ADVERTISEMENT

ಅಧಿವೇಶನದಲ್ಲಿ ಪಿಟಿಸಿಎಲ್ ಕಾಯ್ದೆ ತಿದ್ದುಪಡಿಗೆ ಆಗ್ರಹ

ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರಿಂದ ಜಿಲ್ಲಾಡಳಿತ ಭವನದ ಎದುರು ಸಾಂಕೇತಿಕ ಧರಣಿ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 12:49 IST
Last Updated 18 ಫೆಬ್ರುವರಿ 2020, 12:49 IST
ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಎದುರು ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಎದುರು ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಿದರು.   

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಬಜೆಟ್‌ ಅಧಿವೇಶನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಭೂ ಪರಭಾರೆ ನಿಷೇಧ ಕಾಯ್ದೆಗೆ (ಪಿಟಿಸಿಎಲ್) ತಿದ್ದುಪಡಿ ತರಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಗಳವಾರ ಜಿಲ್ಲಾಡಳಿತ ಭವನದ ಎದುರು ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಿದರು.

ಈ ವೇಳೆ ಮಾತನಾಡಿದ ಸಮಿತಿಯ ರಾಜ್ಯ ಘಟಕದ ಸಂಚಾಲಕ ವಿಜಯ ನರಸಿಂಹ, ‘ಪಿಟಿಸಿಎಲ್ ಕಾಯ್ದೆಗೆ ಸಂಬಂಧಿಸಿದ ಕೆಲ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳು ಆ ಕಾಯ್ದೆಯ ಸೆಕ್ಷನ್ 5ಕ್ಕೆ ವಿರುದ್ಧ ತೀರ್ಪು ನೀಡಿವೆ. ಪರಿಣಾಮ, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ನಡೆಯುವ ಬಹುತೇಕ ಪಿಟಿಸಿಎಲ್‌ ವ್ಯಾಜ್ಯಗಳು ವಜಾಗೊಳ್ಳುತ್ತಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾಯ್ದೆಗೆ ಧಕ್ಕೆಯಾಗದ ರೀತಿ ತಿದ್ದುಪಡಿ ತರಬೇಕು’ ಎಂದು ಆಗ್ರಹಿಸಿದರು.

‘ತೋಟಿ, ತಳವಾರಿಕೆ, ಕುಳವಾಡಿಗಳಿಗೆ ಮಂಜೂರು ಮಾಡಿದ ಇನಾಂತಿ ಭೂಮಿಗಳ ವಿಚಾರಗಳಲ್ಲಿ ಸರ್ಕಾರಗಳು ಘೋರ ಅನ್ಯಾಯ ಮಾಡುತ್ತಿವೆ. ಸೂಕ್ತ ತಿದ್ದುಪಡಿ ತಂದು ದಲಿತರ ಸೇವೆಯನ್ನು ಪರಿಗಣಿಸಿ ಇನಾಂತಿ ಭೂಮಿಯನ್ನು ಮರುಸ್ಥಾಪನೆ ಮಾಡಲು ಆದೇಶ ನೀಡಿ ಸ್ವಾಧೀನ ಕೊಡಿಸಬೇಕು’ ಎಂದು ಹೇಳಿದರು.

ADVERTISEMENT

‘ಪರಿಶಿಷ್ಟ ಜಾತಿಯ ಮೀಸಲಾತಿ ವರ್ಗೀಕರಣಕ್ಕಾಗಿ ನೇಮಕವಾಗಿದ್ದ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಈ ಅಧಿವೇಶದಲ್ಲಿ ಅಂಗೀಕರಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಬೇಕು. ಹಿಂದುಳಿದ ಜಾತಿ ಮತ್ತು ಅಲ್ಪಸಂಖ್ಯಾತರಿಗೆ ಇರುವ ಮೀಸಲಾತಿ ಅವರ ಒಳಗಿನ ಉಪಪಂಗಡಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡಲು ಪ್ರತ್ಯೇಕ ಆಯೋಗ ರಚಿಸಬೇಕು’ ಎಂದು ಒತ್ತಾಯಿಸಿದರು.

