ADVERTISEMENT

ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹ

ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ 22 ಜನರ ದೃಷ್ಟಿಗೆ ಹಾನಿ ಮಾಡಿದ ಆರೋಪ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 14:38 IST
Last Updated 5 ನವೆಂಬರ್ 2019, 14:38 IST
ಕರವೇ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು.
ಕರವೇ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು.   

ಚಿಕ್ಕಬಳ್ಳಾಪುರ: ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 22 ಅಮಾಯಕ, ಬಡ ರೋಗಿಗಳನ್ನು ಶಾಶ್ವತವಾಗಿ ಕುರುಡರನ್ನಾಗಿಸಿದ ವೈದ್ಯರು, ಸಿಬ್ಬಂದಿ, ಔಷಧಿ ಸರಬರಾಜುದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆರ್.ಲೋಕೇಶ್, ‘ಕಳೆದ ಜುಲೈನಲ್ಲಿ ಮಿಂಟೋ ಆಸ್ಪತ್ರೆಯಲ್ಲಿ ನಡೆದ ಕಣ್ಣಿನ ಪೊರೆ ತೆಗೆಯುವ ಚಿಕಿತ್ಸೆ ವೇಳೆ ವೈದ್ಯರ ನಿರ್ಲಕ್ಷ್ಯದಿಂದ 22 ಜನರು ಶಾಶ್ವತವಾಗಿ ತಮ್ಮ ದೃಷ್ಟಿ ಕಳೆದುಕೊಂಡಿದ್ದಾರೆ. ಈ ಎಲ್ಲರೂ ನತದೃಷ್ಟರು ಕಡುಬಡವರಾಗಿದ್ದಾರೆ. ಅವರ ಭವಿಷ್ಯವೇ ಅಂಧಕಾರದಲ್ಲಿ ಮುಳುಗಿಹೋಗಿದೆ’ ಎಂದು ಹೇಳಿದರು.

‘ದೃಷ್ಟಿ ಕಳೆದುಕೊಂಡವರ ಪೈಕಿ ಬಹುತೇಕರು ದುಡಿದ ಹಣದಿಂದಲೇ ಅವರ ಸಂಸಾರ ನಡೆಯಬೇಕಿತ್ತು. ಆದರೆ ಈ ಅನಿರೀಕ್ಷಿತ ಆಘಾತದಿಂದ ಅವರೆಲ್ಲರ ಕುಟುಂಬಗಳೂ ದಾರಿ ಕಾಣದೆ ಪರಿತಪಿಸುವಂತಾಗಿದೆ. ಇದನ್ನು ಖಂಡಿಸಿ ನಮ್ಮ ಕಾರ್ಯಕರ್ತರು ಪ್ರತಿಭಟನೆ ನಡೆಸಿದರೆ ಆಸ್ಪತ್ರೆ ಆಡಳಿತ ಮಂಡಳಿ ಮುಖ್ಯಸ್ಥರು ಸ್ಥಳಕ್ಕೆ ಬಾರದೆ ಜವಾಬ್ದಾರಿಯಿಂದ ನುಣುಚಿಕೊಂಡಿರುವುದು ಖಂಡನೀಯ’ ಎಂದು ತಿಳಿಸಿದರು.

ADVERTISEMENT

‘ಇಡೀ ನಾಗರಿಕ ಸಮುದಾಯ ಬೆಚ್ಚಿ ಬೀಳಿಸುವಂಥ ಈ ಘಟನೆಗೆ ಮಿಂಟೋ ವೈದ್ಯರು ತಲೆತಗ್ಗಿಸಬೇಕಿತ್ತು. ಆದರೆ ತಮ್ಮ ಮೇಲಿರುವ ಗಂಭೀರ ಆರೋಪದಿಂದ ತಪ್ಪಿಸಿಕೊಳ್ಳಲು ಮಿಂಟೋ ಆಸ್ಪತ್ರೆ ಮುಖ್ಯಸ್ಥರು, ಕಣ್ಣು ಕಳೆದ ವೈದ್ಯರು ಷಡ್ಯಂತ್ರವನ್ನು ಹೂಡಿ ಕಿರಿಯ ವಿದ್ಯಾರ್ಥಿಗಳನ್ನು ಎತ್ತಿಕಟ್ಟಿ ಅವರನ್ನು ಧರಣಿಗೆ ಕೂರಿಸಿದ್ದಾರೆ. ಯಾವ ತಪ್ಪನ್ನೂ ಮಾಡದೆ, ಕಣ್ಣು ಕಳೆದುಕೊಂಡ ಅಮಾಯಕ ಬಡವರ ರಕ್ಷಣೆಗೆ ಸರ್ಕಾರ ಮುಂದಾಗಬೇಕಿದೆ’ ಎಂದು ಆಗ್ರಹಿಸಿದರು.

‘ದೃಷ್ಟಿ ಕಳೆದುಕೊಂಡವರಿಗೆ ಸರ್ಕಾರ ಕನಿಷ್ಠ ₹10 ಲಕ್ಷ ಪರಿಹಾರ ನೀಡಬೇಕು. ಈ ಗಂಭೀರ ಪ್ರಕರಣ ಕುರಿತಂತೆ ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆಗೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಈ ಪ್ರಕರಣದಲ್ಲಿ ಔಷಧಿ ತಯಾರಿಕಾ ಕಂಪನಿಯೂ ಶಾಮೀಲಾಗಿದ್ದರೆ ಅದರ ವಿರುದ್ಧವೂ ಕ್ರಮ ಕೈಗೊಂಡು, ಆ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಕರವೇ ಕಾರ್ಯಕರ್ತರ ಮೇಲೆ ಹೂಡಿರುವ ಸುಳ್ಳು ದೂರುಗಳನ್ನು ಹಿಂದಕ್ಕೆ ಪಡೆಯಬೇಕು’ ಎಂದು ಒತ್ತಾಯಿಸಿದರು. ‌

ಕರವೇ ಪದಾಧಿಕಾರಿಗಳಾದ ಮಂಜುನಾಥ್ ಗೌಡ, ಆರ್.ವಿಜಯ್ ಕುಮಾರ್, ವಿ.ಎಂ.ನಾರಾಯಣ ಸ್ವಾಮಿ, ಮಂಜುಳಾ, ನಾಗರತ್ನಮ್ಮ, ಅರುಣ್, ಗೌರಮ್ಮ, ಕವಿತಾ, ರತ್ನಮ್ಮ, ಶಬ್ಬೀರ್ ಅಹಮ್ಮದ್, ವಿನೋದ್ ಕುಮಾರ್, ಶ್ರೀತಮ್ ನಾಯ್ಡು, ಪುನೀತ್ ಬಾಬು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.