ADVERTISEMENT

ಸಿಪಿಎಂ ನಾಯಕರ ಒಗ್ಗಟ್ಟು ಪ್ರದರ್ಶನ

ಬಾಗೇಪಲ್ಲಿ: ಆಗಸ್ಟ್‌ನಲ್ಲಿ ಪಕ್ಷದ ರಾಜ್ಯಮಟ್ಟದ ಸಮಾವೇಶ

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 4:19 IST
Last Updated 6 ಜುಲೈ 2022, 4:19 IST
ಬಾಗೇಪಲ್ಲಿ ಪಟ್ಟಣದ ರಾಮಕೃಷ್ಣ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಿದ್ಧತಾ ಸಮಾವೇಶದಲ್ಲಿ ರಾಜ್ಯ, ಜಿಲ್ಲಾ, ತಾಲ್ಲೂಕಿನ ಸಿಪಿಎಂ ನಾಯಕರು ಒಗ್ಗಟ್ಟು ಪ್ರದರ್ಶಿಸಿದರು
ಬಾಗೇಪಲ್ಲಿ ಪಟ್ಟಣದ ರಾಮಕೃಷ್ಣ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಿದ್ಧತಾ ಸಮಾವೇಶದಲ್ಲಿ ರಾಜ್ಯ, ಜಿಲ್ಲಾ, ತಾಲ್ಲೂಕಿನ ಸಿಪಿಎಂ ನಾಯಕರು ಒಗ್ಗಟ್ಟು ಪ್ರದರ್ಶಿಸಿದರು   

ಬಾಗೇಪಲ್ಲಿ: ‘ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಬಾಗೇಪಲ್ಲಿ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಗೆಲುವು ನಮಗೆ ಮುಖ್ಯವಾಗಿದೆ. ಆಗಸ್ಟ್‌ನಲ್ಲಿ ಸಿಪಿಎಂನ ರಾಜ್ಯ ಮಟ್ಟದ ರಾಜಕೀಯ ಸಮಾವೇಶವನ್ನು ಬಾಗೇಪಲ್ಲಿಯಲ್ಲಿ ಹಮ್ಮಿಕೊಂಡು ಪಕ್ಷವನ್ನು ಬಲಿಷ್ಠಗೊಳಿಸಲಾಗುವುದು’ ಎಂದು ಸಿಪಿಎಂ ರಾಜ್ಯ ಸಮಿತಿ ಕಾರ್ಯದರ್ಶಿ ಯು.ಬಸವರಾಜು ಹೇಳಿದರು.

ಸಿಪಿಎಂ ಜಿಲ್ಲಾ ಸಮಿತಿಯಿಂದ ಮಂಗಳವಾರ ರಾಜ್ಯ ಮಟ್ಟದ ರಾಜಕೀಯ ಸಮಾವೇಶ ಯಶಸ್ವಿಗೊಳಿಸಲು ಜಿಲ್ಲಾ ಮಟ್ಟದ ಸಿದ್ಧತಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

‘ಸಿಪಿಎಂಗೆ ಉಳಿಗಾಲ ಇಲ್ಲ ಎಂದು ಕೆಲ ರಾಜಕೀಯ ವಿರೋಧಿಗಳು ಹೇಳಿದ್ದಾರೆ. ನಾಯಕರಿಲ್ಲ ಎಂದ ಮಾತ್ರಕ್ಕೆ ಪಕ್ಷಕ್ಕೆ ಉಳಿಗಾಲ ಇಲ್ಲ ಎನ್ನುವುದು ರಾಜಕೀಯ ವಿರೋಧಿಗಳ ಪಿತೂರಿ. ಪಕ್ಷ ಸಂಘಟಿಸುವ ಎದೆಗಾರಿಕೆ ಇದೆ. ಜನರ ವಿಶ್ವಾಸವೇ ನಮಗೆ ಶಕ್ತಿಯಾಗಿದೆ. ಸಿಪಿಎಂ ಪಕ್ಷ ಸಂಘಟಿಸುತ್ತೇವೆ, ಚುನಾವಣೆಯಲ್ಲಿ ಸಿಪಿಎಂ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದು ಅನೇಕರು ಮುಂದಾಗಿದ್ದಾರೆ. ಇದು ಕ್ಷೇತ್ರದಲ್ಲಿ ರಾಜಕೀಯಧ್ರುವೀಕರಣದ ದಿಕ್ಸೂಚಿ ಆಗಲಿದೆ. ಸಿಪಿಎಂನಲ್ಲಿ ಗೊಂದಲ ಇಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ’ ಎಂದರು.

