ADVERTISEMENT

ಬಾಗೇಪಲ್ಲಿ: 15 ವರ್ಷವಾದ್ರೂ ಮುಗಿಯದ ಚರಂಡಿ ಕಾಮಗಾರಿ

ಪಿ.ಎಸ್.ರಾಜೇಶ್
Published 13 ಜೂನ್ 2025, 6:09 IST
Last Updated 13 ಜೂನ್ 2025, 6:09 IST
ಬಾಗೇಪಲ್ಲಿ ಪಟ್ಟಣದ ಚಿತ್ರಾವತಿ ಮುಕ್ತಿಧಾಮದ ಬಳಿ ಒಳಚರಂಡಿ ಮಂಡಳಿಯಿಂದ ನಿರ್ಮಿಸಲಾದ ಮಲಿನ ನೀರಿನ ಘಟಕ ಬಳಕೆಗೆ ಬಾರದಾಗಿರುವುದು
ಬಾಗೇಪಲ್ಲಿ ಪಟ್ಟಣದ ಚಿತ್ರಾವತಿ ಮುಕ್ತಿಧಾಮದ ಬಳಿ ಒಳಚರಂಡಿ ಮಂಡಳಿಯಿಂದ ನಿರ್ಮಿಸಲಾದ ಮಲಿನ ನೀರಿನ ಘಟಕ ಬಳಕೆಗೆ ಬಾರದಾಗಿರುವುದು   

ಬಾಗೇಪಲ್ಲಿ: ಪುರಸಭೆ ವ್ಯಾಪ್ತಿಯಲ್ಲಿ ಒಳ ಚರಂಡಿ ವ್ಯವಸ್ಥೆಗಾಗಿ 15 ವರ್ಷಗಳ ಹಿಂದೆಯೇ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ಈ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಕೈಗೊಳ್ಳಲಾಗಿದೆ.

ಒಳಚರಂಡಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಅಗೆದ ಗುಂಡಿಗಳು ಮತ್ತು ರಸ್ತೆಗಳನ್ನು ಇನ್ನೂ ಮುಚ್ಚಿಲ್ಲ ಎಂದು ಒಳಚರಂಡಿ ಮಂಡಳಿ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

23 ವಾರ್ಡ್‍ಗಳಲ್ಲಿ ಒಟ್ಟಾರೆ 35 ಸಾವಿರ ಮಂದಿ ಜೀವನ ಕಟ್ಟಿಕೊಂಡಿದ್ದಾರೆ. ಕಳೆದ 15 ವರ್ಷಗಳ ಹಿಂದೆ ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಆರಂಭಿಸಲಾಯಿತು. ಆದರೆ ಯಾವುದೇ ವಾರ್ಡ್‌ನಲ್ಲೂ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. 

ADVERTISEMENT

ಪಟ್ಟಣದ ಹೊರವಲಯದ ಚಿತ್ರಾವತಿ ಶಾಂತಿಧಾಮದ ರಸ್ತೆಯ ಬಳಿ ಪುರಸಭೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಿಭಾಗದಿಂದ ಪಟ್ಟಣದ ಒಳಚರಂಡಿ ಯೋಜನೆ ಅಡಿ 4.30 ಎಂಎಲ್‍ಡಿ ಸಾಮರ್ಥ್ಯದ ಮಲಿನ ನೀರು ಶುದ್ಧೀಕರಣ ಘಟಕ, 8.00 ಎಂಎಂ ವ್ಯಾಸದ ವೆಟ್‍ವೆಲ್ ಹಾಗೂ ಪಂಪುಮನೆ ನಿರ್ಮಿಸಲಾಗಿದೆ. ಮಲಿನ ನೀರು ಸಂಗ್ರಹಣೆ, ಶುದ್ಧೀಕರಣದ ಪೈಪುಗಳನ್ನು ಅಳವಡಿಸಿ, ಅನೇಕ ವರ್ಷ ಕಳೆದರೂ ಇಂದಿಗೂ ಪಟ್ಟಣದ ಜನರ ಬಳಕೆಗೆ  ಬಾರದಾಗಿದೆ.

ವರ್ಷದ ಹಿಂದೆ ಮಲಿನ ನೀರಿನ ಶುದ್ಧೀಕರಣ ಘಟಕಕ್ಕೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಮಂಡಳಿಯ ಕೋಲಾರ ವಿಭಾಗ ಹಾಗೂ ಚಿಕ್ಕಬಳ್ಳಾಪುರ ಉಪವಿಭಾಗದ ಹಿರಿಯ ಎಂಜಿನಿಯರ್ ಭೇಟಿ ನೀಡಿ, ಕಾಮಗಾರಿ ಪರಿಶೀಲನೆ ನಡೆಸಿದ್ದರು. ಹಿರಿಯ ಎಂಜಿನಿಯರ್‌ಗಳ ಜೊತೆ ಸೇರಿ, ಪಟ್ಟಣದ ಒಂದನೇ ವಾರ್ಡ್‍ನ ಮಿನಿ ಕ್ರೀಡಾಂಗಣದ ಒಳಚರಂಡಿ ಕಾಮಗಾರಿಯನ್ನು ಪ್ರಾಯೋಗಿಕವಾಗಿ ಗುಂಡಿಗಳಲ್ಲಿ, ಪೈಪುಗಳಲ್ಲಿ ಮಲಿನ ನೀರು ಹರಿಯುವ ಬಗ್ಗೆ ವೀಕ್ಷಣೆ ಮಾಡಿದ್ದಾರೆ. ಆದರೆ ಪೈಪುಗಳಲ್ಲಿ ಮಲಿನ ನೀರು ಹರಿಯದ ಬಗ್ಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಂಡಳಿ ಎಂಜಿನಿಯರ್‌ಗಳ ವಿರುದ್ಧ ಅಸಮಧಾನ ವ್ಯಕ್ತಪಡಿದ್ದರು.

