ಚಿಕ್ಕಬಳ್ಳಾಪುರ: ‘ನನ್ನ ಸಮಾಧಾನದ ದಿನಗಳು ಮುಗಿದವು. ಇನ್ನೇನಿದ್ದರೂ ಯುದ್ಧ’– ಇದು ಸಂಸದ ಡಾ.ಕೆ.ಸುಧಾಕರ್ ಬುಧವಾರ ಗುಡುಗಿದ ಪರಿ. ‘ಸಮಾಧಾನದ ದಿನಗಳು’ ಎನ್ನುವ ಸಂಸದರ ಮಾತುಗಳು ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆ ನೆನಪಿಸುತ್ತದೆ.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ವಿಚಾರವಾಗಿ ಡಾ.ಕೆ.ಸುಧಾಕರ್ ಅವರ ಎದುರಾಳಿಗಳು ಆಡಿದ ರಾಜಕೀಯ ಆಟಗಳು ಆಗ ಬಿಜೆಪಿಯ ಆಂತರಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದವು. ಆ ವೈಮನಸ್ಸು ಜಿಲ್ಲಾ ಬಿಜೆಪಿ ಅಧ್ಯಕ್ಷರ ನೇಮಕದ ಮೂಲಕ ಈಗ ಸ್ಫೋಟಗೊಂಡಿದೆ. ಮುಖಂಡರ ನಡುವೆ ಅಂದಿನಿಂದ ಇದ್ದ ಬೇಗುದಿ ಈಗ ಬಹಿರಂಗವಾಗಿದೆ.
ಅಧ್ಯಕ್ಷರ ಆಯ್ಕೆಯು ಸುಧಾಕರ್ ಮತ್ತು ಪಕ್ಷದ ಒಳಗಿರುವ ಅವರ ವಿರೋಧಿಗಳ ನಡುವಿನ ಪ್ರತಿಷ್ಠೆಯ ಮೇಲಾಟವಾಗಿದೆ.
‘ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಡಾ.ಕೆ.ಸುಧಾಕರ್ ಅವರಿಗೆ ಪರ್ಯಾಯವಾಗಿ ನಾಯಕರನ್ನು ಬಿಜೆಪಿ ನಾಯಕರೇ ಬೆಳೆಸುತ್ತಿದ್ದಾರೆ’ ಎಂದು ಲೋಕಸಭೆ ಚುನಾವಣೆಯ ಸಮಯದಲ್ಲಿ ಸುಧಾಕರ್ ಬೆಂಬಲಿಗರೇ ಮಾತನಾಡಿದ್ದರು. ಅಲ್ಲದೆ ಇಂದಿಗೂ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮೂಲ ಬಿಜೆಪಿಯ ಕೆಲವು ಮುಖಂಡರು ಸುಧಾಕರ್ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ. ಇವರೆಲ್ಲರೂ ಸುಧಾಕರ್ ವಿರೋಧಿ ಬಣದಲ್ಲಿದ್ದರು.
ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರು ತಮ್ಮ ಪುತ್ರ ಅಲೋಕ್‌ಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಕೇಳಿದ್ದರು. ಈ ವೇಳೆ ಸಂದೀಪ್ ರೆಡ್ಡಿ, ಬಾಗೇಪಲ್ಲಿ ಬಿಜೆಪಿ ಮುಖಂಡ ಸಿ.ಮುನಿರಾಜು, ವಿಶ್ವನಾಥ್ ಜೊತೆ ಗುರುತಿಸಿಕೊಂಡಿದ್ದರು. ವಿಶ್ವನಾಥ್ ಅವರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರ‍್ಯಾಲಿ ನಡೆಸಿದ್ದರು. ಚಿಕ್ಕಬಳ್ಳಾಪುರಕ್ಕೆ ರ‍್ಯಾಲಿ ಬಂದ ವೇಳೆ ಅವರ ಜೊತೆ ಸಂದೀಪ್ ರೆಡ್ಡಿ ವೇದಿಕೆ ಸಹ ಹಂಚಿಕೊಂಡಿದ್ದರು. ಚಿಕ್ಕಬಳ್ಳಾಪುರದ ಬಿಜೆಪಿ ಮತ್ತು ಕೆಲವು ಜೆಡಿಎಸ್ ಮುಖಂಡರು ಎಸ್.ಆರ್.ವಿಶ್ವನಾಥ್ ಜೊತೆ ತಿರುಪತಿ ಪ್ರವಾಸ ನಡೆಸಿದಾಗ ಅವರ ಜೊತೆ ಸಂದೀಪ್ ರೆಡ್ಡಿ ಸಹ ತೆರಳಿದ್ದರು. ಇದು ಸಂದೀಪ್ ರೆಡ್ಡಿ ಅವರನ್ನು ಸುಧಾಕರ್ ವಿರೋಧಿ ಬಣದಲ್ಲಿ ಗುರುತಿಸುವಂತೆ ಆಯಿತು.
ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಅವರ ಸಿಂಡಿಕೇಟ್ ಡಾ.ಕೆ.ಸುಧಾಕರ್‌ಗೆ ಟಿಕೆಟ್ ನೀಡಲು ಅಡ್ಡಿಯಾಗಿದೆ ಎನ್ನುವ ಮಾತು ಆಗ ಚಿಕ್ಕಬಳ್ಳಾಪುರದಲ್ಲಿತ್ತು. ನಂತರ ಡಾ.ಕೆ.ಸುಧಾಕರ್ ಟಿಕೆಟ್ ಪಡೆದಾಗಲೂ ವಿರೋಧಿ ಬಣವು ಅವರ ಪರವಾಗಿ ಕೆಲಸ ಮಾಡುತ್ತದೆಯೇ, ಇಲ್ಲವೆ, ಒಂದು ವೇಳೆ ಪ್ರಚಾರ ನಡೆಸಿದರೂ ಅದು ಮೇಲ್ನೋಟಕ್ಕೆ ಮಾತ್ರವೇ ಎನ್ನುವ ಚರ್ಚೆ ನಡೆದಿತ್ತು. ಸಂದೀಪ್ ರೆಡ್ಡಿ ಪೋಶೆಟ್ಟಹಳ್ಳಿಯಲ್ಲಿ ರ‍್ಯಾಲಿ ಸಹ ಸಂಘಟಿಸಿದ್ದರು.
