ಚಿಂತಾಮಣಿ: ತಾಲ್ಲೂಕಿನಲ್ಲಿ ಕಳೆದ 4-5 ದಿನಗಳಿಂದ ಹದವಾದ ಮಳೆ ಸುರಿಯುತ್ತಿದೆ. ರೈತರ ಮೊಗದಲ್ಲಿ ಮಂದಹಾಸ ಕಾಣುತ್ತಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ರೈತರಲ್ಲಿ ಹೊಸ ಹುರುಪು ಉಂಟಾಗಿದ್ದು ಲಗುಬಗೆಯಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಗುಡುಗು-ಮಿಂಚಿನ ಆರ್ಭಟ ಮಾಡುತ್ತಿದ್ದರೂ ಹದವಾದ ಮಳೆ ಸುರಿಯುತ್ತಿರುವುದು ರೈತರಿಗೆ ಸಮಾಧಾನ ತಂದಿದೆ. ರಾತ್ರಿ ಮಳೆ ಸುರಿಯುತ್ತಿರುವುದರಿಂದ ರೈತರು ಸಂತಸದಿಂದ ಹಗಲಿನಲ್ಲಿ ಹೊಲವನ್ನು ಮಾಗಿ ಉಳುಮೆ ಮಾಡಿ ಹಸನುಗೊಳಿಸುತ್ತಿದ್ದಾರೆ.
ಮಾಗಿ ಉಳುಮೆಯಿಂದ ಹಲವಾರು ಪ್ರಯೋಜನಗಳಿವೆ. ಕಳೆದ ಬೆಳೆಯಿಂದ ಜಮೀನಿನಲ್ಲಿರುವ ಕಸ ಕಡ್ಡಿ ಸೇರಿದಂತೆ ಕಚ್ಚಾವಸ್ತುಗಳು ಭೂಮಿಗೆ ಸೇರಿ ಗೊಬ್ಬರವಾಗುತ್ತದೆ. ಬೆಳೆ ಕಟಾವಾಗಿ ಮುಂಗಾರು ಮಳೆ ಬಿದ್ದ ನಂತರ ಉಳುಮೆ ಮಾಡುವ ಪ್ರಕ್ರಿಯೆಗೆ ಮಾಗಿ ಉಳುಮೆ ಪದ್ಧತಿ ಎನ್ನುತ್ತಾರೆ.
ಸಾಲುಗಳಲ್ಲಿ ಉಳುಮೆ ಮಾಡುವುದರಿಂದ ಮಳೆ ನೀರು ಸ್ಥಳದಲ್ಲೇ ಇಂಗಿ ಭೂಮಿಯಲ್ಲಿ ಹೆಚ್ಚುಕಾಲ ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಸಹಾಯಕವಾಗುತ್ತದೆ.
ಜಮೀನಿನಲ್ಲಿರುವ ಎಲೆ, ಕಸ ಕಡ್ಡಿಗಳು ಭೂಮಿಯೊಳಗೆ ಸೇರಿ ಕೊಳೆತು ಮಣ್ಣಿನಲ್ಲಿ ಸಾವಯವ ಗೊಬ್ಬರವಾಗುತ್ತದೆ. ಕಳೆ ಈಗಲೇ ಬೆಳೆದು ಮುಂದಿನ ಬೆಳೆಯಲ್ಲಿ ಕಡಿಮೆಯಾಗುತ್ತದೆ. ಕ್ರಿಮಿಕೀಟಗಳು ಹಾಗೂ ರೋಗರುಜಿನಗಳ ಕಾಟ ಕಡಿಮೆಯಾಗುತ್ತದೆ ಎಂದು ಕೃಷಿ ಅಧಿಕಾರಿಗಳು ಸಲಹೆ ನೀಡುತ್ತಾರೆ.
