ಚಿಂತಾಮಣಿ: ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಗ್ರಾಮೀಣ ಮತ್ತು ನಗರ ಭಾಗದ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದರು.
ಕಾಂಗ್ರೆಸ್ ಪಕ್ಷ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ನೀಡಲಿರುವ ₹50 ಕೋಟಿ ಪೈಕಿ ಗ್ರಾಮೀಣ ಭಾಗದ ರಸ್ತೆಗಳಿಗೆ ₹19 ಕೋಟಿ ಮತ್ತು ನಗರಭಾಗದ ರಸ್ತೆಗಳ ಅಭಿವೃದ್ಧಿಗಾಗಿ ₹18 ಕೋಟಿ ನೀಡಲಾಗುವುದು’ ಎಂದರು.
‘ತಾಲ್ಲೂಕಿನ ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ 10 ವರ್ಷವಾದರೂ, ವಿದ್ಯುತ್ ಸಂಪರ್ಕ ಒದಗಿಸಲಾಗದವರು ಯಾವ ಪುರುಷಾರ್ಥಕ್ಕಾಗಿ ಉದ್ಯೋಗ ಮೇಳ ಮಾಡುತ್ತಿದ್ದಾರೆ. ನಾನು ಶಾಸನಾಗಿದ್ದಾಗ ಮಸ್ತೇನಹಳ್ಳಿ ಬಳಿ ಕೈಗಾರಿಕಾ ವಲಯ ಸ್ಥಾಪಿಸಲು ನೂರಾರು ಎಕರೆ ಜಮೀನು ಕಾಯ್ದಿರಿಸಿದ್ದೆ. ನಾನು ಸೋತ ನಂತರ ನಿಮ್ಮ ಕೈಯಲ್ಲಿ ವಿದ್ಯುತ್ ಸಂಪರ್ಕ ಕೊಡಿಸಲಾಗಿಲ್ಲ’ ಎಂದು ಮಾಜಿ ಶಾಸಕರ ಹೆಸರು ಪ್ರಸ್ತಾಪಿಸದೆ ಛೇಡಿಸಿದರು.
ಅಂತರ್ಜಲ ಹೆಚ್ಚಿಸಲು ತಾಲ್ಲೂಕಿನ ಅಂಬಾಜಿದುರ್ಗ ಮತ್ತು ಮುಂಗಾನಹಳ್ಳಿ ಹೋಬಳಿಗಳ 119 ಕೆರೆಗಳಿಗೆ ಎಚ್.ಎನ್ ವ್ಯಾಲಿ ನೀರು ತರಲು ಹಣ ಮಂಜೂರು ಮಾಡಲಾಗಿದೆ. ಸಣ್ಣ ನೀರಾವರಿ ಇಲಾಖೆಯಿಂದಲೂ ಕೆರೆಗಳಿಗೆ ನೀರು ಹರಿಸಲು ಯತ್ನಿಸಲಾಗುತ್ತಿದೆ. ಕೆ.ಸಿ ವ್ಯಾಲಿಯಲ್ಲಿ ಕಸಬಾ ಮತ್ತು ಅಂಬಾಜಿದುರ್ಗ ಹಾಗೂ ಮುರುಗಮಲ್ಲ ಹೋಬಳಿಗಳ 50 ಕೆರೆಗಳಿಗೆ ನೀರು ಹರಿಸಲು ಹಣ ಮಂಜೂರು ಮಾಡಲಾಗಿದೆ ಎಂದರು.
ಕುಡಿಯುವ ನೀರಿಗಾಗಿ ಭಕ್ತರಹಳ್ಳಿ ಅರಸೀಕೆರೆಗೆ ಹೆಚ್ಚುವರಿ ₹36 ಕೋಟಿ, ಕನಂಪಲ್ಲಿ ಕೆರೆ, ನೆಕ್ಕುಂದಿ ಕೆರೆಗೆ ₹84 ಕೋಟಿ ಮಂಜೂರು ಮಾಡಿಸಲಾಗಿದೆ. ನಗರ ಬೆಳವಣಿಗೆಗೆ ಸುತ್ತಮುತ್ತಲ 110 ಹಳ್ಳಿಗಳನ್ನು ಸೇರಿಸಿಕೊಳ್ಳಲಾಗಿದ್ದು, ಭೂಪರಿವರ್ತನೆ ತೊಂದರೆಯನ್ನು ಶೀಘ್ರವೇ ಪರಿಹರಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.