ಚಿಂತಾಮಣಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಆಶ್ರಯದಲ್ಲಿ 2025-26ನೇ ಸಾಲಿನ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ನಗರದ ಝಾನ್ಸಿ ಮೈದಾನದಲ್ಲಿ ಸೋಮವಾರ ಮತ್ತು ಮಂಗಳವಾರ ನಡೆಯಿತು.
ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಜಿ.ನರಸಿಂಹಪ್ಪ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಕ್ರೀಡೆಗಳು ನಿತ್ಯ ಜೀವನದ ಅವಿಭಾಜ್ಯ ಅಂಗವಾಗಬೇಕು. ಶಾಲೆ ಕಾಲೇಜು ವಿದ್ಯಾರ್ಥಿ ಜೀವನ ಮುಗಿದ ನಂತರ ಕ್ರೀಡೆಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸಬಾರದು. ಯಾವುದಾದರೂ ಒಂದು ಕ್ರೀಡೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡರೆ ಶರೀರ ದೃಢವಾಗಿರುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳಿದರು.
ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲ್ಲೂಕು ಕಾರ್ಯದರ್ಶಿ ಡಿ. ರಮೇಶ ಮಾತನಾಡಿ, ವಿದ್ಯಾರ್ಥಿಗಳು ಕೆಲವೇ ಕ್ರೀಡೆಗಳಿಗೆ ಸೀಮಿತರಾಗದೆ ದೇಶಿಯ ಕ್ರೀಡೆಗಳನ್ನು ಆಡಿ ನಮ್ಮ ಕ್ರೀಡಾ ಪರಂಪರೆಯನ್ನು ಉಳಿಸಿ ಬೆಳೆಸಬೇಕು. ದೇಸಿ ಕ್ರೀಡೆಗಳಿಗೆ ಮಾನ್ಯತೆ ಮತ್ತು ಪ್ರಚಾರ ದೊರೆಯದೆ ಇರುವುದು ವಿಷಾದನೀಯ ಎಂದರು.
ದಸರಾ ಕ್ರೀಡಾಕೂಟದಲ್ಲಿ ಮೇಲಾಟಗಳು ಮತ್ತು ವಾಲಿಬಾಲ್, ಕಬಡ್ಡಿ ಆಟಗಳನ್ನು ಸಂಘಟಿಸಲಾಗಿತ್ತು. ಯುವಜನರು ಮತ್ತು ಮಧ್ಯವಯಸ್ಕರು ಉತ್ಸಾಹದಿಂದ ಪಾಲ್ಗೊಂಡಿದ್ದರು. ವಿಜೇತ ಕ್ರೀಡಾಪಟುಗಳಿಗೆ ಪ್ರಮಾಣ ಪತ್ರ ಮತ್ತು ಪದಕಗಳನ್ನು ನೀಡಿ ಗೌರವಿಸಲಾಯಿತು.
ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್, ಪುನೀತ್, ನಾಗರಾಜ್, ನಾಗೇಶ್, ಉಪೇಂದ್ರ, ಗಿರೀಶ್, ಶಂಕರ, ಶ್ರೀಕಾಂತ್, ಶ್ರೀನಿವಾಸ, ಶ್ರೀಧರ್ ಹಿರೇಮಠ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.