ADVERTISEMENT

ಹದಗೆಟ್ಟ ಚರಂಡಿಗಳು, ಸಾರ್ವಜನಿಕರಿಗೆ ಸಂಚಕಾರ

ಮರೀಚಿಕೆಯಾದ ಕಾಲುವೆಗಳ ಸ್ವಚ್ಛತೆ, ಸಮಸ್ಯೆಗೆ ಮುಕ್ತಿ ಕಾಣದೆ ನೆಮ್ಮದಿ ಕಳೆದುಕೊಂಡ ನಾಗರಿಕರು

ಎ.ಎಸ್.ಜಗನ್ನಾಥ್
Published 16 ಫೆಬ್ರುವರಿ 2020, 9:03 IST
Last Updated 16 ಫೆಬ್ರುವರಿ 2020, 9:03 IST
ನಗರದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿನ ಅಂಚೆ ಕಚೇರಿ ಮುಂದಿರುವ ಚರಂಡಿಯ ಅವ್ಯವಸ್ಥೆ
ನಗರದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿನ ಅಂಚೆ ಕಚೇರಿ ಮುಂದಿರುವ ಚರಂಡಿಯ ಅವ್ಯವಸ್ಥೆ   

ಗೌರಿಬಿದನೂರು: ನಗರದ ಪ್ರತಿಯೊಂದು ವಾರ್ಡಿನಲ್ಲಿ ನೀರಿನ ಸಮರ್ಪಕ ಪೂರೈಕೆ ಕೊರತೆಯ ಜತೆಗೆ ಚರಂಡಿಗಳ ಸ್ವಚ್ಛತೆ ಮರೀಚಿಕೆಯಾಗಿದ್ದು, ಇದರಿಂದ ನಾಗರಿಕರ ನೆಮ್ಮದಿ ಕಸಿಯುತ್ತಿದೆ.

ನಗರ ಪುರಸಭೆಯಿಂದ ನಗರಸಭೆಗೆ ಮೇಲ್ದರ್ಜೆಗೆ ಏರಿದಾಗ ಜನತೆ ಸಹಜವಾಗಿಯೇ ಸಾಕಷ್ಟು ಅಭಿವೃದ್ಧಿಯ ನಿರೀಕ್ಷೆಯಲ್ಲಿದ್ದರು. ಆದರೆ, ನಗರಸಭೆಯಾಗಿ ಎರಡು ವರ್ಷ ಸಮೀಪಿಸುತ್ತಿದ್ದರೂ ನಗರದ ಚಿತ್ರಣ ಮಾತ್ರ ಬದಲಾಗಲೇ ಇಲ್ಲ. ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಚರಂಡಿ ವ್ಯವಸ್ಥೆ ಹಾಗೂ ಬೀದಿ ದೀಪಗಳ ನಿರ್ವಹಣೆಗಳು ಅಸಮರ್ಪಕವಾಗಿಯೇ ಉಳಿದಿದೆ ಎನ್ನುವ ಬೇಸರ ಪ್ರಜ್ಞಾವಂತ ನಾಗರಿಕರದು.

ನಗರದ ಯಾವುದೇ ವಾರ್ಡಿಗೆ ಭೇಟಿ ನೀಡಿದರೂ ಹದಗೆಟ್ಟ ಚರಂಡಿಗಳು ಮತ್ತು ಗಬ್ಬು ನಾರುವ ದುರ್ವಾಸನೆಯ ಸ್ವಾಗತ ಸಾಮಾನ್ಯವಾಗಿದೆ. ಇದರಿಂದ ಸ್ಥಳೀಯರು ಬೇಸತ್ತಿದ್ದು, ಈ ಸಮಸ್ಯೆಗೆ ಮುಕ್ತಿ ಕಾಣದೆ ಕಂಗಾಲಾಗಿದ್ದಾರೆ. ಇದನ್ನೆಲ್ಲ ಸ್ಥಳೀಯ ನಾಗರಿಕರು ಹಲವು ಬಾರಿ ವಾರ್ಡಿನ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂಬ ಅಸಮಾಧಾನ ಎಲ್ಲೆಡೆ ವ್ಯಕ್ತವಾಗುತ್ತಿದೆ.

ADVERTISEMENT

ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೆ ಅನುದಾನದ ಕೊರತೆ ಹಾಗೂ ನೀರಿನ ಸಮಸ್ಯೆಯ ಕಾರಣ ಹೇಳಿ ಸಾಗ ಹಾಕುತ್ತಾರೆ ಎನ್ನುವುದು ಬಹುತೇಕರ ಗೋಳು.

ಒಂದೆಡೆ ನೀರು ಸರಬರಾಜಿನ ಸಮಸ್ಯೆ ತಾರಕಕ್ಕೇರಿದ್ದು, ಮತ್ತೊಂದೆಡೆ ಮನೆ ಮುಂದಿನ ಹಾಗೂ ರಸ್ತೆ ಬದಿಯ ಚರಂಡಿಗಳಲ್ಲಿ ಪ್ಲಾಸ್ಟಿಕ್ ವಸ್ತುಗಳು ಹಾಗೂ ಇನ್ನಿತರ ಘನ ತ್ಯಾಜ್ಯ ತುಂಬಿಕೊಂಡು ತ್ಯಾಜ್ಯ ನೀರು ಚರಂಡಿಯಲ್ಲಿ ಹರಿಯದೆ ಮಡುಗಟ್ಟಿ ನಿಂತು, ರೋಗಕಾರಕ ಕ್ರಿಮಿಕೀಟಗಳ ಹಾವಳಿ ಹೆಚ್ಚಾಗಿ, ಜನತೆ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಬದುಕುವಂತಾಗಿದೆ.