ರೈತರು ತಿಪ್ಪೆ ಗೊಬ್ಬರವನ್ನು ಈಗಲೇ ಹಾಕಿ ಉಳುಮೆ ಮಾಡುವುದರಿಂದ ಮಣ್ಣಿನಲ್ಲಿ ಚೆನ್ನಾಗಿ ಬೆರೆತು, ಬೆಳೆಗಳಿಗೆ ಉತ್ತಮ ಪೋಷಕಾಂಶ ದೊರೆಯುತ್ತವೆ. ಬಿತ್ತನೆಗೆ ಸಾಕಷ್ಟು ಕಾಲಾವಧಿ ಇರುವುದರಿಂದ ಈಗಿನಿಂದಲೇ ಉಳುಮೆ ಮಾಡಿದರೆ ಬೆಳೆ ಕಾಲದಲ್ಲಿ ಮಳೆ ಕೊರತೆಯಾದರೂ ಕೆಲವು ದಿನ ತಡೆದುಕೊಳ್ಳುವ ಶಕ್ತಿ ಇರುತ್ತದೆ ಎಂದು ಹಿರಿಯ ರೈತರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಹಸಿರು ಎಲೆ ಸಸ್ಯಗಳ ಬಿತ್ತನೆ ಮಾಡಿ ನಂತರ ಉಳುಮೆಯ ಮೂಲಕ ಭೂಮಿಗೆ ಸೇರಿಸಬಹುದು. ಭೂಮಿಯ ಫಲವತ್ತತೆ ಹೆಚ್ಚುತ್ತದೆ. ಬೆಳೆಗಳಿಗೆ ಪೋಷಕಾಂಶಗಳು ದೊರೆಯುತ್ತವೆ. ಹೀಗಾಗಿ ರೈತರು ಮಾಗಿ ಉಳುಮೆ ಮಾಡುವುದರಿಂದ ತುಂಬಾ ಅನುಕೂಲವಾಗುತ್ತದೆ ಎಂದು ಕೃಷಿ ವಿಜ್ಞಾನಿಗಳ ಅಭಿಪ್ರಾಯ.
ತಾಲ್ಲೂಕಿನಲ್ಲಿ ಭೌಗೋಳಿಕವಾಗಿ 86,697 ಹೆಕ್ಟೇರ್ ಪ್ರದೇಶವಿದೆ. ಅದರಲ್ಲಿ ಅರಣ್ಯ, ಸಾಗುವಳಿಗೆ ಲಭ್ಯವಿಲ್ಲದ ಭೂಮಿ, ಸಾಗುವಳಿ ಮಾಡದಿರುವ ಇತರೆ ಭೂಮಿ, ಬೀಳು ಭೂಮಿ ಜಾತಾ ನಿವ್ವಳ 49,149 ಹೆಕ್ಟೇರ್ ಬಿತ್ತನೆ ಭೂಮಿ ಇದೆ. ಬಹುತೇಕ ಖುಷ್ಕಿ ಭೂಮಿಯಾಗಿದೆ. ಹೀಗಾಗಿ ತಾಲ್ಲೂಕಿನ ಬಹುತೇಕ ರೈತರು ಮಳೆಯನ್ನೇ ಅವಲಂಬಿಸಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಪ್ರಸಕ್ತ ಸಾಲಿನಲ್ಲಿ 27,089 ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. ರಾಗಿ, ತೊಗರಿ, ನೆಲಗಡಲೆ, ಮುಸುಕಿನ ಜೋಳ, ಅವರೆ, ಅಲಸಂದಿ ಪ್ರಮುಖ ಬೆಳೆಗಳಾಗಿದೆ. ರಾಗಿ 14,810 ಹೆಕ್ಟೇರ್, ಮುಸುಕಿನ ಜೋಳ 4,780, ಭತ್ತ 929 ಹೆಕ್ಟೇರ್ ಸೇರಿದಂತೆ ಒಟ್ಟು 20,814 ಹೆಕ್ಟೇರ್ ಪ್ರದೇಶದಲ್ಲಿ ಏಕದಳ ಧಾನ್ಯಗಳ ಬಿತ್ತನೆಯ ಗುರಿ ಇದೆ.
ನೆಲಗಡಲೆ 4,250 ಹೆಕ್ಟೇರ್, ಎಳ್ಳು, ಸಾಸಿವೆ, ಹುಚ್ಚೆಳ್ಳು ಸೇರಿದಂತೆ ಒಟ್ಟು 4,317 ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳುಗಳ ಬಿತ್ತನೆ. ತೊಗರಿ 575 ಹೆಕ್ಟೇರ್, ಅವರೆ 850 ಹೆಕ್ಟೇರ್, ಅಲಸಂದಿ 264, ಹುರಳಿ 420 ಮತ್ತಿತರ ಸೇರಿ ಒಟ್ಟು 1,895 ಹೆಕ್ಟೇರ್ ದ್ವಿದಳ ಧಾನ್ಯಗಳ ಬಿತ್ತನೆಯ ಗುರಿ ಇದೆ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ.