ಪಟ್ಟಣದಲ್ಲಿ ಮಲಿನ ನೀರು ಒಳಚರಂಡಿ ಮೂಲಕ ಹರಿಯುವಂತೆ ವ್ಯವಸ್ಥೆ ಮಾಡಲು ಎಷ್ಟು ವೆಚ್ಚವಾಗಲಿದೆ ಮತ್ತು ಈ ಕಾಮಗಾರಿ ಪೂರ್ಣಗೊಳಿಸಲು ಎಷ್ಟು ದಿನಗಳ ಅಗತ್ಯವಿದೆ ಎಂಬ ಬಗ್ಗೆ ಎಂಜಿನಿಯರ್‌ಗಳ ಜೊತೆ ಶಾಸಕ ಸುಬ್ಬಾರೆಡ್ಡಿ ಚರ್ಚಿಸಿದರು. ಕಾಮಗಾರಿ ವೈಜ್ಞಾನಿಕವಾಗಿ ಇರಬೇಕು. ಮಲಿನ ನೀರು ಶುದ್ಧೀಕರಣ ಘಟಕಕ್ಕೆ ಹರಿಯುವಂತೆ ಮಾಡಬೇಕು ಎಂದು ಎಂಜಿನಿಯರ್‌ಗಳಿಗೆ ಸೂಚಿಸಿದ್ದರು. ಆದರೆ, ವರ್ಷಗಳೇ ಕಳೆದರೂ, ಒಳಚರಂಡಿ ವ್ಯವಸ್ಥೆ ಮಾತ್ರ ಇನ್ನೂ ಬಳಕೆ ಬಂದಿಲ್ಲ. 

ಒಳಚರಂಡಿ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಕಾಮಗಾರಿ ಮುಗಿದ ಕೂಡಲೇ ಒಳಚರಂಡಿಯ ಮೂಲಕ ನೀರು ಶುದ್ಧಿಕರಣ ಘಟಕಕ್ಕೆ ಹರಿಸಲಾಗುವುದು. ಇದರಿಂದ ಕಲುಷಿತ ನೀರು ಚಿತ್ರಾವತಿಗೆ, ಕೊರ್ಲಕುಂಟೆಗೆ ಹರಿಯುವುದು ತಪ್ಪುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಚಿತ್ರಾವತಿ ಕೆಳಸೇತುವೆಗೆ ಕಲುಷಿತ ನೀರು ಹರಿಸಿರುವುದು

ಈ ಬಗ್ಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ, ಸಹಾಯಕ ಎಂಜಿನಿಯರ್ ಅವರನ್ನು ಸಂಪರ್ಕಿಸಲು ಯತ್ನಿಸಲಾಯಿತು. ಆದರೆ, ಸಮರ್ಪಕವಾದ ಪ್ರತಿಕ್ರಿಯೆ ನೀಡಿಲ್ಲ. 

