ಶಿಡ್ಲಘಟ್ಟ: ಕ್ರೀಡಾ ಇಲಾಖೆಯ ಸಹಾಯಕಿ ನಿರ್ದೇಶಕಿ ಜಯಲಕ್ಷ್ಮಿ ಬಾಯಿ ಅವರನ್ನು ಭೇಟಿ ಮಾಡಿದ ರಾಷ್ಟ್ರೀಯ ಅಥ್ಲೆಟಿಕ್ ಆಟಗಾರ ಜಯಂತಿಗ್ರಾಮ ನಾರಾಯಣಸ್ವಾಮಿ ಅವರು ಜಿಲ್ಲೆಯಲ್ಲಿನ ಕ್ರೀಡಾ ಪಟುಗಳ ಸಮಸ್ಯೆಗಳನ್ನು ಮನವರಿಕೆ ಮಾಡಿ ಪರಿಹಾರ ನೀಡಲು ಮನವಿ ಮಾಡಿದರು.
ಕಳೆದ ವರ್ಷ ನಡೆದ ದಸರಾ ಕ್ರೀಡಾ ಕೂಟದಲ್ಲಿ ಜಿಲ್ಲಾ ಮಟ್ಟ ಮತ್ತು ಪ್ರಾದೇಶಿಕ ಮಟ್ಟದ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿದ ಕ್ರೀಡಾ ಪಟುಗಳಿಗೆ ಅರ್ಧದಷ್ಟು ಮಂದಿಗೆ ಪ್ರಯಾಣ ಭತ್ಯೆ, ಊಟದ ಭತ್ಯೆ ಇನ್ನೂ ಕೂಡ ಸಂದಾಯವಾಗಿಲ್ಲ. ಟ್ರ್ಯಾಕ್ ಸೂಟ್ ಕೂಡ ನೀಡಿಲ್ಲ ಎಂದು ತಿಳಿಸಿದರು.
ಶಿಡ್ಲಘಟ್ಟ ನಗರ ಹೊರವಲಯದ ಕಡದನಕುಂಟೆಯ ಸರ್ವೆ ನಂಬರ್ 10ರಲ್ಲಿ 30 ಗುಂಟೆ ಜಮೀನನ್ನು ಒಳಾಂಗಣ ಕ್ರೀಡಾ ಕೂಟಕ್ಕೆ ಮೀಸಲಿಟ್ಟಿದ್ದು ಆ ಜಾಗದಲ್ಲಿ ಸೌದೆ ಮಂಡಿ ತೆರೆದು ಜಾಗವನ್ನು ಒತ್ತುವರಿ ಮಾಡಲಾಗಿತ್ತು. ಈ ಬಗ್ಗೆ ದೂರು ನೀಡಿದ ಬಳಿಕ ಒತ್ತುವರಿ ತೆರವುಗೊಳಿಸಲಾಗಿದೆ. ಅಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಬೇಕು. ಆ ಮೂಲಕ ಒಳಾಂಗಣ ಕ್ರೀಡೆಗಳಿಗೆ ಹಾಗೂ ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ಶಿಡ್ಲಘಟ್ಟ ನಗರದ ನೆಹರೂ ಕ್ರೀಡಾಂಗಣದಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲ ಸೌಕರ್ಯ ಕೊರತೆ ಇದೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲವೇ ಇಲ್ಲ. ಶೌಚಾಲಯ ಇದೆಯಾದರೂ ಅದಕ್ಕೆ ನೀರಿನ ಸಂಪರ್ಕ ಮತ್ತು ನಿರ್ವಹಣೆ ಇಲ್ಲದೆ ಇದ್ದೂ ಇಲ್ಲದಂತಿದೆ ಎಂದರು.
ಉದ್ದ ಜಿಗಿತ ಮತ್ತು ಎತ್ತರ ಜಿಗಿತದ ಕೋರ್ಟ್‌ನಲ್ಲಿ ಮರಳು ಇಲ್ಲ. ಇದರಿಂದ ಎತ್ತರ ಜಿಗಿತ, ಉದ್ದ ಜಿಗಿತದ ಪಟುಗಳು ತರಬೇತಿ ಮತ್ತು ಅಭ್ಯಾಸ ನಡೆಸಲು ಆಗುತ್ತಿಲ್ಲ ಎಂದು ದೂರಿದರು.
ಅಹವಾಲು ಆಲಿಸಿದ ಜಯಲಕ್ಷ್ಮಿ ಬಾಯಿ, ಶೀಘ್ರದಲ್ಲೆ ಸಂಬಂದಿಸಿದ ಕಡೆ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.