ರಾಗಿ, ತೊಗರಿ, ಶೇಂಗಾ, ಮುಸುಕಿನ ಜೋಳ, ಅವರೆ ತಾಲ್ಲೂಕಿನಲ್ಲಿ ಹೆಚ್ಚಾಗಿ ಬೆಳೆಯುವ ಬೆಳೆಗಳಾಗಿವೆ. ಕೈವಾರ, ಕಸಬಾ, ಅಂಬಾಜಿದುರ್ಗಾ ಹೋಬಳಿಗಳಲ್ಲಿ ರಾಗಿ ಮತ್ತು ಅಚರೆ, ಮುರುಗಮಲ್ಲ, ಮುಂಗಾನಹಳ್ಳಿ, ಚಿಲಕಲನೇರ್ಪು ಹೋಬಳಿಗಳಲ್ಲಿ ನೆಲಗಡಲೆ, ತೊಗರಿ ಹೆಚ್ಚಾಗಿ ಬೆಳೆಯುತ್ತಾರೆ. ಮೇ 15ರಿಂದ ತೊಗರಿ ಬಿತ್ತನೆ ಆರಂಭವಾಗಿ ಜೂನ್ 15ರವರೆಗೂ ಮಾಡಬಹುದು. ಜೂನ್ 15 ರಿಂದ ಜುಲೈ 15 ರವರೆಗೂ ನೆಲಗಡಲೆ, ಜುಲೈನಿಂದ ಆಗಸ್ಟ್ ಕೊನೆವರೆಗೆ ರಾಗಿ ಬಿತ್ತನೆ ಮಾಡಬಹುದು.
ತಾಲ್ಲೂಕಿನಲ್ಲಿ ಜನವರಿಯಿಂದ ಮೇ 16 ವರೆಗೆ 80.81 ಮಿ.ಮೀ ವಾಡಿಕೆ ಮಳೆ ಆಗಬೇಕಿತ್ತು. ಆದರೆ 131.53 ಮಿ.ಮೀ ಮಳೆಯಾಗಿದೆ. ಮೇ 16 ರವರೆಗೆ 34.96 ಮಿ.ಮೀ ವಾಡಿಕೆ ಮಳೆ ಆಗಬೇಕಿದ್ದು, 70.21 ಮಿ.ಮೀ ಮಳೆಯಾಗಿದೆ.
ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ರಾಗಿ, ತೊಗರಿ, ನೆಲಗಡಲೆ ಬಿತ್ತನೆ ಬೀಜಗಳ ಸಂಗ್ರಹ ಮಾಡಲಾಗಿದೆ. ಅಗತ್ಯವಾದ ರಸಗೊಬ್ಬರ ದಾಸ್ತಾನು ಇದೆ. ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಕೊರತೆ ಆಗದಂತೆ ಕ್ರಮಕೈಗೊಳ್ಳಲಾಗಿದೆ. ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.
ತಾಲ್ಲೂಕಿನಲ್ಲಿ 13,118 ಅತಿಸಣ್ಣ ರೈತರು, 13,808 ಸಣ್ಣ ರೈತರು, 13,272 ಅರೆ ಮಧ್ಯಮ ರೈತರು, 9,445 ಮಧ್ಯಮ ರೈತರು, 4,519 ದೊಡ್ಡ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ವರ್ಷ ವರ್ಷವೂ ಮುಂಗಾರು ಬಿತ್ತನೆ ಇಳಿಮುಖವಾಗುತ್ತಿದೆ. ಕೃಷಿ ಲಾಭದಾಯಕವಲ್ಲ ಎಂಬ ಭಾವನೆ ರೈತರಲ್ಲಿದೆ. ಕೃಷಿ ಕೂಲಿ ಕಾರ್ಮಿಕರು ಸಿಗುವುದಿಲ್ಲ. ಬಿತ್ತನೆಬೀಜ, ರಸಗೊಬ್ಬರ, ಔಷಧಿಗಳ ಬೆಲೆ ವಿಪರೀತ ಏರಿಕೆಯಾಗಿದೆ. ಬೆಳೆಗಳಾಗುವುದಿಲ್ಲ, ಬೆಳೆ ಆದರೆ ಬೆಲೆ ಸಿಗುವುದಿಲ್ಲ ಎನ್ನುವ ಭಯ ಕೃಷಿಕರನ್ನು ಕಾಡುತ್ತಿದೆ. ಹೀಗಾಗಿ ಬಿತ್ತನೆಯ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.
