ADVERTISEMENT

ಬಾಗೇಪಲ್ಲಿ: ಗರಿಗೆದರಿದ ಕೃಷಿ ಚಟುವಟಿಕೆ

ಮುಂಗಾರು ಪೂರ್ವ ಹದ ಮಳೆ । ಕೃಷಿ ಇಲಾಖೆ ಸನ್ನದ್ಧ

​ಪ್ರಜಾವಾಣಿ ವಾರ್ತೆ
Published 31 ಮೇ 2025, 5:59 IST
Last Updated 31 ಮೇ 2025, 5:59 IST
ಬಾಗೇಪಲ್ಲಿ ತಾಲ್ಲೂಕಿನ ಗೂಳೂರಿನಲ್ಲಿ ಭೂಮಿ ಉಳುಮೆ
ಬಾಗೇಪಲ್ಲಿ ತಾಲ್ಲೂಕಿನ ಗೂಳೂರಿನಲ್ಲಿ ಭೂಮಿ ಉಳುಮೆ   

ಬಾಗೇಪಲ್ಲಿ: ತಿಂಗಳ ಕೊನೆಯ ದಿನಗಳಲ್ಲಿ ಮುಂಗಾರು ಪೂರ್ವ ಮಳೆ ಹದವಾಗಿ ಸುರಿದಿದ್ದು, ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆ ಗರಿಗೆದರಿದೆ. ರೈತರು ತಮ್ಮ ಹೊಲ, ಗದ್ದೆಗಳಲ್ಲಿ ನೆಲಗಡಲೆ, ಮುಸಕಿನಜೋಳ, ತೊಗರಿ ಬಿತ್ತನೆಗೆ ಭೂಮಿ ಹದ ಮಾಡೊಕೊಳ್ಳುತ್ತಿದ್ದಾರೆ.

ತಾಲ್ಲೂಕಿನಲ್ಲಿ ಯಾವುದೇ ಜಲಮೂಲಗಳಿಲ್ಲ. ಹೀಗಾಗಿ ಮಳೆಯಾಶ್ರಿತ ಬೆಳೆಗಳನ್ನು ಇಲ್ಲಿನ ರೈತರು ಬೆಳೆಯುತ್ತಾರೆ. ಭತ್ತ, ರಾಗಿ, ನೆಲಗಡಲೆ, ಮುಸಕಿನಜೋಳ, ತೊಗರಿ, ನವಣೆಯಂತದ ಧಾನ್ಯಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಮುಂಗಾರು, ಹಿಂಗಾರು ಮಳೆಯಲ್ಲಿ ಮಾತ್ರ ಭೂಮಿಯನ್ನು ಹದ ಮಾಡಿಕೊಂಡು ಬಿತ್ತನೆ ಬೀಜಗಳನ್ನು ಬೆಳೆ ಬೆಳೆಯುತ್ತಾರೆ.  ಕೆಲ ರೈತರು ಕೊಳವೆಬಾವಿ, ತೆರೆದಬಾವಿಗಳ ಮೂಲಕ ವ್ಯವಸಾಯ ಮಾಡುತ್ತಾರೆ.

2025-26 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ 22,892 ಹೆಕ್ಟೇರ್‌ಗಳಲ್ಲಿ ಕೃಷಿಭೂಮಿ ಇದೆ. ನೀರಾವರಿ-1,493, ಖುಷ್ಕಿ–27,399 ಹೆಕ್ಟೇರ್‌ ಏಕದಳ, ದ್ವಿದಳ, ಎಣ್ಣೆ ಕಾಳುಗಳು ಹಾಗೂ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಗುರಿ ಇದೆ.

ADVERTISEMENT

777ಹೆಕ್ಟೇರ್‌ನಲ್ಲಿ ಭತ್ತ, 570 ಹೆಕ್ಟೇರ್‌ನಲ್ಲಿ ರಾಗಿ, 1,39,000 ಹೆಕ್ಟೆರ್‌ನಲ್ಲಿ ಹೈಬ್ರಿಡ್‌ ಮುಸಕಿನ ಜೋಳ, 172 ಹೆಕ್ಟೇರ್‌ನಲ್ಲಿ ಜೋಳ ಬಿತ್ತನೆಯ ಗುರಿ ಹೊಂದಲಾಗಿದೆ.

