ಚಿಂತಾಮಣಿ: ತಾಲ್ಲೂಕಿನ ಕಸಬಾ ಹೋಬಳಿಯ ಕೋಡಿಹಳ್ಳಿ ಕೊತ್ತೂರು ಗ್ರಾಮದಲ್ಲಿ ಭಾನುವಾರ ವೃದ್ಧ ಮಹಿಳೆಯ ಕಣ್ಣಿಗೆ ಕಾರದಪುಡಿ ಎರಚಿದ ಕಳ್ಳರು ಮಹಿಳೆಯ ಕತ್ತಿನಿಂದ ಚಿನ್ನದ ಸರ ಕದ್ದು ಪರಾರಿಯಾಗಿದ್ದಾರೆ.
ಗ್ರಾಮದ ಮುನಿಯಮ್ಮ(75) ಚಿನ್ನದ ಸರ ಕಳೆದುಕೊಂಡವರು.
ಭಾನುವಾರ ನಸುಕಿನಲ್ಲಿ ಹಳೆಯ ಮನೆಯಲ್ಲಿ ಮುನಿಯಪ್ಪ ಒಬ್ಬರೇ ಮಲಗಿದ್ದ ವೇಳೆ ಕಳ್ಳರು ನುಗ್ಗಿದ್ದಾರೆ. ಮುನಿಯಮ್ಮ ಎಚ್ಚರಗೊಂಡು ಯಾರು ಎಂದು ಪ್ರಶ್ನಿಸಿದ್ದಾರೆ, ಕಳ್ಳರು ಕೂಡಲೇ ಆಕೆಯ ಕಣ್ಣಿಗೆ ಕಾರದಪುಡಿ ಎರಚಿ ಕುತ್ತಿಗೆಯಲ್ಲಿದ್ದ 18 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಕ್ಷಣಾರ್ಧದಲ್ಲಿ ಮರೆಯಾಗಿದ್ದಾರೆ.
ಕಾರದಪುಡಿಯಿಂದ ಕಣ್ಣಿನ ಉರಿ ತಾಳಲಾರದೆ ಕಿರಚಿಕೊಂಡಿದ್ದಾರೆ. ಸಮೀಪದ ಮನೆಯವರು ಬಂದು ನೋಡಿದಾಗ ಸರಕಳ್ಳತನವಾಗಿರುವುದು ಗೊತ್ತಾಗಿದೆ. ಸಮೀಪದ ಹೊಸ ಮನೆಯಲ್ಲಿ ಮನೆಯಲ್ಲಿ ಮಲಗಿದ್ದ ಆಕೆಯ ಮಗನಿಗೆ ಮಾಹಿತಿ ನೀಡಿದ್ದಾರೆ. ಅವರು ಮನೆಗೆ ಬಂದು ಕೂಡಲೇ 112 ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. 112 ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಗ್ರಾಮಾಂತರ ಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ.
ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಮುನಿಯಮ್ಮನ ಪುತ್ರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.