ADVERTISEMENT

ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್–ಸಚಿವ ಸುಧಾಕರ್‌ ನಡುವೆ ಶೀತಲ ಸಮರ?

ಡಿ.ಎಂ.ಕುರ್ಕೆ ಪ್ರಶಾಂತ
Published 29 ಜನವರಿ 2024, 7:30 IST
Last Updated 29 ಜನವರಿ 2024, 7:30 IST
ಡಾ.ಎಂ.ಸಿ. ಸುಧಾಕರ್
ಡಾ.ಎಂ.ಸಿ. ಸುಧಾಕರ್   

ಚಿಕ್ಕಬಳ್ಳಾಪುರ: ‘ಸರ್ ಶಾಸಕ ಪ್ರದೀಪ್ ಈಶ್ವರ್ ಏಕೆ ಸಭೆಗೆ, ಕಾರ್ಯಕ್ರಮಕ್ಕೆ ಬಂದಿಲ್ಲ’ ಎನ್ನುವ ಮಾಧ್ಯಮದವರ ಪಶ್ನೆಗೆ, ‘ನನ್ನ ಅನುಮತಿ ಪಡೆದೇ ಕಾರ್ಯಕ್ರಮಕ್ಕೆ ಬಂದಿಲ್ಲ. ಅವರು ಮತ್ತೊಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಾರಣ ಇಲ್ಲಿಗೆ ಬಂದಿಲ್ಲ–ಇದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ‘ಸಿದ್ಧ’ ಉತ್ತರ. 

ಆಗಾಗ್ಗೆ ಸಚಿವರಿಗೆ ಎದುರಾಗುವ ಈ ಪ್ರಶ್ನೆಗೆ ಸಚಿವರು ಸಹ ಉತ್ತರವನ್ನು ಸಿದ್ಧವಾಗಿ ಇಟ್ಟುಕೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ಶಾಸಕ ಪ್ರದೀಪ್ ಈಶ್ವರ್ ಸಂಬಂಧ ಉತ್ತಮವಾಗಿಲ್ಲ ಎನ್ನುವ ಊಹಾಪೋಹಗಳು ಚಿಕ್ಕಬಳ್ಳಾಪುರ ರಾಜಕಾರಣದಲ್ಲಿ ಹೆಚ್ಚು ಚರ್ಚೆಗೆ ಕಾರಣವಾಗಿದೆ. ಈ ಮಾತುಗಳು ಖುದ್ದು ಕಾಂಗ್ರೆಸ್ ಪಡಸಾಲೆಯಿಂದಲೇ ಕೇಳಿ ಬರುತ್ತಿವೆ.

ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರು ಪಾಲ್ಗೊಳ್ಳುವ ಅಧಿಕಾರಿಗಳ ಸಭೆ, ಸಮಾರಂಭಗಳಿಗೆ ಪ್ರದೀಪ್ ಈಶ್ವರ್ ಗೈರಾಗುತ್ತಿದ್ದಾರೆ. ಸಚಿವರು ಮತ್ತು ಶಾಸಕರ ನಡುವಿನ ಶೀಲತ ಸಮರ ನಡೆಯುತ್ತಿದೆಯೇ ಎನ್ನುವ ಅನುಮಾನಕ್ಕೆ ಇದು ಪುಷ್ಠಿ ನೀಡಿದೆ. 

ADVERTISEMENT

ಜ.26ರಂದು ಚಿಕ್ಕಬಳ್ಳಾಪುರದಲ್ಲಿ ನಡೆದ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವರು ಧ್ವಜಾರೋಹಣ ನೆರವೇರಿಸಿದರು. ಈ ವೇದಿಕೆಯಲ್ಲಿಯೂ ಪ್ರದೀಪ್ ಈಶ್ವರ್ ಗೈರು ಚರ್ಚೆಗೆ ಕಾರಣವಾಗಿತ್ತು. ಆದರೆ ಸಚಿವರು ತಮ್ಮ ಭಾಷಣದಲ್ಲಿಯೇ, ‘ಪ್ರದೀಪ್ ಈಶ್ವರ್ ಮಂಚೇನಹಳ್ಳಿಯಲ್ಲಿ ಹಮ್ಮಿಕೊಂಡಿರುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಆ ಕಾರಣದಿಂದ ಇಲ್ಲಿಗೆ ಬಂದಿಲ್ಲ’ ಎಂದರು. ಆದರೆ ಡಾ.ಎಂ.ಸಿ.ಸುಧಾಕರ್ ಸ್ವಕ್ಷೇತ್ರ ಚಿಂತಾಮಣಿಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ 40 ಕಿ.ಮೀ ದೂರದ ಚಿಕ್ಕಬಳ್ಳಾಪುರಕ್ಕೆ ಬಂದಿದ್ದರು. ಚಿಕ್ಕಬಳ್ಳಾಪುರಕ್ಕೂ ಮಂಚೇನಹಳ್ಳಿಯ ನಡುವಿನ ಅಂತರ 19 ಕಿ.ಮೀ.