ದ್ವಿದಳ ಧಾನ್ಯಗಳಾದ ತೊಗರಿ 608 ಹೆಕ್ಟೇರ್‌, ಹುರುಳಿ–347 ಹೆಕ್ಟೇರ್‌‍ಗಳಲ್ಲಿ, ಅವರೆ–210 ಹೆಕ್ಟೇರ್‌‍, ಅಲಸಂದೆ–20 ಹೆಕ್ಟೇರ್‌ ಬಿತ್ತನೆಯ ಗುರಿ ಇದೆ. ಎಣ್ಣೆ ಕಾಳುಗಳ ಪೈಕಿ, ನೆಲಗಡಲೆ 12,175 ಹೆಕ್ಟೇರ್‌‍, ಸೂರ್ಯಕಾಂತಿ 28 ಹೆಕ್ಟೇರ್‌‍, ಸಾಸಿವೆ 3 ಹೆಕ್ಟೇರ್‌, ಎಳ್ಳು 1 ಹೆಕ್ಟೇರ್‌‍ನಲ್ಲಿ, ಹರಳು 10 ಹೆಕ್ಟೇರ್‌‍ಗಳಲ್ಲಿ ಬಿತ್ತನೆ ಮಾಡುವ ಗುರಿ ಇದ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ರಸಗೊಬ್ಬರ ದಾಸ್ತಾನು: ತಾಲ್ಲೂಕಿನಲ್ಲಿ ಮೇ 29ಕ್ಕೆ ಯೂರಿಯಾ 352.7 ಟನ್, ಡಿಎಪಿ 143.05 ಟನ್, ಎಂಓಪಿ 51 ಟನ್, ಎಸ್‍ಎಸ್‍ಪಿ 43.6 ಟನ್, ಕಾಂಪೋಸ್ಟ್ 50.55 ಹಾಗೂ ಎನ್‍ಪಿಕೆ 1185.39 ಟನ್ ಗಳಷ್ಟು ದಾಸ್ತಾನು ಇದೆ.

60 ಕ್ವಿಂಟಾಲ್ ರಾಗಿ, 25 ಕ್ವಿಂಟಾಲ್ ತೊಗರಿ, 3 ಕ್ವಿಂಟಾಲ್ ನವಣೆ ಹಾಗೂ ನೆಲಗಡಲೆ 500 ಕ್ವಿಂಟಾಲ್ ನಷ್ಟು ಹೋಬಳಿವಾರು ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳು ದಾಸ್ತಾನು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಬಾಗೇಪಲ್ಲಿ ತಾಲ್ಲೂಕಿನ ಕಸಬಾ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ದಾಸ್ತಾನು ಪರಿಶೀಲಿಸಿದ ಸಹಾಯಕ ಕೃಷಿ ನಿರ್ದೇಶಕಿ ಜಿ.ಲಕ್ಷ್ಮಿ

ವಾಡಿಕೆಗಿಂತ ಅಧಿಕ ಮಳೆ

ತಾಲ್ಲೂಕಿನಲ್ಲಿ ಈವರೆಗೆ 90.00 ಮಿ ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ 172.3 ಮಿ.ಮೀ ಮಳೆಯಾಗಿದೆ. ಕಸಬಾದಲ್ಲಿ 199.9 ಮಿ ಮೀ ಚೇಳೂರು 131.3 ಗೂಳೂರು 170.8 ಮಿಟ್ಟೇಮರಿ 214.7 ಹಾಗೂ ಪಾತಪಾಳ್ಯ ಹೋಬಳಿಯಲ್ಲಿ 165.2 ಮಿ ಮೀ ಮಳೆ ಆಗಿದೆ. ವಾಡಿಕೆಗಿಂತ ಹೆಚ್ಚು ಮಳೆ ಸುರಿದರೂ ಕೆರೆ ಕುಂಟೆ ಕಾಲುವೆಗಳಲ್ಲಿ ನೀರಿನ ಸಂಗ್ರಹ ಸಾಮಾರ್ಥ್ಯ ಕಡಿಮೆ ಇದೆ. ತಾಲ್ಲೂಕಿನ ಕಸಬಾ ಮಿಟ್ಟೇಮರಿ ಪಾತಪಾಳ್ಯ ಗೂಳೂರು ಚೇಳೂರು ಹೋಬಳಿವಾರು ಐದು ರೈತ ಸಂಪರ್ಕ ಕೇಂದ್ರಗಳು ಇವೆ. 23 ಕೃಷಿ ಸಹಕಾರ ಕೇಂದ್ರಗಳು ಇವೆ.

ಬಿತ್ತನೆ ಬೀಜ ದಾಸ್ತುನು

ತಾಲ್ಲೂಕಿನಲ್ಲಿ ಇದುವರಿಗೂ ವಾಡಿಕೆಗಿಂತ ಹೆಚ್ಚು ಮಳೆ ಆಗಿದೆ. ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಕೃಷಿ ಇಲಾಖೆಯಿಂದ ಎಲ್ಲಾ ಹೋಬಳಿಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ರಾಗಿ ನೆಲಗಡಲೆ ತೊಗರಿ ನವಣೆ ಮುಸಕಿನಜೋಳ ಅಲಸಂದೆ ಬೆಳೆಗಳ ಬಿತ್ತನೆ ಬೀಜಗಳನ್ನು ಸಾಕಾಗುವಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಲಾಗಿದೆ. ಎಲ್ಲಾ ವರ್ಗದ ರೈತರಿಗೆ ಸರ್ಕಾರದ ಮಾರ್ಗಸೂಚಿಯಂತೆ ವಿತರಿಸಲಾಗುವುದು ಎಂದು ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಜಿ.ಲಕ್ಷ್ಮೀ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.