ADVERTISEMENT

ಕಾಳ್ಗಿಚ್ಚು: ಬೇಸಿಗೆಗೆ ಮುನ್ನವೇ ಬೆಟ್ಟಕ್ಕೆ ಬೆಂಕಿ, ಪರಿಸರಕ್ಕೆ ಹಾನಿ

ಎ.ಎಸ್.ಜಗನ್ನಾಥ್
Published 18 ಜನವರಿ 2021, 2:01 IST
Last Updated 18 ಜನವರಿ 2021, 2:01 IST
ಗೌರಿಬಿದನೂರು ತಾಲ್ಲೂಕಿನ ಅಲಕಾಪುರದ ಬೆಟ್ಟಕ್ಕೆ ಬಿದ್ದಿರುವ‌ ಬೆಂಕಿ
ಗೌರಿಬಿದನೂರು ತಾಲ್ಲೂಕಿನ ಅಲಕಾಪುರದ ಬೆಟ್ಟಕ್ಕೆ ಬಿದ್ದಿರುವ‌ ಬೆಂಕಿ   

ಗೌರಿಬಿದನೂರು: ಪರಿಸರ ಸಂರಕ್ಷಣೆಗಾಗಿ ಅರಣ್ಯ ಇಲಾಖೆ ಹಗಲಿರುಳು ಶ್ರಮಿಸುತ್ತಾ ಗಿಡಗಳನ್ನು ‌ನೆಟ್ಟು ಪೋಷಿಸುವ ಕಾರ್ಯ ಮಾಡುತ್ತಿದ್ದರೆ, ಮತ್ತೊಂದೆಡೆ ಗ್ರಾಮೀಣ‌ ಭಾಗದ ಜನತೆ ಅವೈಜ್ಞಾನಿಕವಾಗಿ ಬೆಟ್ಟದತಪ್ಪಲಿನಲ್ಲಿ ಬೆಳೆದಿರುವ ಗಿಡಗಳಿಗೆ ಬೆಂಕಿ ಇಡುವ ಪ್ರವೃತ್ತಿ ಮನಕಲಕುವಂತಿದೆ.

ಭೂಮಿಯ ಮೇಲಿನ ಮನುಕುಲಕ್ಕೆ ಅರಣ್ಯ ಸಂರಕ್ಷಣೆ ಅತ್ಯಂತ ಮಹತ್ವವಾಗಿದೆ. ಎಲ್ಲೆಡೆ ಅಧಿಕಾರಿಗಳು, ಸ್ವಯಂಸೇವಕರು, ಸಂಘ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಗಿಡಗಳನ್ನು ‌ನೆಟ್ಟು ಪೋಷಿಸುವ ಅಭಿಯಾನಗಳು ಹೆಚ್ಚಾಗಿ ನಡೆಯುವ ಮೂಲಕ ಜನರಲ್ಲಿ ಪರಿಸರದ ಜಾಗೃತಿ ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿವೆ. ಆದರೆ, ಬೇಸಿಗೆಗೆ ಮುನ್ನವೇ ಗ್ರಾಮಾಂತರ ‌ಪ್ರದೇಶಗಳಲ್ಲಿ ಈ ರೀತಿಯಾಗಿ ಕಿಡಿಗೇಡಿಗಳು ಬೆಟ್ಟದ ತಪ್ಪಲಿಗೆ ಬೆಂಕಿ‌ ಹಚ್ಚುವ ಕಾರ್ಯ ಅಧಿಕಾರಿಗಳಿಗೆತಲೆನೋವಾಗಿದೆ.

ಪ್ರತಿ ಮುಂಗಾರು ಆರಂಭದಲ್ಲಿ ಅರಣ್ಯ ಇಲಾಖೆಯು ವಿವಿಧ ಯೋಜನೆಗಳ‌ ಮೂಲಕ ಸರ್ಕಾರಿ ಭೂಮಿ, ಗೋಮಾಳ, ಶಾಲಾ ಆವರಣ, ಬೆಟ್ಟದ ತಪ್ಪಲು, ಮೀಸಲು ಅರಣ್ಯ ಪ್ರದೇಶ ಸೇರಿದಂತೆ ಇತರೆಡೆಗಳಲ್ಲಿ ಗಿಡಗಳನ್ನು ನೆಟ್ಟು ಕಾಲಕಾಲಕ್ಕೆ ನೀರುಣಿಸಿ ಪೋಷಿಸುವ ಕಾರ್ಯ ಮಾಡುತ್ತಿದೆ. ಆದರೆ, ಅದರ ಸಂರಕ್ಷಣೆಯ ಬಗ್ಗೆ ವೈಜ್ಞಾನಿಕ ಪರಿಕಲ್ಪನೆ ಇಲ್ಲದ ಜನತೆ ಅನಾಗರಿಕತೆಯಿಂದ ತಮ್ಮ ಗ್ರಾಮಗಳ ಸಮೀಪವಿರುವ ಬೆಟ್ಟದ ತಪ್ಪಲಿಗೆ ಬೆಂಕಿ ಹಚ್ಚುವ ಮೂಲಕ ಅಧಿಕಾರಿಗಳ ಶ್ರಮವನ್ನು ನೀರಿನಲ್ಲಿ ಹೋಮ ಮಾಡುವಂತೆ ಮಾಡುತ್ತಾರೆ. ಅಲ್ಲದೆ ಸುತ್ತಲಿನ ಪರಿಸರ ಮತ್ತು ಗಾಳಿ ಮಲಿನವಾಗಿ ಜನರಿಗೆ ಆರೋಗ್ಯದ ಸಮಸ್ಯೆಗಳು ಎದುರಾಗುವ ಸಂಭವ ಹೆಚ್ಚಾಗಿದೆ.

