ಗೌರಿಬಿದನೂರು: ತಾಲ್ಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ 2019-20ನೇ ಸಾಲಿನ ಸಹಕಾರಿ ವರ್ಷದ ಸರ್ವಸದಸ್ಯರ ಮಹಾಸಭೆ ಶನಿವಾರ ನಡೆಯಿತು.
ಸದಸ್ಯರು ಗ್ರಾಮೀಣ ಭಾಗದಲ್ಲಿ ರೈತರು ಅನುಭವಿಸುತ್ತಿರುವ ಸಮಸ್ಯೆ ಹಾಗೂ ಬ್ಯಾಂಕಿನಿಂದ ರೈತರಿಗೆ ದೊರೆಯುವ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ತಿಳಿಸುವಂತೆ ಕೋರಿದರು.
ಬ್ಯಾಂಕಿನ ಅಧ್ಯಕ್ಷ ಸಿ.ಎನ್.ಪ್ರಕಾಶ್ ಮಾತನಾಡಿ, ತಾಲ್ಲೂಕಿನ ರೈತರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಪಿಎಲ್‌ಡಿ ಬ್ಯಾಂಕಿನ ಎಲ್ಲ ನಿರ್ದೇಶಕರುಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಪ್ರಸ್ತುತ ವರ್ಷದಲ್ಲಿ ಸರ್ಕಾರದಿಂದ ಬಿಡುಗಡೆಯಾಗಿದ್ದ ₹1 ಕೋಟಿ ಹಣವನ್ನು ಹಂತಹಂತವಾಗಿ ರೈತರಿಗೆ ಸಾಲದ ರೂಪದಲ್ಲಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ವರ್ಷಕ್ಕೆ ₹5 ಕೋಟಿ ನೀಡುವಂತೆ ಮನವಿ ಸಲ್ಲಿಸಲಾಗಿದೆ ಎಂದರು.
ಬ್ಯಾಂಕಿಗೆ ಶಾಶ್ವತವಾದ ಕಟ್ಟಡ ಪಡೆಯುವ ನಿಟ್ಟಿನಲ್ಲಿ ಹಳೆ ತಾಲ್ಲೂಕು ಕಚೇರಿ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ 1 ಎಕರೆ ಭೂಮಿ ನೀಡುವಂತೆ ಸಚಿವರು ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಬ್ಯಾಂಕ್ ರೈತರ ಪರವಾಗಿದ್ದು ಸದಸ್ಯತ್ವ ಹಾಗೂ ಷೇರು ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಬ್ಯಾಂಕಿನ ವರ್ಷದ ಆರ್ಥಿಕ ವಹಿವಾಟಿನ ಬಗ್ಗೆ ಬ್ಯಾಂಕಿನ ವ್ಯವಸ್ಥಾಪಕ ಜಿ.ಆರ್.ವೇಣುಗೋಪಾಲ್ ತಿಳಿಸಿದರು. ಸಭೆಯಲ್ಲಿ ಬ್ಯಾಂಕಿನಲ್ಲಿ ಸಾಲ ಪಡೆದು ಮರುಪಾವತಿ ಮಾಡಿದ ರೈತರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಬ್ಯಾಂಕ್‌ನ ಉಪಾಧ್ಯಕ್ಷೆ ಶಶಿಕಲಾ, ನಿರ್ದೇಶಕ ರವಿಚಂದ್ರರೆಡ್ಡಿ, ಡಿ.ಎನ್.ಲಕ್ಷ್ಮಿಪತಿ, ವೆಂಕಟೇಶ್ ರೆಡ್ಡಿ, ಬಿ.ಎಚ್.ಜ್ಞಾನೇಶ್ವರಿ, ಮುದ್ದುಗಂಗಮ್ಮ, ಸಿ.ನಾರಾಯಣಗೌಡ, ಮಂಜುನಾಥ್, ಲಕ್ಷ್ಮಿನಾರಾಯಣ ರೆಡ್ಡಿ, ಎಚ್.ಎಂ.ಶಿವಶಂಕರ್, ಸಿ.ನಾರಾಯಣಗೌಡ, ಜೆ.ವಿ.ಹನುಮೇಗೌಡ, ರಾಮಕೃಷ್ಣ ರೆಡ್ಡಿ, ಆರ್.ವಿ.ರಾಮಕೃಷ್ಣಪ್ಪ, ನಾರಾಯಣಸ್ವಾಮಿ, ಎಸ್.ವಿ.ಸುಬ್ಬಾರೆಡ್ಡಿ, ಅರುಣ್ ಕುಮಾರ್, ಕೆ.ನಾಗಭೂಷಣ ರಾವ್, ಎಂ.ಆರ್.ಲಕ್ಷ್ಮಿನಾರಾಯಣ್, ಮೋಹನ್, ನಾಗರಾಜು, ಜಿ.ಆರ್.ರಾಜಶೇಖರ್, ರಾಮಗೋಪಾಲ್, ಮುದ್ದುರಾಮಪ್ಪ, ನಾರಾಯಣಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.