ADVERTISEMENT

ಚಿಂತಾಮಣಿ: ಪೌರಾಯುಕ್ತ, ಸಹಾಯಕ ಎಂಜಿನಿಯರ್ ಅಮಾನತು

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 2:11 IST
Last Updated 29 ನವೆಂಬರ್ 2020, 2:11 IST

ಚಿಂತಾಮಣಿ: ನಗರಸಭೆಯಿಂದ ನಡೆದ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಿದ ಆರೋಪದ ಮೇಲೆ ಇಲ್ಲಿನ ನಗರಸಭೆಯ ಪೌರಾಯುಕ್ತ ಎಚ್.ವಿ. ಹರೀಶ್ ಮತ್ತು ಸಹಾಯಕ ಎಂಜಿನಿಯರ್ ಪದ್ಮನಾಭರೆಡ್ಡಿ ಅವರನ್ನು ಪೌರಾಡಳಿತ ನಿರ್ದೇಶಕರು ಸೇವೆಯಿಂದ ಅಮಾನತುಗೊಳಿಸಿದ್ದಾರೆ.

ನಗರದ 19ನೇ ವಾರ್ಡ್ ರಾಮಕುಂಟೆಯಲ್ಲಿ ನಗರೋತ್ಥಾನ ಯೋಜನೆಯಡಿ ₹ 6 ಲಕ್ಷ ವೆಚ್ಚದಲ್ಲಿ ಕೆಳ ಅಂತಸ್ತಿನ ಟ್ಯಾಂಕ್ ನಿರ್ಮಾಣ ಕಾಮಗಾರಿಯ ಗುದ್ದಲಿಪೂಜೆ ಬಗ್ಗೆ ಶಾಸಕರ ಗಮನಕ್ಕೆ ತಂದಿರಲಿಲ್ಲ. ಅವರನ್ನು ಸಮಾರಂಭಕ್ಕೆ ಆಹ್ವಾನಿಸದೆ ಈ ಇಬ್ಬರೇ ಗುದ್ದಲಿಪೂಜೆ ನೆರವೇರಿಸಿದ್ದರು. ಕೆಳ ಅಂತಸ್ತಿನ ಟ್ಯಾಂಕ್ ನಿರ್ಮಾಣ ಕಾಮಗಾರಿ ಬದಲಿ ಸ್ಥಳದ ಆಯ್ಕೆ ಪ್ರಕ್ರಿಯೆ ಜಾರಿಯಲ್ಲಿದ್ದರೂ ಅಂದಾಜುಪಟ್ಟಿಯಲ್ಲಿ ಅನುಮೋದನೆ ಆಗದಿರುವ ಸ್ಥಳದಲ್ಲೇ ಗುದ್ದಲಿಪೂಜೆ ನಡೆಸಿದ್ದರು.

ಸರ್ಕಾರದ ಶಿಷ್ಟಾಚಾರದಂತೆ ಸ್ಥಳೀಯ ಶಾಸಕರನ್ನು ಆಹ್ವಾನಿಸಿರಲಿಲ್ಲ. ಹಾಗಾಗಿ, ಶಾಸಕ ಎಂ. ಕೃಷ್ಣಾರೆಡ್ಡಿ ಹಕ್ಕುಚ್ಯುತಿ ಸಮಿತಿಗೆ ದೂರು ನೀಡಿದ್ದರು. ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಪೌರಾಡಳಿತ ನಿರ್ದೇಶನಾಲಯಕ್ಕೆ ಹಕ್ಕುಚ್ಯುತಿ ಸಮಿತಿ ಆದೇಶ ನೀಡಿತ್ತು. ತನಿಖೆ ನಡೆಸಿದ ಜಿಲ್ಲಾಧಿಕಾರಿ ಅವರು ಶಿಷ್ಟಾಚಾರ ಉಲ್ಲಂಘನೆ ಮಾಡಿರುವುದಾಗಿ ವರದಿ ಸಲ್ಲಿಸಿದ್ದರು.

ADVERTISEMENT

ಪೌರಾಡಳಿತ ಇಲಾಖೆಯ ನಿರ್ದೇಶಕಿ ಬಿ.ಬಿ. ಕಾವೇರಿ ಅವರು ಇಲಾಖಾ ತನಿಖೆಯನ್ನು ಕಾಯ್ದಿರಿಸಿ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.