ಚಿಂತಾಮಣಿ: ಚಿಂತಾಮಣಿ ತಾಲ್ಲೂಕಿನ ಭಕ್ತರಹಳ್ಳಿ ಅರಸೀಕೆರೆಯ ಕೆಳಭಾಗದಲ್ಲಿ ಹೊಸ ಕೆರೆ ನಿರ್ಮಾಣ ಕಾಮಗಾರಿಯನ್ನು ₹ 36 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ, ಎಚ್.ಎನ್ ವ್ಯಾಲಿಯ ನೀರನ್ನು ಶಿಡ್ಲಘಟ್ಟ ತಾಲ್ಲೂಕಿನ 45 ಮತ್ತು ಚಿಂತಾಮಣಿ ತಾಲ್ಲೂಕಿನ 119 ಕೆರೆಗಳಿಗೆ ತುಂಬಿಸುವ ₹ 237.10 ಕೋಟಿ ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ–ಈ ಎರಡು ಟಿಪ್ಪಣಿಗಳು ನಂದಿಗಿರಿಧಾಮದಲ್ಲಿ ಜು.19ರಂದು ನಿಗದಿಯಾಗಿದ್ದ ಸಚಿವ ಸಂಪುಟ ಸಭೆಯ ಕಾರ್ಯಸೂಚಿಯ ಪಟ್ಟಿಯಲ್ಲಿ ಅಡಕವಾಗಿದ್ದವು.
ನಂದಿಗಿರಿಧಾಮದ ಸಭೆಯು ವಿಧಾನಸೌಧಕ್ಕೆ ಸ್ಥಳಾಂತರವಾಯಿತು. ಹೀಗೆ ಸ್ಥಳಾಂತರ ಆಗುವ ಜೊತೆಗೆ ಕಾರ್ಯಸೂಚಿಯೂ ಬದಲಾವಣೆ ಆಯಿತು. ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಚಿಂತಾಮಣಿಯ ಈ ಯೋಜನೆ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ದೊರೆಯಲಿಲ್ಲ.
ಜುಲೈನಲ್ಲಿ ನಂದಿ ಗಿರಿಧಾಮದಲ್ಲಿ ಸಚಿವ ಸಂಪುಟ ಸಭೆ ನಡೆಸಲು ನಿರ್ಣಯಿಸಲಾಗಿದೆ. ಈ ಜುಲೈ ಸಂಪುಟ ಸಭೆಯಲ್ಲಾದರೂ ಚಿಂತಾಮಣಿಗೆ ಸಂಬಂಧಿಸಿದ ಈ ಎರಡು ಯೋಜನೆಗಳಿಗೆ ಅನುಮೋದನೆ ದೊರೆಯುತ್ತದೆಯೇ ಎನ್ನುವ ಕಾತರ ಇಲ್ಲಿನ ಜನರದ್ದಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಚಿಂತಾಮಣಿ ಶಾಸಕರ ಡಾ.ಎಂ.ಸಿ.ಸುಧಾಕರ್ ಅವರ ಆಸ್ಥೆಯ ಫಲವಾಗಿ ಈ ಯೋಜನೆಗಳು ಕಾರ್ಯಸೂಚಿ ಪಟ್ಟಿಯಲ್ಲಿದ್ದವು. ಈ ಯೋಜನೆಗಳಿಗೆ ಸಂಬಂಧಿಸಿದಂತೆ ಟಿಪ್ಪಣಿಗಳನ್ನೂ ಲಗತ್ತಿಸಲಾಗಿತ್ತು.
ಈ ಎರಡು ಯೋಜನೆಗಳಿಗೆ ಅನುಮೋದನೆ ದೊರೆತರೆ ಚಿಂತಾಮಣಿ ಜನರಿಗೆ ಸಂತಸವಾಗುತ್ತದೆ. ಜನ, ಜಾನುವಾರುಗಳಿಗೆ ಕುಡಿಯುವ ನೀರು, ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಗೆ ಅನುಕೂಲ ಆಗುತ್ತದೆ.