ಗಣರಾಜ್ಯದ ದಿನ ಜಿಲ್ಲಾ ಕೇಂದ್ರದಲ್ಲಿ ಪುಷ್ಪ ಪ್ರದರ್ಶನ, ಸಂವಿಧಾನ ಜಾಗೃತಿ ಜಾಥಾದ ಮಹತ್ವದ ಕಾರ್ಯಕ್ರಮಗಳಿಗೂ ಚಾಲನೆ ದೊರೆತಿತ್ತು. 

ಜ.24ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜ್ಯ ಮಟ್ಟದ ಬೆಸ್ಕಾಂ ಅಧಿಕಾರಿಗಳೊಂದಿಗೆ  ಕುಂದುಕೊರತೆಗಳ ಸಭೆ ನಡೆಯಿತು. ಚಿಕ್ಕಬಳ್ಳಾಪುರ ಸೇರಿದಂತೆ ಜಿಲ್ಲೆಯ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು. ಬಾಗೇಪಲ್ಲಿ, ಗೌರಿಬಿದನೂರು ಶಾಸಕರು, ಸಂಸದ ಬಿ.ಎನ್.ಬಚ್ಚೇಗೌಡ ಅವರು ಹಾಜರಾಗಿದ್ದರು. ಶಾಸಕರು ಮಾತ್ರ ಗೈರು!

ಯುವನಿಧಿ ಯೋಜನೆಯಡಿ ನೋಂದಣಿ ಜಾರಿ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ನಡೆಸಿದ ಸಭೆ . ನಂದಿ ಗಿರಿಧಾಮಕ್ಕೆ ರೋಪ್ ವೇ ನಿರ್ಮಾಣದ ವಿಚಾರವಾಗಿ ಬೆಂಗಳೂರಿನಲ್ಲಿ ಸಚಿವರು ಸಭೆ ನಡೆಸಿದ್ದಾರೆ. ಇವುಗಳಲ್ಲಿಯೂ ಪ್ರದೀಪ್ ಈಶ್ವರ್ ಗೈರಾಗಿದ್ದಾರೆ. 

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ‘ಸಚಿವರು ಮತ್ತು ಶಾಸಕರ ನಡುವೆ ಸಂಬಂಧ ಚೆನ್ನಾಗಿಲ್ಲವೇ’ ಎಂದು ಕಾಂಗ್ರೆಸ್‌ನ ಪ್ರಮುಖ ಮುಖಂಡರನ್ನು ಪ್ರಶ್ನಿಸಿದರೆ, ಅವರು ಮತ್ತಷ್ಟು ಮಾಹಿತಿಗಳನ್ನು ತಿಳಿಸುವರು. 

ಶಾಸಕರು ಮತ್ತು ಸಚಿವರ ನಡುವಿನ ಶೀತಲ ಸಮರಕ್ಕೆ ಕಾರಣಗಳೇನೂ ಎನ್ನುವ ಬಗ್ಗೆ ಕಾಂಗ್ರೆಸ್, ಬಿಜೆಪಿ ನಾಯಕರು ತಮ್ಮದೇ ಆದ ವಿಚಾರಗಳನ್ನು ಮುಂದಿಡುತ್ತಿದ್ದಾರೆ.