ADVERTISEMENT

ಈ ವಿಚಾರವಾಗಿ ವಲಯ ಅರಣ್ಯ ಅಧಿಕಾರಿ ಮಂಜುನಾಥ್ ಅವರನ್ನು ಕೇಳಿದರೆ, ಇಲಾಖೆಯು ಮುಂಗಾರು‌ ಆರಂಭದಿಂದಲೂ ಕೋಟ್ಯಂತರ ರೂಪಾಯಿ ಅನುದಾನದಲ್ಲಿ ಲಕ್ಷಾಂತರ ‌ಗಿಡಗಳನ್ನು ನೆಟ್ಟು ನೀರುಣಿಸಿ ಪೋಷಿಸುವ ಕಾರ್ಯವನ್ನು ಜವಾಬ್ದಾರಿಯುತವಾಗಿ ಮಾಡಿಕೊಂಡು ಬಂದಿರುತ್ತದೆ. ಆದರೆ, ಜನವರಿ ತಿಂಗಳಿನಲ್ಲಿ ತಾಪಮಾನ ಹೆಚ್ಚಾದ ವೇಳೆ ಗ್ರಾಮಾಂತರ ಪ್ರದೇಶಗಳಲ್ಲಿ ಕುರಿ, ಮೇಕೆ ಸೇರಿದಂತೆ ಇನ್ನಿತರ ‌ಜಾನುವಾರುಗಳ ಪೋಷಣೆಗೆಂದು ಬೆಟ್ಟಗಳಿಗೆ ತೆರಳುವ ಹಳ್ಳಿಗರು ಸಂಜೆ ಊರ ಕಡೆಗೆ ಬರುವ ವೇಳೆ ಅನಾವಶ್ಯಕವಾಗಿ ಬೆಟ್ಟದ ತಪ್ಪಲಿನಲ್ಲಿನ ಹುಲ್ಲಿಗೆ ಬೆಂಕಿ‌ ಹಚ್ಚುವ ಪ್ರವೃತ್ತಿಯನ್ನು ರೂಢಿಸಿಕೊಂಡಿದ್ದಾರೆ. ಇದರಿಂದ ತಾಪಮಾನದ ಪ್ರಮಾಣ ಹೆಚ್ಚಾಗಿ ಬೆಂಕಿಯು ಇಡೀ ಬೆಟ್ಟಕ್ಕೆ ಆವರಿಸಿ ಅಲ್ಲಿನ ಗಿಡ ಮರಗಳು ಹಾಗೂ ಪ್ರಾಣಿ, ಪಕ್ಷಿಗಳು ಬೆಂಕಿಗೆ ಆಹುತಿಯಾಗಿಸಂಪೂರ್ಣವಾಗಿ ಸುಟ್ಟು ಕರಕಲಾಗುತ್ತಿವೆ. ಜನರಲ್ಲಿನ ಮೌಢ್ಯದಿಂದ ಪ್ರತಿವರ್ಷ ಈ ಸಮಸ್ಯೆಗಳನ್ನು ಇಲಾಖೆ ಎದುರಿಸುವಂತಾಗಿದೆ.

ಕಾಲಕಾಲಕ್ಕೆ ಇಲಾಖೆಯ‌ ಸಿಬ್ಬಂದಿ ನಿಗಾವಹಿಸಿ ಬೆಟ್ಟದ ತಪ್ಪಲಿನಲ್ಲಿ ಕಾವಲು ಕಾಯುವ ಮೂಲಕ ಇದನ್ನು ನಿಯಂತ್ರಣ ಮಾಡಲು ಮುಂದಾಗಿದ್ದೇವೆ. ಆದರೆ, ಕೆಲವರು ಅನಾಗರಿಕತೆಯಿಂದ ಇಂತಹ ಕೃತ್ಯಕ್ಕೆ ಕೈ ಹಾಕುತ್ತಿದ್ದಾರೆ. ಬೆಟ್ಟಕ್ಕೆ ಬೆಂಕಿ ಬಿದ್ದ ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಅದನ್ನು ನಂದಿಸಲು‌ ಮುಂದಾಗುತ್ತಿದ್ದಾರೆ ಎಂದು ಹೇಳಿದರು.

ಸ್ಥಳೀಯ ಮುಖಂಡ ಕೃಷ್ಣಪ್ಪ ಮಾತನಾಡಿ, ಪ್ರತಿವರ್ಷ ಬೇಸಿಗೆ ಆರಂಭಕ್ಕೂ ಮುನ್ನ ಬೆಟ್ಟದಲ್ಲಿನ ಒಣ ಹುಲ್ಲು ಹೋಗಿ ಹೊಸ ಚಿಗುರು ಬರಲಿ ಎಂದು ಗ್ರಾಮಾಂತರ ಪ್ರದೇಶದ ಜನತೆ ಈ ರೀತಿ ಬೆಟ್ಟಕ್ಕೆ ಬೆಂಕು ಹಚ್ಚುವ ಕಾರ್ಯಕ್ಕೆ ಮುಂದಾಗುತ್ತಾರೆ. ಇವರ ಮೌಢ್ಯತೆ ನಿವಾರಣೆಗಾಗಿ ಅಧಿಕಾರಿಗಳು ಬೆಟ್ಟದ ತಪ್ಪಲಿನಲ್ಲಿರುವ ಗ್ರಾಮಗಳಲ್ಲಿ ಪರಿಸರ ಸಂರಕ್ಷಣೆ ಹಾಗೂ ಬೆಟ್ಟಕ್ಕೆ ಬೆಂಕಿ ಹಚ್ಚುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.