ಚಿಂತಾಮಣಿ: ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ, ಕೃಷಿ ವಿಜ್ಞಾನ ಕೇಂದ್ರ, ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆ ಸಹಯೋಗದಲ್ಲಿ ಶ್ರೀಗಂಧದ ಆಧಾರಿತ ಅರಣ್ಯ ಕೃಷಿ ತರಬೇತಿ ಕಾರ್ಯಾಗಾರ ನಡೆಯಿತು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಎಂ. ಪಾಪಿರೆಡ್ಡಿ ಮಾತನಾಡಿ, ಅರಣ್ಯೇತರ ಪ್ರದೇಶದ ಕೃಷಿ ಜಮೀನುಗಳಲ್ಲಿ ರೈತರು ಶ್ರೀಗಂಧ ಗಿಡಗಳನ್ನು ನೆಟ್ಟು ಸಂರಕ್ಷಿಸಿ, ಪೋಷಿಸಿ ಸಮೃದ್ಧವಾಗಿ ಬೆಳೆಸಬೇಕು. ರೈತರು ತಾವು ನೆಟ್ಟು ಬೆಳೆಸಿದ ಶ್ರೀಗಂಧ ಗಿಡಗಳಿಗೆ ಪ್ರೋತ್ಸಾಹ ರೂಪದಲ್ಲಿ ಸರ್ಕಾರದಿಂದ ಅನುದಾನ ಸಿಗುತ್ತದೆ. ಬಲಿತ ಶ್ರೀಗಂಧದ ಮರಗಳಿಂದ ತಮ್ಮ ಆರ್ಥಿಕ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು ಎಂದು ತಿಳಿಸಿದರು.
ಬೆಂಗಳೂರಿನ ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯ ವಿಜ್ಞಾನಿ ನರಸಿಂಹಮೂರ್ತಿ, ಶ್ರೀಗಂದದ ಸಸಿಗಳಿಗೆ ಕಾಂಡ ಕೊರಕ, ಬೇರು ತಿನ್ನುವ ಕೀಟಗಳು, ಎಲೆರಸ ಹೀರುವ ಕೀಟಗಳು ಬರುತ್ತವೆ. ನಿರ್ವವಹಣೆಗಾಗಿ ರಾಸಾಯನಿಕಗಳನ್ನು ಬಳಸದೆ, ಸಾವಯವ ಬೇವಿನ ಹಿಂಡಿ, ಬೇವಿನ ಎಣ್ಣೆಯನ್ನು ಸಿಂಪರಣೆ ಮಾಡಬೇಕು ಎಂದು ತಿಳಿಸಿದರು.
ಸಂಸ್ಥೆಯ ವಿಜ್ಞಾನಿ ಬಿ.ಎನ್. ದಿವಾಕರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾರ್ಟ ವುಡ್ ಅಂದಾಜಿಸುವಿಕೆ ಮತ್ತು ಶ್ರೀಗಂಧದ ಬೆಳೆಯ ಲಾಭ-ನಷ್ಟದ ಕುರಿತು ಉಪನ್ಯಾಸ ನೀಡಿದರು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ತನ್ವೀರ್ ಅಹ್ಮದ್, ಅಮೋಘವರ್ಷ ಚಿತ್ತರಗಿ, ರೈತರು ಮತ್ತು ರೈತ ಮಹಿಳೆಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.