ನಗರಕ್ಕೆ ಕುಡಿಯುವ ನೀರು: ಚಿಂತಾಮಣಿ ನಗರಕ್ಕೆ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ನಗರದಿಂದ 14 ಕಿ.ಮೀ ದೂರದಲ್ಲಿರುವ ಭಕ್ತರಹಳ್ಳಿ-ಅರಸೀಕೆರೆ ಕೆಳಭಾಗದಲ್ಲಿ 30 ಎಕರೆ ವಿಸ್ತೀರ್ಣದಲ್ಲಿ ನೂತನ ಕೆರೆ ನಿರ್ಮಾಣ ಮಾಡಲಾಗುವುದು. 330 ಮೀಟರ್ ಉದ್ದದ ಏರಿಯ ಕಟ್ಟೆ ನಿರ್ಮಿಸಿ, 39 ಎಂ.ಸಿ.ಎಫ್.ಟಿ ನೀರು ಸಂಗ್ರಹಣೆಯ ಗುರಿ ಹೊಂದಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಭಕ್ತರಹಳ್ಳಿ-ಅರಸೀಕೆರೆಯಲ್ಲಿ 35.07 ಎಂ.ಸಿ.ಎಫ್.ಟಿ ನೀರು ಸಂಗ್ರಹಣೆ ಸಾಮರ್ಥ್ಯವಿದೆ. ಈ ಕೆರೆಯಿಂದ ನಗರಕ್ಕೆ ಪ್ರತಿನಿತ್ಯ 3 ಎಂ.ಎಲ್.ಡಿ ಹಾಗೂ ಮಾರ್ಗಮಧ್ಯದ 5 ಹಳ್ಳಿಗಳಿಗೆ 0.5 ಎಂ.ಎಲ್.ಡಿ ನೀರು ಪೂರೈಸಲು ₹ 16.31 ಕೋಟಿ ಯೋಜನೆ ರೂಪಿಸಲಾಗಿತ್ತು. ಕೆರೆಯ ಹೂಳು ತೆಗೆದು ಆಳ ಹೆಚ್ಚಿಸಿ ನೀರಿನ ಸಂಗ್ರಹವನ್ನು ಅಧಿಕಗೊಳಿಸುವುದೂ ಸೇರಿತ್ತು. ಆದರೆ ಹಣಕಾಸಿನ ಕೊರತೆ ನೆಪವೊಡ್ಡಿ ₹ 10.95 ಕೋಟಿ ಮಾತ್ರ ಅನುಮೋದನೆ ಆಗಿತ್ತು. ಅನುದಾನ ಕಡಿಮೆ ಆಗಿದ್ದರಿಂದ ಕೆರೆಯ ಹೂಳನ್ನು ತೆಗೆಯುವುದಕ್ಕೆ ಹಾಗೂ ಮಾರ್ಗಮಧ್ಯದ ಗ್ರಾಮಗಳಿಗೆ ನೀರು ಪೂರೈಸುವುದು ಸ್ಥಗಿತಗೊಳಿಸಲಾಗಿತ್ತು.
ಮಾರ್ಗಮಧ್ಯದ ಗ್ರಾಮಗಳ ಜನರು ನ್ಯಾಯಾಲಯದ ಕದ ತಟ್ಟಿ ತಡೆಯಾಜ್ಞೆ ತಂದಿದ್ದರಿಂದ ಯೋಜನೆ ತಡವಾಗಿದೆ. ಈಗ ಮುಂದಿನ ಸಚಿವ ಸಂಪುಟ ಸಭೆಯತ್ತ ತಾಲ್ಲೂಕಿನ ಜನರ ಚಿತ್ತವಿದೆ.
ಎಚ್.ಎನ್.ವ್ಯಾಲಿ: ಕೆ.ಸಿ ವ್ಯಾಲಿ ಮತ್ತು ಎಚ್.ಎನ್ ವ್ಯಾಲಿ ಎರಡು ಯೋಜನೆಗಳಿಂದಲೂ ಚಿಂತಾಮಣಿ ತಾಲ್ಲೂಕು ತಾರತಮ್ಯಕ್ಕೆ ಒಳಗಾಗಿದೆ ಎಂದು ತಾಲ್ಲೂಕಿನ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
ಕೆ.ಸಿ.ವ್ಯಾಲಿ ನೀರು ಕೋಲಾರ, ಮುಳಬಾಗಿಲು, ಶ್ರೀನಿವಾಸಪುರ ತಾಲ್ಲೂಕುಗಳಿಗೆ ಹರಿಯುತ್ತಿದೆ. ಎಚ್.ಎನ್. ವ್ಯಾಲಿ ನೀರು ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಶಿಡ್ಲಘಟ್ಟ ತಾಲ್ಲೂಕುಗಳಲ್ಲಿ ಹರಿಯುತ್ತಿದೆ. ಚಿಂತಾಮಣಿ ತಾಲ್ಲೂಕಿನಲ್ಲಿ ಮೊದಲ ಹಂತದ ಯೋಜನೆಯಲ್ಲಿ ಕುರುಟಹಳ್ಳಿ, ಮೂಡಲಚಿಂತಲಹಳ್ಳಿ, ಹಾದಿಗೆರೆ, ಆನೂರು, ದಂಡುಪಾಳ್ಯ ಸೇರಿದಂತೆ 5 ಕೆರೆಗಳಿಗೆ ಕೆಲವು ದಿನ ನೀರು ಹರಿದಿತ್ತು. ನಂತರ ಸ್ಥಗಿತಗೊಂಡು ವರ್ಷಗಳೇ ಕಳೆದಿವೆ. ಚಿಂತಾಮಣಿ ತಾಲ್ಲೂಕಿಗೆ ಒಂದು ಹನಿ ನೀರು ಹರಿಯುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಚಿಂತಾಮಣಿ ತಾಲ್ಲೂಕಿನಲ್ಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 546 ಹಾಗೂ ಸಣ್ಣ ನೀರಾವರಿ ಇಲಾಖೆಯ ಅಡಿಯಲ್ಲಿ 19 ಸೇರಿ ಒಟ್ಟು 565 ಕೆರೆಗಳಿವೆ. ಯಾವ ಕೆರೆಗಳಲ್ಲೂ ನೀರಿಲ್ಲದಿದ್ದರೂ ಯೋಜನೆಯಲ್ಲಿ ತಾಲ್ಲೂಕಿನ 5 ಕೆರೆಗಳನ್ನು ಮಾತ್ರ ಸೇರಿಸಿರುವುದು ಮಲತಾಯಿ ಧೋರಣೆಯಾಗಿದೆ ಎಂದು ಹೋರಾಟಗಾರರು ಆರೋಪಿಸುತ್ತಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎರಡನೇ ಹಂತದ ಕೆ.ಸಿ.ವ್ಯಾಲಿ ಯೋಜನೆಯಡಿ ತಾಲ್ಲೂಕಿನ 50 ಕೆರೆ ಮತ್ತು ಎಚ್.ಎನ್ ವ್ಯಾಲಿ ಯೋಜನೆಗೆ 100 ಕೆರೆಗಳನ್ನು ಸೇರಿಸಲಾಗುವುದು ಎಂದು ಡಾ.ಎಂ.ಸಿ.ಸುಧಾಕರ್ ಭರವಸೆ ನೀಡಿದ್ದರು.
ಆ ಭರವಸೆಯ ಪ್ರಕಾರ ಶಿಡ್ಲಘಟ್ಟದ 45 ಮತ್ತು ಚಿಂತಾಮಣಿಯ 119 ಕೆರೆಗಳಿಗೆ ನೀರು ತುಂಬಿಸುವ ₹ 237.10 ಕೋಟಿ ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಟಿಪ್ಪಣಿಯೂ ಸಚಿವ ಸಂಪುಟದ ಮುಂದಿತ್ತು. ಆದರೆ ಈಗ ಈ ವಿಚಾರವನ್ನೂ ಕೈ ಬಿಡಲಾಗಿದೆ.
ಈ ಎರಡು ನೀರಾವರಿ ಯೋಜನೆಗಳು ತಾಲ್ಲೂಕಿನಲ್ಲಿ ಜಾರಿ ಆಗಬೇಕು ಎನ್ನುವುದು ಚಿಂತಾಮಣಿ ಜನರ ಒತ್ತಾಸೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಾದರೂ ಇದಕ್ಕೆ ನಿಶಾನೆ ದೊರೆಯುತ್ತದೆ ಎನ್ನುವ ನಿರೀಕ್ಷೆಯನ್ನು ಹೊಂದಿದ್ದಾರೆ.
ಚಿಂತಾಮಣಿ ತಾಲ್ಲೂಕಿನಲ್ಲಿ ಒಟ್ಟು 565 ಕೆರೆಗಳು ಕೆ.ಸಿ.ವ್ಯಾಲಿ, ಎಚ್.ಎನ್.ವ್ಯಾಲಿ ನೀರಿನಿಂದಲೂ ದೂರ ನೀರಾವರಿ ಯೋಜನೆ ಜಾರಿಗೊಳಿಸುವ ಭರವಸೆ ನೀಡಿರುವ ಸಚಿವ
ನೀರಿನ ಸಮಸ್ಯೆ ಪರಿಹಾರದ ಆಶಾವಾದ ಜಿಲ್ಲೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹಾಗೂ ಪ್ರಮುಖ ವಾಣಿಜ್ಯ ಕೇಂದ್ರ ಚಿಂತಾಮಣಿಯು ನೀರಿನ ಸಮಸ್ಯೆಯಿಂದ ಬಳಲುತ್ತಿದೆ. ಹೊಸ ಕೆರೆಯ ನಿರ್ಮಾಣದಿಂದ ನೀರಿನ ಪೂರೈಕೆ ಮತ್ತು ಸಂಗ್ರಹ ಮತ್ತಷ್ಟು ಉತ್ತಮಗೊಳ್ಳುತ್ತದೆ. ಮಾರ್ಗಮಧ್ಯದ ಗ್ರಾಮಗಳಿಗೂ ನೀರು ಪೂರೈಕೆಗೆ ಸಹಕಾರಿ ಆಗುತ್ತದೆ ಎಂಬುದು ಜನರ ನಿರೀಕ್ಷೆ. ಆದಷ್ಟು ಶೀಘ್ರವಾಗಿ ಎಲ್ಲ ಪ್ರಕ್ರಿಯೆಗಳು ಮುಕ್ತಾಯವಾಗಿ ಕಾಮಗಾರಿ ಆರಂಭವಾಗಲಿ ಎಂಬುದು ಜನರ ಒತ್ತಾಸೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.