‘ಬಗರ್‌ ಹುಕುಂ ಸಕ್ರಮೀಕರಣದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದವರ ಅರ್ಜಿಗಳು ವಜಾಗೊಂಡಿರುವುದನ್ನು ಪುನರ್ ಪರಿಶೀಲಿಸಲು ಸರ್ಕಾರ ಆದೇಶ ಹೊರಡಿಸಬೇಕು. ಕರ್ನಾಟಕ ಭೂಮಂಜೂರಾತಿ ನಿಯಮ 1969ರ ಪ್ರಕಾರ ಪರಿಶಿಷ್ಟ ಜಾತಿ, ವರ್ಗಗಳಿಗೆ ಶೇ50 ರಷ್ಟು ಭೂಮಿಯನ್ನು ಮೀಸಲಿಡಲು ಭೂಮಿತಿ ಶಾಸನ ಜಾರಿಗೆ ತರಬೇಕು. ದಲಿತರಿಗೆ ನಿಯಮಾನುಸಾರ ಭೂಮಿ ನೀಡಬೇಕು’ ಎಂದು ತಿಳಿಸಿದರು.

‘ಪರಿಶಿಷ್ಟ ಜಾತಿ, ವರ್ಗಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನ ಬಳಕೆಯಾಗದೆ ಸರ್ಕಾರಕ್ಕೆ ವಾಪಾಸ್‌ ಹೋಗುತ್ತಿದೆ. ಈ ಅನುದಾನ ಬಳಸದ ಜಿಲ್ಲಾಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ, ವರ್ಗಗಳ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಗುತ್ತಿಗೆದಾರರಿಗೆ ನೀಡುವ ಕಾಮಗಾರಿಯನ್ನು ₹50 ಲಕ್ಷ ಮಿತಿಗೊಳಿಸಿರುವುದರಿಂದ ದಲಿತ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ಈ ಮಿತಿಯನ್ನು ತೆಗೆದುಹಾಕಬೇಕು’ ಎಂದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡುವುದರಿಂದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರ ಮೀಸಲಾತಿಗೆ ಕೊಡಲಿ ಪೆಟ್ಟು ಕೊಡುತ್ತಿದೆ. ಆದ್ದರಿಂದ ಖಾಸಗೀಕರಣ ನಿಲ್ಲಿಸಬೇಕು. ಜತೆಗೆ ಖಾಸಗಿ ಕ್ಷೇತ್ರದಲ್ಲಿ ಕೂಡ ಕಡ್ಡಾಯವಾಗಿ ಮೀಸಲಾತಿ ಜಾರಿಗೆ ತರಬೇಕು. ಎಲ್ಲ ಇಲಾಖೆಗಳಲ್ಲಿ ಹೊರಗುತ್ತಿಗೆ ಪದ್ಧತಿ ರದ್ದುಪಡಿಸಬೇಕು. ಬಾಕಿ ಇರುವ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿ ಮಾಡಲು ಪ್ರತ್ಯೇಕ ಆಯೋಗ ರಚನೆ ಮಾಡಬೇಕು’ ಎಂದು ಹೇಳಿದರು.

ಪ್ರತಿಭಟನಾಕಾರರು ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್ ಅವರಿಗೆ ಮನವಿ ಸಲ್ಲಿಸಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕ ಜಿಲ್ಲಾ ಸಂಚಾಲಕರಾದ ವೈ. ಎ.ಕಡ್ಡೀಲ್ ವೆಂಕಟರವಣಪ್ಪ, ವಿ.ಅಮರ್, ಕೆ.ವಿ.ವೆಂಕಟೇಶ್‌, ಗೊರಮಡುಗು ನಾರಾಯಣಸ್ವಾಮಿ, ತಿಪ್ಪೇನಹಳ್ಳಿ ನಾರಾಯಣ, ನವೀದ್, ಕೆ.ನಂಜುಂಡಪ್ಪ, ಚಂದ್ರಪ್ಪ, ಹನುಮಾ ಜೋಶ್ವಾ, ಕಣಿತಹಳ್ಳಿ ಗಂಗಾಧರ್, ಆರ್.ವೈ.ಪ್ರಭಾಕರ್ ಪ್ರತಿಭಟನೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.