ADVERTISEMENT

ನಿವೇಶನಕ್ಕೆ ಒತ್ತಾಯಿಸಿ ಪ್ರತಿಭಟನೆ

ಕರ್ನಾಟಕ ಪ್ರಾಂತ ರೈತ ಸಂಘದಿಂದ ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ಜುಲೈ 2022, 5:30 IST
Last Updated 24 ಜುಲೈ 2022, 5:30 IST
ಗುಡಿಬಂಡೆ ತಾಲ್ಲೂಕು ಕಚೇರಿ ಬಳಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಭೂಮಿ ಮತ್ತು ನಿವೇಶನಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು
ಗುಡಿಬಂಡೆ ತಾಲ್ಲೂಕು ಕಚೇರಿ ಬಳಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಭೂಮಿ ಮತ್ತು ನಿವೇಶನಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು   

ಗುಡಿಬಂಡೆ: ‘ತಾಲ್ಲೂಕಿನಲ್ಲಿನ ಬಡವರಿಗೆ ಹಾಗೂ ರೈತರಿಗೆ ಜಮೀನು ಹಾಗೂ ನಿವೇಶನ ರಹಿತರರಿಗೆ ನಿವೇಶನ ನೀಡುವಲ್ಲಿ ತಾಲ್ಲೂಕು ಆಡಳಿತ ಹಾಗೂ ಶಾಸಕರು ವಿಫಲರಾಗಿದ್ದಾರೆ’ ಎಂದು ಕೆಪಿಆರ್‌ಎಸ್ ಸಂಘಟನೆಯ ಕಾರ್ಯದರ್ಶಿ ಲಕ್ಷ್ಮಿನಾರಾಯಣ ಆರೋಪಿಸಿದರು.

ತಾಲ್ಲೂಕು ಕಚೇರಿ ಮುಂಭಾಗ ಕರ್ನಾಟಕ ಪ್ರಾಂತ ರೈತ ಸಂಘದಿಂದ ಭೂಮಿ ಮತ್ತು ನಿವೇಶನಕ್ಕಾಗಿ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಸಾಗುವಳಿ ಚೀಟಿಗಾಗಿ ಉಳುವ ರೈತ ಅರ್ಜಿ ಸಲ್ಲಿಸಿ ವರ್ಷ ಕಳೆದರೂ ಭೂಮಿ ಮಂಜೂರಾತಿ ಮಾಡಲು ಆಡಳಿತ ವರ್ಗ ವಿಫಲವಾಗಿದೆ. ಈಗಾಗಲೇ ಭೂಮಿ ನೀಡುವಂತೆ ಅನೇಕ ಬಾರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಹೋರಾಟ ಹಮ್ಮಿಕೊಂಡಾಗ ಮಾತ್ರ ಆಶ್ವಾಸನೆಗಳನ್ನು ನೀಡುತ್ತ ಬರಲಾಗುತ್ತದೆ. ಶೀಘ್ರದಲ್ಲಿ ಭೂಮಿ ಮಂಜೂರಾತಿ ಪತ್ರಗಳನ್ನು ನೀಡದೇ ಇದ್ದಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ADVERTISEMENT

ತಾ.ಪಂ ಮಾಜಿ ಸದಸ್ಯ ಮಂಜುನಾಥ್ ಮಾತನಾಡಿ, ತಾಲ್ಲೂಕಿನಲ್ಲಿ ಅನೇಕರು ನಿವೇಶನಗಳಿಲ್ಲದೇ ಸಂಕಷ್ಟದಲ್ಲಿದ್ದಾರೆ. ಆದರೆ ನಿವೇಶನ ನೀಡುವಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿತಗೊಂಡಿದೆ. ರಿಯಲ್ ಎಸ್ಟೇಟ್ ಮಾಫಿಯಾಗಳಿಂದ ಗ್ರಾಮೀಣ ಭಾಗಗಳಲ್ಲೂ ನಿವೇಶನಗಳ ಬೆಲೆ ಹೆಚ್ಚಾಗಿದೆ. ಇದರಿಂದ ಬಡವರು ನಿವೇಶನ ಖರೀದಿಸಲು ಸಾಧ್ಯವಾಗದೇ ಬೀದಿಯಲ್ಲಿ ಬದುಕುವಂತಾಗಿದೆ. ಜತೆಗೆ ಗ್ರಾಮಗಳಲ್ಲಿ ಸ್ಮಶಾನದ ಸಮಸ್ಯೆ ಹೆಚ್ಚಾಗಿದ್ದು, ಸ್ಮಶಾನಕ್ಕೆ ಜಮೀನು ಮಂಜೂರು ಮಾಡಲು ತಾಲ್ಲೂಕು ಆಡಳಿತ ಮುಂದಾಗಬೇಕು ಎಂದರು.

ತಹಶೀಲ್ದಾರ್ ಸಿಗ್ಬತ್‌ಉಲ್ಲಾ ಮನವಿ ಸ್ವೀಕರಿಸಿ ಮಾತನಾಡಿ, ತಾಲ್ಲೂಕು ಆಡಳಿತ ನಿವೇಶನ ರಹಿತರರಿಗೆ ಹಾಗೂ ಸಾಗುವಳಿ ಚೀಟಿ ಮಂಜೂರು ಮಾಡಲು ರಜಾ ದಿನಗಳಲ್ಲೂ ಸಹ ಕೆಲಸ ಮಾಡಲಾಗುತ್ತಿದೆ. ಮುಂದಿನ ಮೂರು ತಿಂಗಳ ಒಳಗೆ ಫಾರಂ ನಂ 53 ಅರ್ಜಿಗಳನ್ನು ಪೂರ್ಣಗೊಳಿಸಿ ಸಾಗುವಳಿ ಚೀಟಿ ಮಂಜೂರು ಮಾಡಲು ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಕೆಪಿಆರ್‌ಎಸ್ ಸಂಘಟನೆಯ ಮುಖಂಡ ಆದಿನಾರಾಯಣ ರೆಡ್ಡಿ, ಆದಿನಾರಾಯಣ, ದೇವರಾಜು, ನಾಗರಾಜು, ಶ್ರೀನಿವಾಸ, ವೆಂಕಟರಾಜು, ಡಾ.ಮೌಲಾ, ಗೋವಿಂದಪ್ಪ, ಮೀಸಲಾಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.