ADVERTISEMENT

ಅರಣ್ಯ ಸಿಬ್ಬಂದಿಗೆ ಸಿಎಂ ಚಿನ್ನದ ಪದಕ ಪ್ರದಾನ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 1:56 IST
Last Updated 30 ನವೆಂಬರ್ 2020, 1:56 IST
ಶಿಡ್ಲಘಟ್ಟ ವಲಯ ಅರಣ್ಯಾಧಿಕಾರಿ ಎಚ್.ಎಸ್. ಶ್ರೀಲಕ್ಷ್ಮಿ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚಿನ್ನದ ಪದಕವನ್ನು ಪ್ರದಾನ ಮಾಡಿದರು
ಶಿಡ್ಲಘಟ್ಟ ವಲಯ ಅರಣ್ಯಾಧಿಕಾರಿ ಎಚ್.ಎಸ್. ಶ್ರೀಲಕ್ಷ್ಮಿ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚಿನ್ನದ ಪದಕವನ್ನು ಪ್ರದಾನ ಮಾಡಿದರು   

ಶಿಡ್ಲಘಟ್ಟ: ವಲಯ ಅರಣ್ಯಾಧಿಕಾರಿ ಎಚ್.ಎಸ್. ಶ್ರೀಲಕ್ಷ್ಮಿ ಅವರು ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಗೆ ಘೋಷಿಸಲಾಗುವ ಮುಖ್ಯಮಂತ್ರಿಗಳ‌ ಚಿನ್ನದ ಪದಕವನ್ನು ಇತ್ತೀಚೆಗೆ ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಂದ ಪಡೆದರು.

ಶ್ರೀಲಕ್ಷ್ಮಿ ಅವರೊಂದಿಗೆ ಶಿಡ್ಲಘಟ್ಟ ಅರಣ್ಯ ರಕ್ಷಕ ಟಿ.ಡಿ. ಸಂದೀಪ್ ಮತ್ತು ಅರಣ್ಯ ಕ್ಷೇಮಾಭಿವೃದ್ಧಿ ನೌಕರ ಎ. ಶ್ರೀರಾಮಯ್ಯ ಮುಖ್ಯಮಂತ್ರಿಗಳ ಗೌರವಕ್ಕೆ ಪಾತ್ರರಾಗಿದ್ದಾರೆ.

ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ವಲಯ ಅರಣ್ಯಾಧಿಕಾರಿ ಶ್ರೀಲಕ್ಷ್ಮಿ ಸಿಬ್ಬಂದಿಯೊಂದಿಗೆ ತಾಲ್ಲೂಕಿನ ವರದನಾಯಕನಹಳ್ಳಿ ಸರ್ವೇ ನಂ. 10ರ ಅರಣ್ಯ ಭೂಮಿಯನ್ನು ರಾತ್ರೋರಾತ್ರಿ ಉಳುಮೆ ಮಾಡಲು ಬಂದವರನ್ನು ಗಟ್ಟಿತನದಿಂದ ಎದುರಿಸಿದ್ದರು. ಬೆದರಿಕೆ ಕರೆ ಬಂದರೂ ಜಗ್ಗದೆ ಒಂದಿಂಚೂ ಅರಣ್ಯ ಜಮೀನನ್ನು ಬಿಡುವುದಿಲ್ಲ ಎಂದು ಹಠತೊಟ್ಟು ಒತ್ತುವರಿ ತೆರವುಗೊಳಿಸಿದ್ದರು.

ADVERTISEMENT

ಅರಣ್ಯ ರಕ್ಷಕ ಸಂದೀಪ್, ಅರಣ್ಯ ಕ್ಷೇಮಾಭಿವೃದ್ಧಿ ನೌಕರ ಶ್ರೀರಾಮಯ್ಯ ವರದನಾಯಕನಹಳ್ಳಿಯ ಅರಣ್ಯ ಒತ್ತುವರಿ ತೆರವುಗೊಳಿಸುವ ಕಾರ್ಯದಲ್ಲಿ ಸಕ್ಷಮವಾಗಿ ಕಾರ್ಯ ನಿರ್ವಹಣೆ ಮಾಡಿದ್ದರು. ಅರಣ್ಯದಲ್ಲಿ ಅಪಘಾತಕ್ಕೀಡಾದ ಜಿಂಕೆಗಳನ್ನು ರಕ್ಷಿಸಿರುವುದಲ್ಲದೆ, ಅರಣ್ಯ ಒತ್ತುವರಿ ಗಳಿಗೆ ಸಂಬಂಧಿಸಿದಂತೆ ವಿಚಾರಣಾ ವರದಿಗಳನ್ನು ಅವರು ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.