ಮಿಟ್ಟೇಮರಿ(ಬಾಗೇಪಲ್ಲಿ): ತಾಲ್ಲೂಕಿನ ಮಿಟ್ಟೇಮರಿ ಹೋಬಳಿಯ ಕಾನಗಮಾಕಲಪಲ್ಲಿ ಸುತ್ತಮುತ್ತ ಶುಕ್ರವಾರ ಸಂಜೆ ಭಾರಿ ಗಾಳಿ, ಮಳೆ ಆಗಿದೆ.
ತಾಲ್ಲೂಕಿನ ಕಾನಗಮಾಕಲಪಲ್ಲಿ ಗ್ರಾಮದ ರೈತ ಮುರಳಿ ತನ್ನ 2 ಎಕರೆಯಲ್ಲಿ ಹೀರೇಕಾಯಿ ಬೆಳೆದಿದ್ದಾರೆ. 2 ದಿನಗಳ ಒಳಗೆ ಮೊದಲ ಕಟಾವು ಮಾಡಬೇಕಾಗಿತ್ತು. ಆದರೆ ಭಾರಿ ಗಾಳಿ, ಮಳೆಯಾಗಿದ್ದರಿಂದ ಸಂಪೂರ್ಣವಾಗಿ ನೆಲ ಕಚ್ಚಿವೆ. ಹೊಲದಲ್ಲಿ ಮಳೆ ನೀರು ಸಂಗ್ರಹವಾಗಿದೆ.
‘ಒಂದೂವರೆ ಲಕ್ಷ ಸಾಲ ಮಾಡಿ ಹೀರೇಕಾಯಿ ಬೆಳೆ ಬೆಳೆದಿದ್ದೇನೆ. ಮೊದಲ ಹಂತದಲ್ಲಿ ಕಟಾವು ಮಾಡಬೇಕಾಗಿತ್ತು. ಆದರೆ ಶುಕ್ರವಾರ ಗಾಳಿ, ಮಳೆಗೆ ಹೀರೇಕಾಯಿಗಳು ನೆಲ ಕಚ್ಚಿವೆ. ಇದರಿಂದ ₹3 ಲಕ್ಷದಷ್ಟು ನಷ್ಟ ಉಂಟಾಗಿದೆ’ ಎಂದು ರೈತ ಮುರಳಿ ತಿಳಿಸಿದರು.
ಕಾನಗಮಾಕಲಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಗಚಿನ್ನೇಪಲ್ಲಿ, ವನಗಾನಪಲ್ಲಿ, ವರದಯ್ಯಗಾರಿಪಲ್ಲಿ ಸೇರಿದಂತೆ ಭಾರಿ ಗಾಳಿ, ಮಳೆಗೆ ರಸ್ತೆಗಳಲ್ಲಿ, ಹೊಲ ಗದ್ದೆಗಳಲ್ಲಿ ಮಳೆ ನೀರು ಸಂಗ್ರಹ ಆಗಿದೆ. ಜನ ಹಾಗೂ ಜಾನುವಾರುಗಳ ಸಂಚಾರಕ್ಕೆ ತೊಂದರೆ ಆಗಿದೆ. ಕುರಿ, ಮೇಕೆ, ಹಸುಗಳ ಶೆಡ್‍ಗಳಲ್ಲಿ ಮಳೆಯ ನೀರು ಸಂಗ್ರಹ ಆಗಿದೆ. ಗಿಡ, ಮರಗಳು ಸಹ ನೆಲಕ್ಕುರುಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.