ಇನ್ನು ನಗರದ ರಸ್ತೆ ಬದಿಯಲ್ಲಿನ ಹೋಟೆಲ್, ಕಾಂಡಿಮೆಂಟ್ಸ್ ಮತ್ತು ಚಾಟ್ಸ್ ಸೆಂಟರ್‌ಗಳಲ್ಲಿ ಬಳಸಿದ ನಿರುಪಯುಕ್ತ ವಸ್ತುಗಳು ಹಾಗೂ ಅಳಿದುಳಿದ ಪದಾರ್ಥಗಳನ್ನು ಸಮೀಪದ ಚರಂಡಿಗೆ ಎಸೆಯುತ್ತಾರೆ. ಇದರಿಂದ ಚರಂಡಿ ತಿಪ್ಪೆಗುಂಡಿಯಂತಾಗಿ ಪರಿವರ್ತನೆ ಹೊಂದಿ ಗಬ್ಬೆದ್ದು ನಾರುತ್ತಿವೆ. ಇದರ ನಡುವೆಯೇ ಕೆಲವೆಡೆ ಅಪೂರ್ಣಗೊಂಡಿರುವ ಚರಂಡಿ ಕಾಮಗಾರಿ ಗಾಯದ ಮೇಲಿನ ಬರೆಯಂತೆ ಜನರಿಗೆ ಕಿರಿಕಿರಿ ಉಂಟು ಮಾಡುತ್ತಿವೆ.

ರಸ್ತೆ ಬದಿಯಲ್ಲಿ ಸಂಚರಿಸುವ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರಂತೂ ತೆರೆದ ಚರಂಡಿ ಇರುವ ಪ್ರದೇಶಗಳಲ್ಲಿ ಮೂಗು ಮುಚ್ಚಿಕೊಂಡು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೆಡೆ ನಗರವನ್ನು ಮೇಲ್ದರ್ಜೆಗೇರಿಸುವ ಕನಸನ್ನು ಹೊತ್ತಿರುವ ಸ್ಥಳೀಯ ಶಾಸಕರು ಮತ್ತು ಅಧಿಕಾರಿಗಳು ದಶಕಗಳಿಂದ ಇಲ್ಲಿನ ಚರಂಡಿ ವ್ಯವಸ್ಥೆಗೆ ಕಾಯಕಲ್ಪ ನೀಡಲು ಸಾಧ್ಯವಾಗಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ.

‘ನಗರಕ್ಕೆ ಅಂಟಿಕೊಂಡಂತೆ ಇರುವ ಉತ್ತರ ಪಿನಾಕಿನಿ ನದಿಯಲ್ಲಿ ನೀರು ಕಂಡು ದಶಕಗಳೇ ಕಳೆದಿವೆ. ಆದರೆ ನದಿಯ ಸಮೀಪದಲ್ಲಿರುವ ಬಡಾವಣೆಯ ನಿವಾಸಿಗಳು ಬಳಸಿದ ನೀರು ಮತ್ತು ಘನ ತ್ಯಾಜ್ಯ ವಸ್ತುಗಳು ನೇರವಾಗಿ ಪಿನಾಕಿನಿಯ ಒಡಲು ಸೇರುತ್ತಿವೆ. ಮತ್ತೊಂದೆಡೆ ಸಾಕಷ್ಟು ಮಾಂಸದ ಮಾರಾಟ ಮಳಿಗೆಗಳು ನದಿಯಲ್ಲೇ ತಲೆ ಎತ್ತಿದ್ದು, ಅಳಿದುಳಿದ ತ್ಯಾಜ್ಯವನ್ನೆಲ್ಲ ನದಿಗೆ ಅರ್ಪಿಸುತ್ತಿದ್ದು, ಇದರಿಂದ ನಿತ್ಯ ನರಕ ಸದೃಶ ಕಾಣುವಂತಾಗಿದೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಮಂಜುನಾಥ್.

ಈ ಕುರಿತು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಅವರನ್ನು ಪ್ರಶ್ನಿಸಿದರೆ, ‘ನಗರದಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯನ್ನು ಕಲ್ಪಿಸಲು ಕಳೆದ ಎರಡು ದಶಕಗಳಿಂದ ಪ್ರಯತ್ನಿಸುತ್ತಿದ್ದರೂ ಸಾಧ್ಯವಾಗುತ್ತಿಲ್ಲ. ಕಾರಣ ಸಮರ್ಪಕ ನೀರು ಸರಬರಾಜು ಸಮಸ್ಯೆ, ಮತ್ತೊಂದೆಡೆ ಒಳಚರಂಡಿ ವ್ಯವಸ್ಥೆಯು ಈ ಪ್ರದೇಶಕ್ಕೆ ಸೂಕ್ತವಾಗುತ್ತಿಲ್ಲ. ಆದ್ದರಿಂದ ಸಮಸ್ಯೆಗೆ ಪರಿಹಾರ ಸಿಗದಂತಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.