ADVERTISEMENT

ರಾಜ್ಯಕ್ಕೆ ಸಂದೇಶ ರವಾನಿಸುವ ಸಮಾವೇಶ

ಹಿಂದುಳಿದ ವರ್ಗಗಳ ಸಮಾವೇಶ; ಬಿಜೆಪಿಯಿಂದ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 5:58 IST
Last Updated 29 ಸೆಪ್ಟೆಂಬರ್ 2022, 5:58 IST
ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಸಭೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು
ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಸಭೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು   

ಚಿಕ್ಕಬಳ್ಳಾಪುರ: ಕಲಬುರ್ಗಿಯಲ್ಲಿ ಅ.30ರಂದು ಬಿಜೆಪಿಯಿಂದ ನಡೆಯಲಿರುವ ಹಿಂದುಳಿದ ವರ್ಗಗಳ ಸಮಾವೇಶವು ರಾಜ್ಯ ರಾಜಕಾರಣಕ್ಕೆ ಹೊಸ ಸಂದೇಶ ರವಾನಿಸಲಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಹಿಂದುಳಿದ ವರ್ಗಗಳ ಸಮಾವೇಶದಹಿನ್ನೆಲೆಯಲ್ಲಿ ನಗರದಲ್ಲಿ ಬಿಜೆಪಿಯು ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಹಿಂದುಳಿದ ವರ್ಗಗಳ ಸಮಾವೇಶ ರಾಜ್ಯ ರಾಜಕಾರಣದ ದಿಕ್ಕು ಬದಲಿಸಲಿದೆ. ಬಿಜೆಪಿ ಹಾಗೂ ಹಿಂದುಳಿದ ವರ್ಗಗಳಿಗೆ ಹೊಸಶಕ್ತಿ ಬರಲಿದೆ. ರಾಜ್ಯದಲ್ಲಿ 208 ಜಾತಿ ಮತ್ತು 675 ಉಪಜಾತಿಗಳಿವೆ ಎಂದು ಹೇಳಿದರು.

ADVERTISEMENT

ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಜನರಿಗೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ನರೇಂದ್ರ ಮೋದಿ ಅವರು ವಿಶ್ವನಾಯಕರಾಗಿದ್ದಾರೆ. ಬಿಜೆಪಿಯನ್ನು ಸಂಘಟಿಸಿದರೆ ಅದು ರಾಷ್ಟ್ರಕ್ಕೆ ಮತ್ತು ರಾಜ್ಯಕ್ಕೆ ನೀಡುವ ದೊಡ್ಡ ಕೊಡುಗೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್ ಮಾತನಾಡಿ, ಜಿಲ್ಲೆಯ ಎಂಟು ತಾಲ್ಲೂಕುಗಳಲ್ಲಿ ಒಟ್ಟು 16.40 ಲಕ್ಷ ಮತದಾರರು ಇದ್ದಾರೆ. ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳ ಮತಗಳು ಶೇ 61ರಷ್ಟಿದೆ. ಆದರೆ ಹಿಂದುಳಿದ ವರ್ಗಗಳು ಹರಿದು ಹಂಚಿ ಹೋಗಿವೆ. ಈ ವರ್ಗಗಳ ಜನರನ್ನು ಒಗ್ಗೂಡಿಸಬೇಕು. ಸಾಮೂಹಿಕ ನಾಯಕತ್ವ ಪ್ರದರ್ಶಿಸಬೇಕು ಎಂದು ಮನವಿ ಮಾಡಿದರು.

ಕಲಬುರ್ಗಿಯಲ್ಲಿ ನಡೆಯಲಿರುವ ಸಮಾವೇಶಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳಬೇಕು. ಈ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಬೇಕು ಎಂದರು.

ಸಚಿವ ಮುನಿರತ್ನ ಮಾತನಾಡಿ, ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯ ಬಲಿಷ್ಠ ಮುಖಂಡರಾದ ಡಾ.ಸುಧಾಕರ್ ಇದ್ದಾರೆ. ನಮಗೆ ಸಮ್ಮಿಶ್ರ ಸರ್ಕಾರ ನರಕವಾಗಿತ್ತು. ಯಾರಿಗೂ ಬೇಡವಾಗಿತ್ತು. ನಾವು 17 ಜನರಿಗೂ ಬಿಜೆಪಿ ನೆಮ್ಮದಿಯ ವಾತಾವರಣವನ್ನು ಕಲ್ಪಿಸಿದೆ ಎಂದರು.

