ADVERTISEMENT

ಮನೆಯಿಂದಲೇ ಆರಂಭವಾಗಲಿ ಸ್ವಚ್ಛತೆ ಪಾಠ

ಗಾಂಧಿ ಜಯಂತಿ ಪ್ರಯುಕ್ತ ಚಿಂತಾಮಣಿಯಲ್ಲಿ ಕಲ್ಯಾಣಿ ಸ್ವಚ್ಛತೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 17:00 IST
Last Updated 2 ಅಕ್ಟೋಬರ್ 2020, 17:00 IST
ಚಿಂತಾಮಣಿ ತಾಲ್ಲೂಕಿನ ಆಲಂಬಗಿರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಲ್ಯಾಣಿ ಸ್ವಚ್ಛತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿ.
ಚಿಂತಾಮಣಿ ತಾಲ್ಲೂಕಿನ ಆಲಂಬಗಿರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಲ್ಯಾಣಿ ಸ್ವಚ್ಛತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿ.   

ಚಿಂತಾಮಣಿ: ಸ್ವಚ್ಛತೆ ಕಾಪಾಡುವುದು ಮಹಾತ್ಮ ಗಾಂಧಿಯವರ ತತ್ವವಾಗಿತ್ತು. ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳಬೇಕು ಎಂಬ ಗಾಂಧೀಜಿ ಅವರ ನೀತಿಯಂತೆ ಪ್ರತಿಯೊಬ್ಬರೂ ತಮ್ಮ ಮನೆಗಳಿಂದಲೇ ಸ್ವಚ್ಛತೆ ಕಾಪಾಡುವ ಪಣ ತೊಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಸಲಹೆ ನೀಡಿದರು.

ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ತಾಲ್ಲೂಕಿನ ಐತಿಹಾಸಿಕ ಕ್ಷೇತ್ರ ಆಲಂಬಗಿರಿಯಲ್ಲಿ ಶುಕ್ರವಾರ ಗಾಂಧಿ ಜಯಂತಿ ಅಂಗವಾಗಿ ಕಲ್ಯಾಣಿ ಸ್ವಚ್ಛತೆ ಮತ್ತು ಗಿಡನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲೂ ಸ್ವಚ್ಛತೆ ನಿರ್ವಹಿಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಆಯಾ ಗ್ರಾಮಗಳ ಜನರು ಜತೆಯಾಗುತ್ತಿದ್ದಾರೆ ಎಂದರು.

ADVERTISEMENT

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್ ಮಾತನಾಡಿ ಸ್ವಚ್ಛತೆ ನಿತ್ಯೋತ್ಸವವಾದರೆ ಜನ ಆರೋಗ್ಯವಂತರಾಗಿರುತ್ತಾರೆ. ಸ್ವಚ್ಛತೆ ಇದ್ದಲ್ಲಿ ಆರೋಗ್ಯವಿರುತ್ತದೆ. ಗುಣಮಟ್ಟದ ಆಹಾರ, ಶುದ್ಧ ಕುಡಿಯುವ ನೀರಿನ ಸೇವನೆಯಿಂದ ಆರೋಗ್ಯವಂತರಾಗಿರಲು ಸಾಧ್ಯ ಎಂದರು.

ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕಿ ಕವಿತಾ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುರೇಶ್, ಕೃಷಿ ಇಲಾಖೆಯ ಪುಷ್ಪ, ನರೇಗಾ ಯೋಜನೆಯ ಅರುಣ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ನಾಗೇಶ್, ಶಿವಣ್ಣ, ಸುರೇಶ್, ದೇವರಾಜ್, ಯಾದವ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.