ಪ್ರದೀಪ್‌ ಈಶ್ವರ್‌
ತಮ್ಮದೇ ಆಡಳಿತವಿದ್ದರೂ ಪ್ರತಿಭಟಿಸಿದ್ದ ಬೆಂಬಲಿಗರು
ಮಂಡಿಕಲ್ಲು ಮತ್ತು ಪೆರೇಸಂದ್ರ ಜನರ ಆರೋಗ್ಯಕ್ಕೆ ಮತ್ತು ಪರಿಸರಕ್ಕೆ ಕಂಟಕವಾಗಿರುವ ಕ್ರಷರ್‌ಗಳನ್ನು ಸಂಪೂರ್ಣವಾಗಿ ಬಂದ್ ಮಾಡಿಯೇ ಸಿದ್ಧ ಎಂದು ಕಳೆದ ಅಕ್ಟೋಬರ್‌ನಲ್ಲಿ ಶಾಸಕ ಪ್ರದೀಪ್ ಈಶ್ವರ್ ಅವರ ನುಡಿದಿದ್ದರು. ಶಾಸಕರ ಬೆಂಬಲಿಗರು ಕ್ರಷರ್‌ ಬಂದ್‌ಗೆ ಆಗ್ರಹಿಸಿ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ಸಹ ನಡೆಸಿದ್ದರು. ಆದರೆ ಈ ಜಟಾಪಟಿ ನಡೆಯುವಾಗಲೇ ‘ಗಣಿಗಾರಿಕೆಯನ್ನು ಪೂರ್ಣವಾಗಿ ಬಂದ್ ಮಾಡಬೇಕು ಎನ್ನುವುದು ಅವೈಜ್ಞಾನಿಕ ಮತ್ತು ಕಾನೂನುಬದ್ಧವಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದರು. ‘ಗಣಿಗಾರಿಕೆಯ ಬಂದ್‌’ನ ವಿಚಾರ ಕಂದಾಯ ಸಚಿವರ ಮಟ್ಟದವರೆಗೂ ತಲುಪಿತ್ತು. ಇಲ್ಲಿಂದಲೇ ಸಚಿವರು ಮತ್ತು ಶಾಸಕರ ನಡುವೆ ತಾಳಮೇಳ ತಪ್ಪಿತು ಎನ್ನುತ್ತಾರೆ  ಕಾಂಗ್ರೆಸ್‌ನ ಪ್ರಮುಖ ಮುಖಂಡರೊಬ್ಬರು. 
ಹಿರಿಯ ನಾಯಕರ ಮುನಿಸು
ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಪ್ರದೀಪ್ ಈಶ್ವರ್ ಬಣ ಮತ್ತು ಹಿರಿಯ ಕಾಂಗ್ರೆಸ್ಸಿಗರು ಎನ್ನುವ ಮತ್ತೊಂದು ಬಣವೂ ಇದೆ. ಪ್ರದೀಪ್ ಅವರು ಶಾಸಕರಾದ ಸ್ವಲ್ಪ ದಿನಗಳಲ್ಲಿಯೇ ಹಿರಿಯ ನಾಯಕರಿಗೆ ಸ್ಪಂದಿಸುತ್ತಿಲ್ಲ ಎನ್ನುವ ಆರೋಪವಿತ್ತು. ಈಗಲೂ ಸ್ಪಂದಿಸುತ್ತಿಲ್ಲ ಎಂದು ಪಕ್ಷದ ಹಿರಿಯ ನಾಯಕರು ತಿಳಿಸುವರು. ‘ಚುನಾವಣೆಯಲ್ಲಿ ಪ್ರದೀಪ್ ಅವರ ವಿರುದ್ಧ ಕೆಲಸ ಮಾಡಿದವರು ಈಗ ‘ನಮ್ಮ’ ಶಾಸಕರು ಎಂದು ಜೊತೆಯಾಗಿದ್ದಾರೆ. ಆದರೆ ಅವರಿಗಾಗಿ ಕೆಲಸ ಮಾಡಿದ ನಾವು ದೂರವಾಗಿದ್ದೇವೆ. ಲೋಕಸಭೆ ಚುನಾವಣೆ ಮುಗಿಯಲಿ. ನಂತರ ಯಾವ ಯಾವ ತಿರುವು ಪಡೆಯುತ್ತದೆಯೊ ನೋಡಬೇಕು’ ಎಂದು ಕಾಂಗ್ರೆಸ್ ‍ಪ್ರಮುಖ ಮುಖಂಡರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.