ಸಂಸದ ಪಿ.ಸಿ.ಮೋಹನ್ ಮಾತನಾಡಿ, ಮೈಸೂರಿನಲ್ಲಿ ಪರಿಶಿಷ್ಟ ಜಾತಿ, ಬಳ್ಳಾರಿಯಲ್ಲಿ ಪರಿಶಿಷ್ಟ ಪಂಗಡ, ‌ ಶಿವಮೊಗ್ಗದಲ್ಲಿ ಯುವ ಸಮಾವೇಶ ಸಹ ನಡೆಯಲಿದೆ. ಬಸವರಾಜ ಬೊಮ್ಮಾಯಿ ಅವರು ಸರ್ಕಾರದಿಂದಲೇ ಕೈವಾರ ತಾತಯ್ಯ ಅವರ ಜಯಂತಿ ಆಚರಣೆಗೆ ಕಾರಣರಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಲಿಜ ಸಮುದಾಯ ದೊಡ್ಡ ಮಟ್ಟದಲ್ಲಿದೆ. ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ನಮ್ಮ ಜನಾಂಗದ ಕಣ್ಣುಗಳು ಎಂದು ಹೇಳಿದರು.

ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ರಾಜ್ಯದ ಒಟ್ಟು ಜನಸಂಖ್ಯೆಯ ಶೇ 50ಕ್ಕೂ ಹೆಚ್ಚು ಮಂದಿ ಹಿಂದುಳಿದ ವರ್ಗಗಳಿಗೆ ಸೇರಿದ್ದಾರೆ. ಹಿಂದುಳಿದ ವರ್ಗಗಳ ಜಾಗೃತವಾಗಬೇಕು. ನಮ್ಮ ತಂದೆ 40 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ಕೆಲಸ ಮಾಡಿದರು. ಆದರೆ ಅವರಿಗೆ ಮೋಸ ಮಾಡಲಾಯಿತು. ಹಿಂದುಳಿದ ವರ್ಗಗಳನ್ನು ಮತ ಬ್ಯಾಂಕ್ ಆಗಿ ಮಾಡಿಕೊಂಡಿರುವವರಿಗೆ ಪಾಠ ಕಲಿಸಬೇಕು ಎಂದರು.

ಬಿಜೆಪಿ ಮುಖಂಡರಾದತಾರಾ ಅನುರಾಧಾ ಮಾತನಾಡಿ, ಚಿಕ್ಕಬಳ್ಳಾಪುರ ನನ್ನ ಮನೆ. ಆ ಮನೆಗೆ ಬಂದ ಸಂತಸ ನನಗೆ ಆಗುತ್ತಿದೆ. ನಮ್ಮ ಸಮುದಾಯವು ಇಲ್ಲಿ ಹೆಚ್ಚಿದೆ. 200 ಕ್ಕೂ ಹೆಚ್ಚು ಹಿಂದುಳಿದ ಜಾತಿಗಳು ಇವೆ. ಬಿಜೆಪಿ ಈ ಸಮುದಾಯಗಳಿಗೆ ಮತ್ತು ದೇಶಕ್ಕೆ ಅಪಾರವಾದ ಯೋಜನೆಗಳನ್ನು ಕೊಟ್ಟಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಮಾತನಾಡಿ, ಅ.30ರಂದು ಕಲಬುರ್ಗಿಯಲ್ಲಿ ನಡೆಯುವ ಸಮಾವೇಶದಲ್ಲಿ ಐದು ಲಕ್ಷ ಜನರು ಪಾಲ್ಗೊಳ್ಳುವರು. ಸಮಾವೇಶಕ್ಕೆ ಜಿಲ್ಲೆಯ ಎಲ್ಲ ವರ್ಗದ ಜನರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.

ಮುಖಂಡ ಪ್ರಮೋದ್ ಮಧ್ವರಾಜ್ ಮಾತನಾಡಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಮಲಿಂಗಪ್ಪ, ಮಾಜಿ ಶಾಸಕ ಎಂ.ರಾಜಣ್ಣ, ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಗೋವಿಂದರಾಜ್, ಕಿರಣ್, ಡಾ.ಜಿ.ವಿ.ಮಂಜುನಾಥ್, ಜಿಲ್ಲಾ ಮತ್ತು ರಾಜ್ಯ ಪದಾಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.