ADVERTISEMENT

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆರಿಗೆ ಹಣವನ್ನು ಲೂಟಿ ಮಾಡುತ್ತಿದೆ. ಇದನ್ನು ಮರೆಮಾಚಲು ಹಿಜಾಬ್, ಹಲಾಲ್‍ಕಟ್, ಪಠ್ಯಪುಸ್ತಕಗಳ ಪರಿಷ್ಕರಣೆ ಸೇರಿದಂತೆ ವಿವಿಧ ರೂಪಗಳಲ್ಲಿ ಬಿಜೆಪಿ, ಆರ್‌ಎಸ್‌ಎಸ್ ಹಾಗೂ ಮತಾಂಧ ಶಕ್ತಿಗಳು ಜನರನ್ನು ಒಕ್ಕೆಲೆಬ್ಬಿಸುವ ಕೆಲಸ ಮಾಡುತ್ತಿವೆ. ಒಂದೆಡೆ ಜಾತಿ, ಧರ್ಮಗಳ ನಡುವೆ ಕೋಮುಸಂಘರ್ಷ ಮಾಡಿಸುತ್ತಿದ್ದಾರೆ. ಮತ್ತೊಂದಡೆ ಅಪರೇಷನ್ ಕಮಲದ ಮೂಲಕ ಪ್ರಜಾಪ್ರಭುತ್ವದ ಸಂವಿಧಾನದ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿದ್ದಾರೆ’ ಎಂದು ಆರೋಪಿಸಿದರು.

ಸಿಪಿಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ, ಕ್ಷೇತ್ರದಲ್ಲಿ ಸಿಪಿಎಂ ಪಕ್ಷ ಬಲಿಷ್ಠಗೊಳಿಸಲು ಆಗಸ್ಟ್ ತಿಂಗಳಿನಲ್ಲಿ ರಾಜ್ಯ ಮಟ್ಟದ ರಾಜಕೀಯ ಸಮಾವೇಶ ಹಮ್ಮಿಕೊಂಡಿದ್ದು, ಸಮಾವೇಶಕ್ಕೆ ಸಿಪಿಎಂನ ಕೇಂದ್ರ ಸಮಿತಿ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಆಗಮಿಸಲಿದ್ದಾರೆ. ಸಮಾವೇಶದಲ್ಲಿ 30 ಸಾವಿರ ಜನರು ಭಾಗವಹಿಸಲಿದ್ದಾರೆ. ಕ್ಷೇತ್ರದಲ್ಲಿನ ಜನರು ಸಿಪಿಎಂ ಪಕ್ಷವನ್ನು ಬೆಂಬಲಿಸಿ, ಸಮಾವೇಶಕ್ಕೆ ಜನರು ಆರ್ಥಿಕ ಸಂಪನ್ಮೂಲ ಕ್ರೋಡಿಕರಣಕ್ಕೆ ಸಹಾಯಹಸ್ತ ನೀಡುವಂತೆ ಮನವಿ ಮಾಡಿದರು.

ಸಿಪಿಎಂನ ಜಿಲ್ಲಾ ಸಮಿತಿ ಸದಸ್ಯ ಡಾ.ಅನಿಲ್ ಕುಮಾರ್, ಜಿಲ್ಲಾ ಸಮಿತಿಯ ಸದಸ್ಯ ಸಿದ್ದಗಂಗಪ್ಪ, ಪಿ.ಮಂಜುನಾಥ ರೆಡ್ಡಿ, ಬಿಳ್ಳೂರು ನಾಗರಾಜ್, ಜಯರಾಮರೆಡ್ಡಿ, ಎಂ.ಎನ್.ರಘುರಾಮರೆಡ್ಡಿ, ಎಚ್.ಎ.ರಾಮಲಿಂಗಪ್ಪ, ಅಶ್ವತ್ಥಪ್ಪ, ಬಿ.ಆಂಜನೇಯರೆಡ್ಡಿ, ಹೇಮಚಂದ್ರ, ಶ್ರೀರಾಮನಾಯಕ್, ಮುಸ್ತಾಫ, ಸಾವಿತ್ರಮ್ಮ, ಫಾತೀಮಾ ಭೀ, ಭಾಸ್ಕರ ರೆಡ್ಡಿ, ಇ.ಎಸ್.ರಾಮಕೃಷ್ಣಪ್ಪ, ಜಿ.ಎನ್.ಶ್ರೀರಾಮಪ್ಪ, ದೇವಿಕುಂಟೆಡಿ ಸಿ.ಶ್ರೀನಿವಾಸ್, ಪರಗೋಡು ಶ್ರೀನಿವಾಸರೆಡ್ಡಿ, ಆಚೇಪಲ್ಲಿಮದ್ದಿರೆಡ್ಡಿ, ಎನ್.ಎಸ್.ಚಲಪತಿ, ಬೈರೆಡ್ಡಿ, ವೆಂಕಟೇಶಬಾಬು, ಸುಜಾತಮ್ಮ, ಶೌಕಿಯಾಜಮೃತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.