ADVERTISEMENT

ಚಿಕ್ಕಬಳ್ಳಾಪುರ | ಮುಂಗಾರು; 1.32 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ

ಕಳೆದ ವರ್ಷಕ್ಕಿಂತ ಹೆಚ್ಚಿದ ಗುರಿ; ಗೌರಿಬಿದನೂರು ತಾಲ್ಲೂಕಿನಲ್ಲಿ ಗರಿಷ್ಠ

ಡಿ.ಎಂ.ಕುರ್ಕೆ ಪ್ರಶಾಂತ
Published 5 ಮೇ 2025, 6:31 IST
Last Updated 5 ಮೇ 2025, 6:31 IST
ಬೀಜ ಬಿತ್ತನೆ
ಬೀಜ ಬಿತ್ತನೆ   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇನ್ನೂ ಉತ್ತಮವಾಗಿ ಮುಂಗಾರು ಮಳೆ ಸುರಿದಿಲ್ಲ. ಈ ನಡುವೆ ಪ್ರತಿ ವರ್ಷದಂತೆ ಈ ಬಾರಿಯೂ ಮುಂಗಾರು ಬಿತ್ತನೆಗೆ ಕೃಷಿ ಇಲಾಖೆಯು ಪೂರ್ವ ಸಿದ್ಧತೆ ಮಾಡಿಕೊಂಡಿದೆ.

ಪ್ರಸಕ್ತ ಮುಂಗಾರು ಅವಧಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 1,32,796 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಬಿತ್ತನೆಯ ಗುರಿ ಹೆಚ್ಚಿದೆ. 

1,04,266 ಹೆಕ್ಟೇರ್‌ನಲ್ಲಿ ಏಕದಳ ಧಾನ್ಯಗಳು, 8,100 ಹೆಕ್ಟೇರ್‌ನಲ್ಲಿ ದ್ವಿದಳ ಧಾನ್ಯಗಳು, 20,230 ಹೆಕ್ಟೇರ್‌ನಲ್ಲಿ ಎಣ್ಣೆಕಾಳುಗಳು, 200 ಹೆಕ್ಟೇರ್‌ನಲ್ಲಿ ವಾಣಿಜ್ಯ ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿದೆ. 

ADVERTISEMENT

ರಾಗಿ, ಶೇಂಗಾ ಅಧಿಕ: ರಾಗಿ, ಮುಸುಕಿನ ಜೋಳ ಮತ್ತು ಶೇಂಗಾ ಮುಂಗಾರು ಅವಧಿಯಲ್ಲಿ ಜಿಲ್ಲೆಯ ಪ್ರಮುಖ ಬಿತ್ತನೆಯ ಬೆಳೆಗಳಾಗಿವೆ. ಈ ಬಾರಿ 44,00 ಹೆಕ್ಟೇರ್‌ನಲ್ಲಿ ರಾಗಿ, 57,166 ಹೆಕ್ಟೇರ್‌ನಲ್ಲಿ ಹೈಬ್ರಿಡ್ ಮುಸುಕಿನ ಜೋಳ, 20,000 ಹೆಕ್ಟೇರ್‌ನಲ್ಲಿ ಶೇಂಗಾ ಬಿತ್ತನೆಯ ಗುರಿ ಹೊಂದಿದೆ. 

ಭತ್ತ 2,000 ಹೆಕ್ಟೇರ್, ಜೋಳ 1 ಸಾವಿರ, ತೃಣಧಾನ್ಯಗಳು 100, ತೊಗರಿ 420,  
ಹುರುಳಿ 1,240, ಅವರೆ 2,500, ಅಲಸಂದೆ 150, ಸೂರ್ಯಕಾಂತಿ 108, ಸಾಸಿವೆ 20, ಎಳ್ಳು 5, ಹುಚ್ಚೆಳ್ಳು 30, ಹರಳು 75, ಕಬ್ಬು 100, ಹತ್ತಿ 100 ಹೆಕ್ಟೇರ್‌ನಲ್ಲಿ ಬಿತ್ತನೆಯ ಗುರಿ ಇದೆ.

ಕಳೆದ ವರ್ಷ ಜಿಲ್ಲೆಯಲ್ಲಿ 20,433 ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳುಗಳ ಬಿತ್ತನೆ ಗುರಿ ಇತ್ತು. ಈ ಬಾರಿ ಆ ಗುರಿ 20,230 ಹೆಕ್ಟೇರ್‌ಗೆ ಇಳಿಕೆ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ದ್ವಿದಳ ಧಾನ್ಯಗಳ ಬಿತ್ತನೆ ಗುರಿ ಹೆಚ್ಚಳವಾಗಿದೆ. ಕಳೆದ ಬಾರಿ 6,057 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯ ಗುರಿ ಇತ್ತು. ಈ ಬಾರಿ ಆ ಗುರಿ ಹೆಚ್ಚಳವಾಗಿದೆ.

ಪ್ರಮುಖ ಬೆಳೆಗಳ ಬಿತ್ತನೆ ಗುರಿಯು ಕಡಿಮೆ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ರಾಗಿ, ಶೇಂಗಾ ಮತ್ತು ಹೈಬ್ರಿಡ್ ಮುಸುಕಿನ ಜೋಳದ ಬಿತ್ತನೆ ಗುರಿಯ ಪ್ರಮಾಣ ಹೆಚ್ಚಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಗೌರಿಬಿದನೂರು ತಾಲ್ಲೂಕಿನಲ್ಲಿ ಬಿತ್ತನೆಯ ಗುರಿ ಹೆಚ್ಚಿದೆ. ಕಳೆದ ವರ್ಷದ ಮುಂಗಾರಿನಲ್ಲಿ ಗೌರಿಬಿದನೂರು ತಾಲ್ಲೂಕಿನಲ್ಲಿ 35,531 ಹೆಕ್ಟೇರ್ ಬಿತ್ತನೆಯ ಗುರಿ ಇತ್ತು. ಈ ಬಾರಿ 37,262 ಹೆಕ್ಟೇರ್ ಪ್ರಮಾಣದ ಬಿತ್ತನೆ ಗುರಿಯನ್ನು ಇಲಾಖೆ ಹೊಂದಿದೆ.

ಈ ಹಿಂದಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿತ್ತು. ಅದಕ್ಕೂ ಹಿಂದಿನ ಎರಡು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಉತ್ತಮ ಮಳೆ ಆಗಿತ್ತು. 2021 ಮತ್ತು 2022ರಲ್ಲಿ ಜಿಲ್ಲೆಯಲ್ಲಿ ಉತ್ತಮವಾಗಿ ಬಿತ್ತನೆ ಆಗಿತ್ತು. ಆದರೆ ಕಳೆದ ಎರಡು ವರ್ಷಗಳ ಮಳೆ ಇಲ್ಲದ ಕಾರಣ ಬಿತ್ತನೆಯೂ ಕುಂಠಿತವಾಗಿತ್ತು. ಬಿತ್ತನೆಯಾದ ಪ್ರದೇಶದಲ್ಲಿಯೂ ಬೆಳೆ ಬಂದಿರಲಿಲ್ಲ. 

ಈ ಬಾರಿ ಬಿತ್ತನೆಗೆ ರಸಗೊಬ್ಬರ, ಬಿತ್ತನೆ ಬೀಜಗಳನ್ನು ಸಿದ್ಧಗೊಳಿಸಿಕೊಳ್ಳಲಾಗಿದೆ. ಯಾವುದೇ ಕೊರತೆಗಳು ಎದುರಾಗುವುದಿಲ್ಲ. ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.