ಬಾಗೇಪಲ್ಲಿ ಗಂಗಮ್ಮ ಗುಡಿಯ ಮುಂದೆ ಸಾಗಿಬಂದ ಷೇಕ್ ಹುಸೇನ್ ಷಾ ವಲಿ ಅವರ ಗಂಧಕ್ಕೆ ಕರಗ ಸಮಿತಿ, ದೇವಾಲಯದ ಅರ್ಚಕರು ಆರತಿ ಬೆಳಗಿದರು
ಬಾಗೇಪಲ್ಲಿ: ಪಟ್ಟಣದ ಅವಧೂತ ಹಜರತ್ ಸೈಯ್ಯದನಾ ಷೇಕ್ ಹುಸೇನ್ ಷಾ ಖಾದ್ರಿ ಅವರ ‘ಸಂದಲ್ ಎ ಷರೀಫ್’ (ಗಂಧದ ಪೂಜೆ) ಗಂಧದ ಮೆರವಣಿಗೆಗೆ ಕರಗ ಮಹೋತ್ಸವದ ಸಮಿತಿ, ಗಂಗಮ್ಮ ದೇವಾಲಯದ ಅರ್ಚಕರು ಮಂಗಳಾರತಿ ಬೆಳಗಿದರು. ಹಿಂದೂ, ಮುಸ್ಲಿಮರ ಸೌಹಾರ್ದಕ್ಕೆ ಗಂಧದ ಪೂಜೆ ಸಾಕ್ಷಿ ಆಯಿತು.
ಪಟ್ಟಣದ ಕುಂಬಾರಪೇಟೆ, ಗಂಗಮ್ಮ ಗುಡಿ ರಸ್ತೆಗಳಲ್ಲಿ ಹಾಗೂ ದರ್ಗಾ ಕಟ್ಟಡ, ಆವರಣದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಸಮಾಧಿಯನ್ನು (ಗದ್ದುಗೆಗೆ) ಹೂವುಗಳಿಂದ ಸಿಂಗರಿಸಲಾಗಿತ್ತು.
ಗಂಧದ ಪೂಜೆ ಅಂಗವಾಗಿ ಗುರುವಾರ ರಾತ್ರಿ ಪಟ್ಟಣದ ಗೂಳೂರು ರಸ್ತೆಯ ಮುಜಾವರ್‌ಗಳಾದ ಇಸ್ಮಾಯಿಲ್ ಷಾ ಖಾದ್ರಿ, ಆಸೀಫ್, ಅಂಧ್ರಪ್ರದೇಶದ ಪೆನುಕೊಂಡದ ಬಾಬಾ ಫಕ್ರುದ್ದೀನ್ ದರ್ಗಾದ ಫಕೀರರ ಸಮ್ಮುಖದಲ್ಲಿ ಅಬ್ದುಲ್ ಸಮದ್ ಸಾಬ್ ಹಾಗೂ ಭಾಷಸಾಬ್ ಮನೆಯಿಂದ ಗಂಧದ ಮೆರವಣಿಗೆ ನಡೆಯಿತು.
ಕುಂಬಾರಪೇಟೆ ರಸ್ತೆ, ಡಿವಿಜಿ ಮುಖ್ಯರಸ್ತೆಯಲ್ಲಿ, ಗಂಗಮ್ಮ ಗುಡಿ ರಸ್ತೆಯಲ್ಲಿ ಫಕೀರರು ಡೇರಾ ಹೊಡೆದರು. ಚೂಪಾದ ಸೂಜಿಗಳನ್ನು ವಿವಿಧ ಭಾಗಗಳಲ್ಲಿ ಚುಚ್ಚಿಕೊಂಡು, ಚಾಟಿಗಳಿಂದ ದೇಹಕ್ಕೆ ಹೊಡೆದುಕೊಂಡು ಭಕ್ತಿ ಸಮರ್ಪಿಸಿದರು. ಪಟ್ಟಣದ ಪೀರುಗಳ ಚಾವಡಿ ಮುಂದೆ ಫಕೀರರು ವಿಶೇಷ ಪ್ರಾರ್ಥನೆ ಮಾಡಿದರು.
