ADVERTISEMENT

ಮಹಿಳೆಯರಿಂದ ಬೋಗಿ ಪೂಜೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 4:12 IST
Last Updated 15 ಜನವರಿ 2021, 4:12 IST
ಬಾಗೇಪಲ್ಲಿ ಪಟ್ಟಣದ ವಾಲ್ಮೀಕಿ ನಗರದಲ್ಲಿ ಬೋಗಿಗೆ ಮಹಿಳೆಯರು ಪೂಜೆ ಸಲ್ಲಿಸುತ್ತಿರುವುದು
ಬಾಗೇಪಲ್ಲಿ ಪಟ್ಟಣದ ವಾಲ್ಮೀಕಿ ನಗರದಲ್ಲಿ ಬೋಗಿಗೆ ಮಹಿಳೆಯರು ಪೂಜೆ ಸಲ್ಲಿಸುತ್ತಿರುವುದು   

ಬಾಗೇಪಲ್ಲಿ: ಆಕಾಶದೆತ್ತರಕ್ಕೆ ಹತ್ತಿ ಉರಿದ ಬೋಗಿ ಬೆಂಕಿಯ ಜ್ವಾಲೆಗಳು, ಜ್ವಾಲೆಗಳ ಸುತ್ತಲೂ ಕುಣಿಯುತ್ತಿದ್ದ ಹೆಂಗಸರು, ಮಕ್ಕಳ ಆಟೋಟಗಳು, ಪ್ರತಿ ಮನೆಯೂ ಸಿಂಗರಿಸಿದ್ದ ರಂಗೋಲೆಗಳು, ಉತ್ಸಾಹ-ಉಲ್ಲಾಸಗಳು ನೋಡಲು ಎರಡು ಕಣ್ಣುಗಳು ಸಾಲದು ಎಂಬಂತೆ ಪ್ರತಿ ವರ್ಷದಂತೆ ಈ ಬಾರಿಯೂ ಪಟ್ಟಣದ ವಾಲ್ಮೀಕಿ ನಗರದಲ್ಲಿ ಸಂಕ್ರಾಂತಿ ಸಂಭ್ರಮ ನೋಡುಗರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಕೆ.ಎಂ.ನಯಾಜ್ ಅಹ್ಮದ್ರವರ ಮಾರ್ಗದರ್ಶನದಲ್ಲಿ ಕಳೆದ ಒಂದು ದಶಕದಿಂದಲೂ ಅಧಿಕ ಕಾಲದಿಂದ ನಡೆಯುತ್ತಿರುವ ಈ ಬೋಗಿ ಹಬ್ಬಕ್ಕೆ ಪಟ್ಟಣದ ನೂರಾರು ಜನರು ಸಾಕ್ಷಿಯಾಗುತ್ತಿದ್ದಾರೆ. ನೆಲಮೂಲ ಸಂಸ್ಕೃತಿಯ ಹಬ್ಬವಾಗಿರುವ ಸಂಕ್ರಾಂತಿ ನಿಜವಾದ ಸಂಭ್ರಮದ ರೂಪ ಪಡೆದುಕೊಂಡಿದೆ.

ಬೆಳಗ್ಗಿನಿಂದಲೇ ವಾಲ್ಮೀಕಿ ನಗರದಲ್ಲಿ ಹಬ್ಬದ ವಾತಾವರಣ ಬಿರುಸುಗೊಂಡಿತ್ತು. ನಗರದ ಎಲ್ಲಾ ಬೀದಿಗಳಲ್ಲಿಯೂ ಶುಭ್ರಗೊಳಿಸಿ, ಸಗಣಿ ಸಾರಿಸಿ, ರಂಗೋಲೆ ಬಿಡಿಸಲಾಗಿತ್ತು. ಪ್ರತಿ ಮನೆಯ ಮುಂದೆಯೂ ಒಲೆಗಳನ್ನು ಇರಿಸಿ ಪೊಂಗಲ್ ತಯಾರಿಸಲಾಯಿತು. ಕಬ್ಬು, ಅವರೆ, ಎಳ್ಳು-ಬೆಲ್ಲಗಳನ್ನು ಸಂತೋಷದಿಂದಲೇ ಹಂಚತೊಡಗಿದ್ದ ದೃಶ್ಯಗಳು ಕಂಡು ಬಂದಿತ್ತು.

ADVERTISEMENT

ರಸ್ತೆ ಬದಿಗಳಲ್ಲಿ ಬೀದಿ ವ್ಯಾಪಾರ ಮಾಡುವವರು, ಸಣ್ಣಪುಟ್ಟ ಕೆಲಸಗಳಿಂದ ಜೀವನ ಸಾಗಿಸುವವರು, ಉಳಿದಂತೆ ಬಹುಪಾಲು ಕೃಷಿ, ಕೂಲಿ ಕಾರ್ಮಿಕರೇ ತುಂಬಿರುವ ಈ ವಾಲ್ಮೀಕಿ ನಗರದಲ್ಲಿ ನಡೆಯುವ ಈ ದೇಸೀ ಸಾಂಸ್ಕೃತಿಕ ಹಬ್ಬದಲ್ಲಿ ಸಂತೋಷಕ್ಕೆ ಅಷ್ಟೇ ಸ್ಥಳವಿದೆ. ಜಾತಿ, ಧರ್ಮ, ಭಾಷೆಗಳು ಎಂದಿಗೂ ಕಾಣಿಸಿಲ್ಲ. ಹಬ್ಬದ ಮೂಲಕ ಸಾಂಸ್ಕೃತಿಕ ಬೆಸುಗೆ ಮಾತ್ರ ಮೇಳೈಸಿಕೊಂಡು ಬಂದಿದೆ.

ಸಂಜೆ ಬಣ್ಣ-ಬಣ್ಣಗಳಿಂದ ಅಲಂಕೃತಗೊಂಡ ಚಿತ್ತಾರಗಳ ರಂಗೋಲೆಗಳ ವಿಜೇತ ಮಹಿಳೆಯರಿಗೆ ಪ್ರಾಧ್ಯಾಪಕ ಡಾ.ಕೆ.ಎಂ.ನಯಾಜ್ ಅಹ್ಮದ್ ಬಹುಮಾನಗಳನ್ನು ವಿತರಿಸಿದರು. ಇದರೊಂದಿಗೆ ರಂಗೋಲೆ ಬಿಡಿಸಿದ ಎಲ್ಲರಿಗೂ ಸಮಾಧಾನ ಬಹುಮಾನಗಳನ್ನು ನೀಡಲಾಯಿತು.

ಮುಖಂಡರಾದ ಚನ್ನರಾಯಪ್ಪ, ಪುರಸಭಾ ಸದಸ್ಯೆ ಸರೋಜಮ್ಮ, ಮುಖಂಡರಾದ ರಾಜು, ಮನೇರಿ ಶ್ರೀನಿವಾಸ್, ಮಡಿವಾಳ ಮಾಚಿದೇವ ಸಂಘದ ಬಿ.ಎಸ್.ಸುರೇಶ್,
ಅರ್ಜುನ್, ಶ್ರೀನಿವಾಸ್, ವಿಜಯ್ ಕುಮಾರ್, ಬಾಬು, ಗುಲಾಬ್, ನಂದೀಶ್, ತಜ್ಮ್ಲ್ ಬಾಷ, ನರೇಶ್, ನಾಗೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.