ಹೀಗೆ ಲೋಕಸಭೆ ಚುನಾವಣೆ ಸಮಯದಲ್ಲಿ ಮುಖಂಡರ ನಡುವೆ ಮೂಡಿದ್ದ ವೈಮನಸ್ಸು ಈಗ ಬಹಿರಂಗವಾಗಿದೆ.
ವಿಧಾನಸಭೆ ಟಿಕೆಟ್ ಆಕಾಂಕ್ಷಿಯೇ ಸಂದೀಪ್ ರೆಡ್ಡಿ?: ಬಿಜೆಪಿ ಮುಖಂಡ ಸಂದೀಪ್ ರೆಡ್ಡಿ ಹಲವು ವರ್ಷಗಳಿಂದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಶಾಲೆಗಳ ಅಭಿವೃದ್ಧಿ, ಬಡವರಿಗೆ ನೆರವು ಹೀಗೆ ವಿವಿಧ ಚಟುವಟಿಕೆಗಳನ್ನು ತಮ್ಮ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಮೂಲಕ ನಡೆಸುತ್ತಿದ್ದರು.
ಅವರು ಮುಂದಿನ ದಿನಗಳಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಾರೆ ಎನ್ನುವ ಮಾತುಗಳು ಸಹ ಅವರ ಬೆಂಬಲಿಗರಿಂದ ಕೇಳಿ ಬರುತ್ತಿದ್ದವು. ಈಗ ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಂದೀಪ್ ರೆಡ್ಡಿ ಅವರಿಗೆ ಬಿಜೆಪಿ ಟಿಕೆಟ್ ದೊರೆಯುತ್ತದೆ ಎನ್ನುವ ಚರ್ಚೆಗಳು ಸಹ ಗರಿಗೆದರಿವೆ.
ಬಿಜೆಪಿ ಮುಖಂಡ ಮೋಹನ್ ಮುರುಳಿ, ‘ಬಿಜೆಪಿಯನ್ನು ಜಿಲ್ಲೆಯಲ್ಲಿ ಸಂಘಟಿಸಲು ದೇವರು ಹೆಚ್ಚಿನ ಶಕ್ತಿ ಕೊಟ್ಟು ಮುಂದಿನ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಶಾಸಕರಾಗಲೆಂದು ಆಶಿಸುತ್ತೇನೆ’ ಎಂದು ಫೇಸ್‌ಬುಕ್‌ನಲ್ಲಿ ಸಂದೀಪ್ ರೆಡ್ಡಿ ಅವರಿಗೆ ಶುಭಕೋರಿದ್ದಾರೆ. ಹೀಗೆ ಸಂದೀಪ್ ರೆಡ್ಡಿ ನೇಮಕದ ಮೂಲಕ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿಯಲ್ಲಿ ‘ನಾಯಕತ್ವ’ದ ವಿಚಾರವೂ ಚರ್ಚೆಗೆ ಒಳಗಾಗಿದೆ.
ಡಾ.ಕೆ.ಸುಧಾಕರ್ ಅವರ ‘ಕಟ್ಟಾ’ ಬೆಂಬಲಿಗರು ನೂತನ ಜಿಲ್ಲಾ ಅಧ್ಯಕ್ಷರ ಸಂಭ್ರಮಾಚರಣೆಯಿಂದ ದೂರವೇ ಉಳಿದಿದ್ದಾರೆ. ಸಂದೀಪ್ ರೆಡ್ಡಿ ಅವರಿಗೆ ಎಲ್ಲರನ್ನು ವಿಶ್ವಾಸಕ್ಕೆ ಪಡೆಯುವ ಸವಾಲು ಪ್ರಮುಖವಾಗಿದೆ.
ಮತ್ತೊಂದು ಕಡೆ ಜಿಲ್ಲೆಯಲ್ಲಿ ಬಿಜೆಪಿಯ ಮೂಲ ಕಾರ್ಯಕರ್ತರ ಜೊತೆಗೆ ಡಾ.ಕೆ.ಸುಧಾಕರ್ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವವರು ಸಂದೀಪ್ ರೆಡ್ಡಿ ಅವರಿಗೆ ಸಹಕಾರ ನೀಡುವುದು ಖಚಿತ ಎನ್ನುತ್ತವೆ ಪಕ್ಷದ ಮೂಲಗಳು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮತ್ತು ಚಟುವಟಿಕೆಯ ವಿಚಾರವಾಗಿ ಸುಧಾಕರ್ ಅವರೇ ಮುಂಚೂಣಿಯಲ್ಲಿ ಇರುತ್ತಿದ್ದರು. ಆದರೆ ಈಗ ಅವರ ಬಹಿರಂಗ ಅಸಮಾಧಾನ ನಾನಾ ರೀತಿಯ ಚರ್ಚೆಗೆ ಕಾರಣವಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಸಂದೀಪ್ ರೆಡ್ಡಿಗೆ ದೊರೆಯುವುದೇ ಟಿಕೆಟ್? ಸಾಮಾಜಿಕ ಜಾಲತಾಣಗಳಲ್ಲಿ ಕಾವೇರಿದ ಜಟಾಪಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.