ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರದ 15ನೇ ಹಣಕಾಸು ಯೋಜನೆಯಡಿ ₹ 3.27 ಕೋಟಿ ಅನುದಾನ ನಗರಸಭೆಗೆ ಬಂದಿದೆ. ಹೀಗಿದ್ದರೂ ಇದಕ್ಕೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ತಯಾರಿಸಿಲ್ಲ ಎಂದು ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ ಅವರ ಬಳಿ ಚಿಕ್ಕಬಳ್ಳಾಪುರ ನಗರಸಭೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮನವಿ ಪತ್ರ ನೀಡಿರುವ ಸದಸ್ಯರು, ಈ ಅನುದಾನದ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಿ ನಗರದ 31 ವಾರ್ಡ್‌ನಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ನಿಮಗೆ ಆಸಕ್ತಿ ಇದ್ದಂತೆ ಇಲ್ಲ. ನಾಗರಿಕರಿಗೆ ಮೂಲಸೌಕರ್ಯಗಳನ್ನು ಕೊಡಲು ವಿಫಲರಾಗಿದ್ದೀರಿ ಎಂದಿದ್ದಾರೆ.
ಸಾಮಾನ್ಯ ಸಭೆ ನಡೆಸುವಂತೆ ಜು.9ರಂದು ಪತ್ರದ ಮೂಲಕ ತಮ್ಮ ಗಮನಕ್ಕೆ ತಂದಿದ್ದೇವೆ. ಇದಾದ ಎರಡು ದಿನಗಳಲ್ಲಿಯೇ ವಿಶೇಷ ಸಭೆ ಕರೆದಿದ್ದೀರಿ. ಆದರೆ ಆ ಸಭೆಯನ್ನೂ ಮುಂದೂಡಲಾಯಿತು.
2024ರ ನವೆಂಬರ್‌ನಲ್ಲಿ ಸಾಮಾನ್ಯ ಸಭೆ ನಡೆದಿತ್ತು. 8 ತಿಂಗಳಾದರೂ ಸಾಮಾನ್ಯ ಸಭೆ ನಡೆದಿಲ್ಲ. ನಿಮಗೆ ನಗರದ ಅಭಿವೃದ್ಧಿಗೆ ಕಾಳಜಿ ಇದ್ದಂತೆ ಕಾಣಿಸುತ್ತಿಲ್ಲ ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕೂಡಲೇ ಸಾಮಾನ್ಯ ಸಭೆ ಕರೆಯಬೇಕು. ಕರ್ನಾಟಕ ಪೌರಸಭೆಗಳ ಕಾಯ್ದಯಡಿ ಸ್ಥಾಯಿ ಸಮಿತಿ ರಚನೆಗೆ ಈಗಾಗಲೇ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಆದೇಶಿಸಿದ್ದಾರೆ. ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ರಚನೆಯ ಆದೇಶವನ್ನೂ ತರಬೇಕು ಎಂದು ಒತ್ತಾಯಿಸಿದ್ದಾರೆ.
ನಗರಸಭೆ ಸದಸ್ಯರಾದ ಡಿ.ಎಸ್.ಆನಂದರೆಡ್ಡಿ ಬಾಬು, ನರಸಿಂಹಮೂರ್ತಿ, ಸುಬ್ರಹ್ಮಣ್ಯಾಚಾರಿ, ಯತೀಶ್, ಸತೀಶ್, ಮುಖಂಡರಾದ ಮುನಿರಾಜು, ತೇಜೇಂದ್ರ ನಿಯೋಗದಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.