ಷೇಕ್ ಹುಸೇನ್ ಷಾ ವಲಿ ಅವರ ದರ್ಗಾದಲ್ಲಿನ ಸಮಾಧಿಗೆ ಸುಗಂಧದ್ರವ್ಯಗಳನ್ನು ಹಾಗೂ ಚಾದರ್ ಹೊದಿಸಿದ್ದರು. ತಾಲ್ಲೂಕಿನ ವಿವಿಧ ಕಡೆಗಳಿಂದ, ನೆರೆಯ ಆಂಧ್ರಪ್ರದೇಶದಿಂದ ಭಕ್ತರು ಬಂದಿದ್ದರು. ಕಲ್ಲು ಸಕ್ಕರೆ, ಕಡಲೆ, ಸಿಹಿ ಬೂಂದಿ ನೈವೇದ್ಯ ಅರ್ಪಿಸಿ ಭಕ್ತರಿಗೆ ಹಂಚಿದರು.
ಶುಕ್ರವಾರ ರಾತ್ರಿ ಹುಬ್ಬಳ್ಳಿಯ ಆಫ್ರೀನ್ ತಾಜ್, ಕೋಲಾರದ ಮೊಹಮ್ಮದ್ ತಬ್ರೇಜ್ ಅವರಿಂದ ಕವ್ವಾಲಿ ನಡೆಯಿತು. ಪೆನುಕೊಂಡದ ಡೋಲು ಕಲಾವಿದರ ಶಬ್ದಗಳಿಗೆ ಯುವಕರು ಕುಣಿದು ಸಂಭ್ರಮಿಸಿದರು. ಹುಸೇನುದಾಸಯ್ಯಸ್ವಾಮಿ ಭಕ್ತರಿಂದ ಅನ್ನದಾನ ನಡೆಯಿತು.
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಗದ್ದುಗೆಗೆ ಚಾದರ್ ಸಮರ್ಪಿಸಿದರು. ಹುಸೇನ್ ಷಾ ವಲಿ ಅವರು ಹಿಂದೂ, ಮುಸ್ಲಿಂ ಸಮುದಾಯದವರ ಸೌಹಾರ್ದತೆಯ ಕೊಂಡಿ. ಅವರ ಸರಳತೆ, ಭಕ್ತಿಯ ಸನ್ಮಾರ್ಗದ ಕಡೆಗೆ ನಾವು ಕಲಿಯಬೇಕು. ಪರಸ್ಪರ ಸೌಹಾರ್ದತೆಗೆ, ಸಹಬಾಳ್ವೆಯಿಂದ ಇರಬೇಕು ಎಂದು ತಿಳಿಸಿದರು.
ದರ್ಗಾ ಹಾಗೂ ಜಾಮೀಯಾ ಮಸೀದಿಯವರು ದರ್ಗಾದ ಕಟ್ಟಡ ನಿರ್ಮಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ ಭೂಮಿ ಪೂಜೆ ಮಾಡಲಾಗಿದೆ. ಮುಂದಿನ ವರ್ಷಗಳಲ್ಲಿ ದರ್ಗಾ ಕಟ್ಟಡದ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ವೈ.ನಾರಾಯಣ, ಗುಡಿಬಂಡೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ಕೆ.ಎಂ.ನಯಾಜ್ ಅಹಮದ್, ಸರ್ಕಲ್ ಇನ್‌ಸ್ಪೆಕ್ಟರ್ ಪ್ರಶಾಂತ್ ವರ್ಣಿ, ಪುರಸಭೆ ಅಧ್ಯಕ್ಷ ಎ.ಶ್ರೀನಿವಾಸ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಹನುಮಂತರೆಡ್ಡಿ, ಪುರಸಭೆ ನಾಮನಿರ್ದೇಶಿತ ಸದಸ್ಯ ಕರವೇ ಹರೀಶ್, ಜಾಮೀಯಾ ಮಸೀದಿ ಅಧ್ಯಕ್ಷ ಸಲೀಂ ಅಹಮದ್, ಮಾಜಿ ಅಧ್ಯಕ್ಷ ಜಮೀರ್ ಅಹಮದ್, ಕರಗ ಸಮಿತಿ ಮುಖ್ಯಸ್ಥರಾದ ಎ.ಜಿ.ಸುಧಾಕರ್, ಬಿ.ಆರ್.ನರಸಿಂಹನಾಯ್ಡು, ಸೂರ್ಯನಾರಾಯಣರೆಡ್ಡಿ, ಮರಿಯಪ್ಪ, ಮಂಜುನಾಥ್, ಮುಖಂಡದಾದ ಮನ್ಸೂರ್ ಅಹಮದ್, ಬಿ.ಎಚ್.ಆರೀಫ್, ಜಬೀವುಲ್ಲಾ, ನಿಜಾಮುದ್ದೀನ್, ಜಬೀವುಲ್ಲಾ, ಅನ್ಸರ್, ಬಾಬು, ಸುಭಾನ್ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.