ತರಬೇತಿ ಕಾರ್ಯಕ್ರಮ ಆಯೋಜನೆ
ಉತ್ಪಾದನೆಯ ಇಳುವರಿಯನ್ನು ಶೇ 10ರಷ್ಟು ಹೆಚ್ಚಿಸಲು ಹಲವಾರು ಕ್ರಮ ಕೈಗೊಳ್ಳಲಾಗಿದೆ. ಸಕಾಲದಲ್ಲಿ ಬಿತ್ತನೆ ಮಾಡುವುದು ಸಾಲು ಬಿತ್ತನೆ ವೈಜ್ಞಾನಿಕ ತಂತ್ರಜ್ಞಾನ ಅಳವಡಿಕೆ ಪೋಷಕಾಶಗಳ ಬಗ್ಗೆ ಅರಿವು ಮೂಡಿಸುವುದು ಅಲ್ಪಾವಧಿ ತಳಿಗಳನ್ನು ಬದಲಾಯಿಸುವುದು ಕೂರಿಗೆ ನಿತ್ತನೆ ನಾಟಿ ಪದ್ಧತಿಗಳ ಪ್ರಾತ್ಯಕ್ಷಿಕೆ ಮೂಲಕ ಪ್ರಚಾರ ಮಾಡುವುದು ಹಾಗೂ ತರಬೇತಿ ಕಾರ್ಯಕ್ರಮ ಆಯೋಜಿಸಲಾಗುವುದು.
- ಪ್ರಸನ್ನ, ಕೃಷಿ ಅಧಿಕಾರಿ
ಕೂಲಿಯಾಳುಗಳ ಕೊರತೆ ರೈತರ ಕೃಷಿ ಚಟುವಟಿಕೆಗಳಿಗೆ ಕೂಲಿಯಾಳುಗಳ ಕೊರತೆ ತೀವ್ರವಾಗಿ ಕಾಡುತ್ತಿದೆ. ರೈತರು ತೋಟಗಾರಿಕೆ ಬೆಳೆಗಳಿಗೆ ಹೆಚ್ಚಾಗಿ ಮಾರುಹೋಗುತ್ತಿದ್ದಾರೆ. ಖರ್ಚು ಕಡಿಮೆ ಕೂಲಿಯಾಳುಗಳ ಹೆಚ್ಚಿನ ಅಗತ್ಯವಿಲ್ಲ ಎಂದು ಮಾವು ಸಫೋಟಾ ಜಂಬುನೇರಳೆ ಗೇರು ಬೆಳೆಯಲು ಮುಂದಾಗಿರುವುದು ಸಹ ಮುಂಗಾರು ಬಿತ್ತನೆ ಇಳಿಮುಖಕ್ಕೆ ಕಾರಣವಾಗಿದೆ.
-ಅಮರನಾರಾಯಣರೆಡ್ಡಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ
ಕೃಷಿ ಲಾಭದಾಯಕವಾಗಿ ಉಳಿದಿಲ್ಲ ಸದ್ಯದ ಪರಿಸ್ಥಿತಿ ಆಶಾದಾಯಕವಾಗಿದ್ದರೂ ಮುಂದೆ ಮಳೆ ಹೇಗೆ ಬೀಳುತ್ತದೆ ಎಂದು ಹೇಳಲಾಗುವುದಿಲ್ಲ. ಕೃಷಿ ಲಾಭದಾಯಕವಾಗಿ ಉಳಿದಿಲ್ಲ. ಬೆಳೆದರೂ ಕಷ್ಟ ಬೆಳೆಯದಿದ್ದರೂ ಕಷ್ಟ ಎನ್ನುವಂತಾಗಿದೆ. ಬೆಳೆ ಚೆನ್ನಾಗಿ ಬೆಳೆದರೆ ಬೆಲೆ ಕುಸಿತಗಳಿಂದ ಜರ್ಜರಿತರಾಗುತ್ತಿದ್ದಾರೆ.
-ಶಿವಾನಂದ ರೈತ ಅನಕಲ್
ಮಳೆ ಕೊರತೆ ಇತ್ತೀಚಿನ ವರ್ಷಗಳಲ್ಲಿ ಮಳೆಯಾಶ್ರಿತ ಕೃಷಿಗೆ ಮಳೆ ಕೊರತೆಯಾಗುತ್ತಿದೆ. ಬೆಳೆಗಳು ಉತ್ತಮವಾಗಿ ಬೆಳೆಯುತ್ತಿರುವಾಗ ಮಳೆ ಕೈಕೊಡುತ್ತದೆ. ಮನೆ ಮಂದಿಯೆಲ್ಲ ದುಡಿದರೂ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದಿಲ್ಲ. ಹೀಗಾಗಿ ರೈತರು ತರಕಾರಿ ಬೆಳೆಗಳು ಹಾಗೂ ತೋಟಗಾರಿಕೆಯ ವಾಣಿಜ್ಯ ಬೆಳೆಗಳ ಕಡೆ ಮುಖ ಮಾಡುತ್ತಿದ್ದಾರೆ.
- ಮಂಜುನಾಥ್ ರೈತ ಬಟ್ಲಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.