ಗುಂಡಿಗಳು ರಸ್ತೆ ಮಧ್ಯೆ ಕಾಲುವೆಯಂತೆ ಅಗೆಯಲಾಗಿದೆ. ವಾಹನಗಳಲ್ಲಿ ಸಂಚರಿಸಲು ಜನರು ನಡೆದಾಡಲು ತೊಂದರೆ ಆಗಿದೆ. ಅಗೆದ ರಸ್ತೆ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚಿಲ್ಲ. ಪಟ್ಟಣದಲ್ಲಿನ ಒಳಚರಂಡಿ ಕಾಮಗಾರಿಗೆ ₹35 ಕೋಟಿ ಹೆಚ್ಚುವರಿ ಅನುದಾನ ನೀಡಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಲಸ ಆಗಿಲ್ಲ 
ಕೆ.ಎ. ಶ್ರೀನಾಥ್ ಪುರಸಭೆ ಸದಸ್ಯ
ಗುಂಡಿಗಳು ರಸ್ತೆ ಮಧ್ಯೆ ಕಾಲುವೆಯಂತೆ ಅಗೆಯಲಾಗಿದೆ. ವಾಹನಗಳಲ್ಲಿ ಸಂಚರಿಸಲು ಜನರು ನಡೆದಾಡಲು ತೊಂದರೆ ಆಗಿದೆ. ಅಗೆದ ರಸ್ತೆ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚಿಲ್ಲ. ಪಟ್ಟಣದಲ್ಲಿನ ಒಳಚರಂಡಿ ಕಾಮಗಾರಿಗೆ ₹35 ಕೋಟಿ ಹೆಚ್ಚುವರಿ ಅನುದಾನ ನೀಡಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಲಸ ಆಗಿಲ್ಲ 
ಕೆ.ಎ. ಶ್ರೀನಾಥ್ ಪುರಸಭೆ ಸದಸ್ಯ
ದ್ವಿಚಕ್ರ ವಾಹನ ಸವಾರರು ಸರ್ಕಸ್ ಮಾಡುವಂತಾಗಿದೆ. ಮಹಿಳೆಯರು ಮಕ್ಕಳು ವೃದ್ಧರು ಸಂಚರಿಸಲು ಆಗುತ್ತಿಲ್ಲ. ಒಳಚರಂಡಿ ಕಾಮಗಾರಿ ನೆಪದಲ್ಲಿ ರಸ್ತೆಗಳು ಗುಂಡಿಗಳನ್ನು ಅಗೆದು ಜನರು ಸಂಚರಿಸದಂತೆ ಮಾಡಲಾಗಿದೆ. ಗುಂಡಿಗಳು ಮತ್ತು ರಸ್ತೆಗಳನ್ನು ಸಮರ್ಪಕವಾಗಿ ಮುಚ್ಚಿಲ್ಲ.
ರಾಜು ವಾಲ್ಮೀಕಿ ನಗರದ ನಿವಾಸಿ 
ಪಟ್ಟಣದ ಒಳಚರಂಡಿ ಕಾಮಗಾರಿಯನ್ನು 5 ಮಂದಿ ಗುತ್ತಿಗೆದಾರರು ಮಾಡಿದ್ದಾರೆ. ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಬಿಲ್ ಮಾಡಲಾಗಿದೆ. ಕೆಲವು ಗುತ್ತಿಗೆದಾರರು ಕಮಿಷನ್ ಪಡೆದು ಕೆಲಸ ಮಾಡಿಲ್ಲ. ಒಳಚರಂಡಿ ಮಂಡಲಿಯ ಅಧಿಕಾರಿಗಳು ಸಹ ಕಮಿಷನ್ ಪಡೆದು ಕೆಲಸ ಮಾಡಿಸಿಲ್ಲ
ಜಿ.ಕೃಷ್ಣಪ್ಪ ಪುರಸಭೆ ಮಾಜಿ ಸದಸ್ಯ 

ಸಾಂಕ್ರಾಮಿಕ ರೋಗದ ಭೀತಿ

ಪಟ್ಟಣದ ವಾಲ್ಮೀಕಿ ಅಂಬೇಡ್ಕರ್ ನಗರ ಕೊತ್ತಪಲ್ಲಿ ಗೂಳೂರು ರಸ್ತೆ ಕುಂಬಾರಪೇಟೆ ಸಂತೇಮೈದಾನ ಆವುಲಮಂದೆ ರಸ್ತೆ ಸೇರಿದಂತೆ ವಿವಿಧೆಡೆ ಒಳಚರಂಡಿ ಕಾಮಗಾರಿ ನಡೆದಿದೆ. ಕಾಮಗಾರಿಗಾಗಿ ರಸ್ತೆಗಳ ಮಧ್ಯೆ ಅಗೆಯಲಾಗಿದೆ. ಆದರೆ ಅದನ್ನು ಸಮರ್ಪಕವಾಗಿ ಜಲ್ಲಿಕಲ್ಲು ಮಣ್ಣು ಹಾಕಿ ಮುಚ್ಚಿಲ್ಲ. ಪೈಪ್‌ಲೈನ್ ಅಳವಡಿಕೆ ಮತ್ತು ಮ್ಯಾನ್‌ಹೋಲ್‌ಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಎತ್ತರದ ಕಡೆಗಳಲ್ಲಿ ಪೈಪ್ ಹಾಕಲಾಗಿದೆ.  ಅಗೆದ ಗುಂಡಿಗಳ ಸುತ್ತ ಜಲ್ಲಿಕಲ್ಲು ಮಣ್ಣು ಹಾಕಿ ಮುಚ್ಚಿಲ್ಲ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಇನ್ನು ಮಳೆಗಾಲದಲ್ಲಿ ಮಳೆ ಮತ್ತು ಚರಂಡಿ ನೀರು ರಸ್ತೆಗಳಲ್ಲಿ ಹರಿಯುತ್ತಿದ್ದು ರಸ್ತೆಯು ಚರಂಡಿಯಂತೆ ಮತ್ತು ಕೆಸರುಗದ್ದೆಯಂತಾಗುತ್ತಿದೆ. ಚರಂಡಿ ನೀರು ಹರಿಯದೆ ನಿಂತಿರುವುದರಿಂದ ದುರ್ವಾಸನೆ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗದ ಹರಡುವಿಕೆ ಭೀತಿ ಹೆಚ್ಚಾಗಿದೆ ಎನ್ನುತ್ತಾರೆ ಸ್ಥಳೀಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.