ಚಿಂತಾಮಣಿ: ನಗರಸಭೆ ಸದಸ್ಯ ಮೊಹ್ಮದ್ ಶಫೀಕ್ ಅವರು ಸಭೆಯ ಅಜೆಂಡಾ ಹರಿದು ಹಾಕಿದ ಹಿನ್ನೆಲೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಗದ್ದಲ ಮತ್ತು ಕೋಲಾಹಲ ಉಂಟಾಯಿತು. ಇದರಿಂದಾಗಿ ವಿವಿಧ ವಿಷಯಗಳ ಚರ್ಚೆಗೆ ವೇದಿಕೆಯಾಗಬೇಕಿದ್ದ ಸಭೆಯು ಗೊಂದಲದ ಗೂಡಾಗಿ ಪರಿಣಮಿಸಿತು.
ಅಜೆಂಡಾ ಹರಿದು ಹಾಕುವ ಮೂಲಕ ಸದಸ್ಯ ಅಧ್ಯಕ್ಷ ಸ್ಥಾನಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಯಿತು. ಹೀಗಾಗಿ, ಸಭೆಯು ಆರಂಭವಾದ ಒಂದೇ ಗಂಟೆಯಲ್ಲಿ ಮುಕ್ತಾಯವಾಯಿತು.
ನಗರಸಭೆ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷ ಜಗನ್ನಾಥ್ ಅಧ್ಯಕ್ಷತೆಯಲ್ಲಿ ಗುರುವಾರ ಸಾಮಾನ್ಯ ಸಭೆ ಆಯೋಜಿಸಲಾಗಿತ್ತು ಸಭೆಯಲ್ಲಿ ಮಾತನಾಡಿದ 15ನೇ ವಾರ್ಡ್ ಸದಸ್ಯೆ ರೂಬಿಯಾ ಸುಲ್ತಾನ, ಅಧ್ಯಕ್ಷ ಮತ್ತು ಪೌರಾಯುಕ್ತ ಜೋಕರ್ ಎಂದು ಮೂದಲಿಸಿದರು. ಇದರಿಂದ ಆಕ್ರೋಶಗೊಂಡ ಅಧ್ಯಕ್ಷ ಜಗನ್ನಾಥ್, ವಾಗ್ವಾದಕ್ಕಿಳಿದರು.
ಆಗ ಮಧ್ಯ ಪ್ರವೇಶಿಸಿದ 17ನೇ ವಾರ್ಡ್ ಸದಸ್ಯ ಮೊಹ್ಮದ್ ಶಫೀಕ್, ಮಾತನಾಡಲು ಮೈಕ್ ಕೇಳಿದರು. ಮೂರು ತಿಂಗಳಿಗೆ ಒಮ್ಮೆ ಸಭೆ ನಡೆಸುತ್ತೀರಿ. ನೀವು ಪೌರಾಯಕ್ತರ ರಿಮೋಟ್ ಕಂಟ್ರೋಲ್ ಎಂದು ಅಧ್ಯಕ್ಷರನ್ನು ಉದ್ದೇಶಿಸಿ ಹೇಳಿದರು. ಜೊತೆಗೆ ಸಭೆಯ ಪುಸ್ತಕವನ್ನು ಅಧ್ಯಕ್ಷರ ಎದುರು ಹರಿದು ಹಾಕಿದರು.
ಅಧ್ಯಕ್ಷ ಜಗನ್ನಾಥ್, ಉಪಾಧ್ಯಕ್ಷೆ ರಾಣಿಯಮ್ಮ, ಆಡಳಿತ ಪಕ್ಷದ ಸದಸ್ಯರು ಶಫೀಕ್ ನಡೆಗೆ ತೀವ್ರ ಬೇಸರ ವ್ಯಕ್ತಪಡಿಸಿದರು. ಜೊತೆಗೆ ಶಫೀಕ್ ಕ್ಷಮೆ ಕೋರಬೇಕು ಎಂದು ಪಟ್ಟು ಹಿಡಿದರು.
ನೀರಿನ ಸಮಸ್ಯೆ, ಯುಜಿಡಿ ಸಮಸ್ಯೆ ಕುರಿತು ಹಲವು ಬಾರಿ ನಗರಸಭೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಈ ಎಲ್ಲ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳಲು ಸಾಮಾನ್ಯಸಭೆಯಲ್ಲಿ ಅವಕಾಶ ನೀಡುತ್ತಿಲ್ಲ ಎಂದು ಕೆಲವು ಸದಸ್ಯರು ದೂರಿದರು.
ಸದಸ್ಯ ಹರೀಶ್ ಮಾತನಾಡಿ, ನಗರದ ವೃತ್ತವೊಂದರಲ್ಲಿ ಮಾಜಿ ಸಚಿವ ಆಂಜನೇಯ ರೆಡ್ಡಿ ಅವರ ಪುತ್ಥಳಿ ನಿರ್ಮಿಸಬೇಕು. ವಿವಿಧ ಪ್ರದೇಶಗಳಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ನೀಡಲಾಗಿದ್ದು, ಅವುಗಳಿಗೆ ಇ–ಖಾತೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಸಾಮಾನ್ಯ ಸಭೆ ನಡೆಯುವಾಗ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.