಕಾಬಿಟ್ಟಿ ಬಿಸಾಕಿ ಪರಿಸರ ಅಧ್ವಾನಗೊಳಿಸುತ್ತಿದ್ದೇವೆ. ಅದರಿಂದ ಮುಂದಿನ ದಿನಗಳಲ್ಲಿ ಆಗುವ ಅಪಾಯದ ಬಗ್ಗೆ ಗಮನ ಹರಿಸುತ್ತಿಲ್ಲ. ಪರಿಣಾಮ, ಜಾನುವಾರಗಳ ಹೊಟ್ಟೆಗೂ ಪ್ಲಾಸ್ಟಿಕ್ ಸೇರಿ ಮರಣ ಹೊಂದುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಬಾಗೇಪಲ್ಲಿಯ ಚಿತ್ರಾವತಿ ನದಿ, ಗೌರಿಬಿದನೂರು ಪಿನಾಕಿನಿ ನದಿಗೆ ತ್ಯಾಜ್ಯ ನೀರು ಹರಿಸಲಾಗುತ್ತಿದೆ. ಚಿಂತಾಮಣಿ ಮಾಳಪಲ್ಲಿ ಕೆರೆಗೆ ನಗರದಲ್ಲಿನ ಹಳೆ ಮನೆಗಳ ಕಟ್ಟಡದ ಅವಶೇಷಗಳನ್ನು ಸುರಿಯಲಾಗುತ್ತಿದೆ. ಬತ್ತಿದ ರಾಮಕುಪ್ಪೆ ಕುಂಟೆಯನ್ನು ಮಣ್ಣು ತುಂಬಿ ಮುಚ್ಚಲಾಗಿದೆ. ಮಳೆ ನೀರು ಇಂಗದ ರೀತಿಯಲ್ಲಿ ಕಟ್ಟಡಗಳನ್ನು ನಿರ್ಮಿಸಿ ಪರಿಸರಕ್ಕೆ ಧಕ್ಕೆ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.

‘ಅನೇಕ ಸಂಘ ಸಂಸ್ಥೆಗಳು, ಸ್ಥಳೀಯ ನಾಗರಿಕರು, ಅಧಿಕಾರಿಗಳ ಸಹಕಾರದೊಂದಿಗೆ ಜಿಲ್ಲೆಯಲ್ಲಿರುವ ಕಲ್ಯಾಣಿಗಳ ಸ್ವಚ್ಛತೆ ಕೈಗೊಳ್ಳಲಾಗುತ್ತಿದೆ. ಈ ಕಾರ್ಯ ನಿರಂತರವಾಗಿ ಮುಂದುವರಿಯಲಿದೆ. ಇನ್ನು ಕೆರೆ- ಕುಂಟೆಗಳ ಸಂರಕ್ಷಣೆಗೂ ಆದ್ಯತೆ ನೀಡಬೇಕಿದೆ’ ಎಂದು ಹೇಳಿದರು. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಣುಕಾ, ನಗರಸಭೆ ಆಯುಕ್ತರಾದ ಹರೀಶ್, ಉಮಾಕಾಂತ್, ಬೆಂಗಳೂರಿನ ಹಸಿರು ದಳದ ಅಶ್ವಿನಿ ಕಶ್ಯಪ್, ಸ್ವಾತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.