ಚಿಂತಾಮಣಿ: ಬರಪೀಡಿತ ಜಿಲ್ಲೆಗಳಲ್ಲಿ ಪರ್ಯಾಯ ಮಾದರಿಗಳನ್ನು ಅರ್ಥ ಮಾಡಿಕೊಳ್ಳಲು ಚಿಂತಾಮಣಿಯ ಯುವ ಕೃಷಿಕರು ಮಂಗಳವಾರ ‘ನೀರು ಜಾಡು’ ಎಂಬ ಅಧ್ಯಯನ ಯಾತ್ರೆ ಕೈಗೊಂಡಿದ್ದಾರೆ.
ಮಳೆ ಅಭಾವದಿಂದ ಕೃಷಿಯನ್ನು ಸುಧಾರಿಸುವ ಪ್ರಕ್ರಿಯೆಗಳ ಕುರಿತು ಅಧ್ಯಯನ ನಡೆಸಲು ಬಳ್ಳಿ ಬಳಗ ಕೃಷಿಕರ ವೇದಿಕೆಯಿಂದ 25 ಯುವ ಕೃಷಿಕರು ಕೋಲಾರ– ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಗತಿಪರ ರೈತರ ಹೊಲಗಳಿಗೆ ಭೇಟಿ ನೀಡುವ ಈ ಯಾತ್ರೆಗೆ ಕವಿ, ಸಾಮಾಜಿಕ ಕಾರ್ಯಕರ್ತ ಶಶಿರಾಜ್ ಹರತಲೆ ಮಂಗಳವಾರ ಚಾಲನೆ ನೀಡಿದರು.
‘ಅಭಿವೃದ್ಧಿ ಹೆಸರಿನಲ್ಲಿ ಬಂದ ದೊಡ್ಡ ಕೃಷಿ ಮಾದರಿಗಳು, ಕಾರ್ಪೊರೇಟ್ ಕೃಷಿ ಪದ್ಧತಿಗಳು, ಸರ್ಕಾರದ ಅವೈಜ್ಞಾನಿಕ ನೀತಿಗಳು ನಮ್ಮ ರೈತರನ್ನು ಸಂಕಷ್ಟಕ್ಕೆ ದೂಡಿವೆ. ಬೆವರು ಸುರಿಸಿ ಕೃಷಿಭೂಮಿಯಲ್ಲಿ ದುಡಿಯುವ ಮೂಲಕ ಸಾಕಷ್ಟು ಪರ್ಯಾಯ ಮಾದರಿಗಳನ್ನು ಕಂಡುಕೊಂಡ ರೈತರನ್ನು ಭೇಟಿ ಮಾಡುವ ‘ನೀರ ಜಾಡು’ ಯಾತ್ರೆ ವಿಭಿನ್ನ ಪ್ರಯೋಗ. ಇದು ನೆಲ ತಾಯಿ ಮಕ್ಕಳ ಯಶಸ್ಸಿನ ಯಾತ್ರೆಯಾಗಲಿ’ ಎಂದು ಆಶಿಸಿದರು.
ಬಳ್ಳಿ ಬಳಗ ರೈತ ನಾಗಸಂದ್ರಗಡ್ಡೆ ಸುರೇಶ್ ಮಾತನಾಡಿ, ‘ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಮಳೆ ಕೊರತೆ ತೀವ್ರವಾಗಿದೆ. ಪ್ರತಿವರ್ಷವು ಕೃಷಿ ಮಾಡುವ ಪ್ರಮಾಣ ಇಳಿಮುಖವಾಗುತ್ತಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಕಡಿಮೆ ಮಳೆ ನಡುವೆಯೂ ಕೃಷಿಯಲ್ಲಿ ಬದುಕು ಕಂಡುಕೊಂಡ ಬಹಳಷ್ಟು ರೈತರು ನಮ್ಮ ನಡುವೆ ಇದ್ದಾರೆ’ ಎಂದರು.
ಯುವ ಕೃಷಿಕ ಆನೂರು ಶ್ರೀನಿವಾಸ್, ಚೌಡದೇನಹಳ್ಳಿ ಆನಂದ ಸಿ.ಎಂ., ಪಾಲೇಪಲ್ಲಿ ಶಂಕರರೆಡ್ಡಿ, ಕೊಡಿಗೇನಹಳ್ಳಿ ದೇವರಾಜು, ಮೈಲಾಪುರ ಮುನಿಬಸಪ್ಪ, ಚೌಡದೇನಹಳ್ಳಿ ನಾರಾಯಣಸ್ವಾಮಿ, ಮಹಮದ್ ಪುರ ನಾರಾಯಣಸ್ವಾಮಿ, ಲಕ್ಷ್ಮಪ್ಪ, ಆನೂರು ನಾಗೇಶ್, ಮಂಜುನಾಥ, ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.