ADVERTISEMENT

ಕನಂಪಲ್ಲಿ ಕೆರೆಗೆ ಶಾಸಕ ಎಂ. ಕೃಷ್ಣಾರೆಡ್ಡಿ ನೇತೃತ್ವದಲ್ಲಿ ಬಾಗಿನ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 2:12 IST
Last Updated 29 ನವೆಂಬರ್ 2020, 2:12 IST
ಚಿಂತಾಮಣಿಯ ಕನಂಪಲ್ಲಿ ಕೆರೆಗೆ ಶಾಸಕ ಎಂ. ಕೃಷ್ಣಾರೆಡ್ಡಿಯಿಂದ ಬಾಗಿನ ಅರ್ಪಣೆ
ಚಿಂತಾಮಣಿಯ ಕನಂಪಲ್ಲಿ ಕೆರೆಗೆ ಶಾಸಕ ಎಂ. ಕೃಷ್ಣಾರೆಡ್ಡಿಯಿಂದ ಬಾಗಿನ ಅರ್ಪಣೆ   

ಚಿಂತಾಮಣಿ: ನಗರಕ್ಕೆ ಕುಡಿಯುವ ನೀರು ಪೂರೈಸುವ ನೈಸರ್ಗಿಕ ಮೂಲ ಕನಂಪಲ್ಲಿ ಕೆರೆ ತುಂಬಿ ಕೋಡಿ ಹರಿದಿರುವುದರಿಂದ ಶನಿವಾರ ಶಾಸಕ ಎಂ. ಕೃಷ್ಣಾರೆಡ್ಡಿ ನೇತೃತ್ವದಲ್ಲಿ ಬಾಗಿನ ಅರ್ಪಿಸಲಾಯಿತು.

ಕೆರೆಯ ಕೋಡಿ ಬಳಿ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆ ನೂರಾರು ಜನರ ಸಮ್ಮುಖದಲ್ಲಿ ಕೃಷ್ಣಾರೆಡ್ಡಿ ದಂಪತಿ ಬಾಗಿನ ಅರ್ಪಿಸಿ, ಗಂಗಾ ಭವಾನಿಗೆ ವಿಶೇಷ ಪೂಜೆ ಸಲ್ಲಿಸಿದರು.

ನಂತರ ಮಾತನಾಡಿದ ಅವರು, ‘ನಾನು ಕ್ಷೇತ್ರದ ಶಾಸಕನಾದ ಮೇಲೆ ಮೂರು ಬಾರಿ ಕೆರೆ ಕೋಡಿ ಹರಿಯುತ್ತಿದೆ. ಕಳೆದ ವರ್ಷ ನಗರದ ಜನತೆ ಕುಡಿಯುವ ನೀರಿಗಾಗಿ ಪರದಾಡಿದ್ದರು. ಈ ವರ್ಷ ಉತ್ತಮ ಮಳೆಯಾಗಿದ್ದು ಕೆರೆ ಕೋಡಿ ಹರಿದಿರುವುದು ಜನತೆಗೆ ಸಂತಸ ತಂದಿದೆ’ ಎಂದರು.

ADVERTISEMENT

ಪ್ರತಿವರ್ಷ ಇದೇ ರೀತಿ ಉತ್ತಮ ಮಳೆ ಬೆಳೆಯಾಗಿ ತಾಲ್ಲೂಕಿನ ಕೆರೆಗಳು ತುಂಬಬೇಕು ಎಂದು ಕ್ಷೇತ್ರದ ಜನರು ಸೇರಿ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ತಹಶೀಲ್ದಾರ್ ಹನುಮಂತರಾಯಪ್ಪ, ಪೌರಾಯುಕ್ತ ಉಮಾಶಂಕರ್, ನಗರಸಭೆ ಸದಸ್ಯರಾದ ಅಗ್ರಹಾರ ಮುರಳಿ, ಮಂಜುನಾಥ್, ಸಿ.ಕೆ. ಶಬ್ಬೀರ್ ಪಾಷಾ, ಗೌಸ್ ಪಾಷಾ, ಮುಖಂಡರಾದ ಗುಡೇ ಶ್ರೀನಿವಾಸರೆಡ್ಡಿ, ಸಿ.ಎನ್. ವೆಂಕಟೇಶ್, ಸಾದಿಕ್, ಡಿ.ವಿ. ಬೈರಾರೆಡ್ಡಿ, ಕೊತ್ತೂರು ಬಾಬು, ಭಾಸ್ಕರ್, ಮಲ್ಲಿಕಾರ್ಜುನಗೌಡ, ನೇತಾಜಿಗೌಡ ಭಾಗವಹಿಸಿದ್ದರು.

ನಗರಸಭೆ ಅಧ್ಯಕ್ಷೆ, ಉಪಾಧ್ಯಕ್ಷೆಯಿಂದ ಬಾಗಿನ: ಮಾಜಿ ಶಾಸಕ ಡಾ.ಎಂ.ಸಿ. ಸುಧಾಕರ್ ಅವರ ಬೆಂಬಲಿಗರಾದ ನಗರಸಭೆ ಅಧ್ಯಕ್ಷೆ ರೇಖಾ ಉಮೇಶ್ ಮತ್ತು ಉಪಾಧ್ಯಕ್ಷೆ ಸುಹಾಸಿನಿ ರೆಡ್ಡಿ ನೇತೃತ್ವದಲ್ಲಿ ನಗರಸಭೆಯಿಂದ ಶುಕ್ರವಾರವೇ ಬಾಗಿನ ಅರ್ಪಿಸಲಾಯಿತು.

ರೇಖಾ ಉಮೇಶ್ ಮಾತನಾಡಿ, ಕಳೆದ 2-3 ವರ್ಷಗಳಿಂದ ಸಮರ್ಪಕವಾಗಿ ಮಳೆಯಾಗದೆ ಕೆರೆಗೆ ನೀರು ಬಂದಿರಲಿಲ್ಲ. ಚಂಡಮಾರುತದ ಪರಿಣಾಮವಾಗಿ ಬಂದ ಮಳೆಯಿಂದ ಕೆರೆ ಕೋಡಿ ಹರಿದಿದೆ. ನಗರದ ಕೆಲವು ವಾರ್ಡ್‌ಗಳ ನೀರಿನ ಸಮಸ್ಯೆ ಪರಿಹಾರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಸದಸ್ಯರಾದ ಮಹಮ್ಮದ್ ಷಫೀಕ್, ಅಕ್ಷಯ ಕುಮಾರ್, ಹರಿ, ಜಗದೀಶ್, ರೆಡ್ಡಪ್ಪ, ಸುಮಿತ್ರಾ ಮಂಜುನಾಥ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎನ್. ನಾಗಿರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.