ADVERTISEMENT

ನಾಗರಿಕರ ಕುಂದುಕೊರತೆ ಆಲಿಸಿದ ಜಿಲ್ಲಾಧಿಕಾರಿ

ನಗರದ 11ನೇ ವಾರ್ಡ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಆರ್.ಲತಾ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2020, 13:20 IST
Last Updated 25 ಆಗಸ್ಟ್ 2020, 13:20 IST
ಜಿಲ್ಲಾಧಿಕಾರಿ ಆರ್.ಲತಾ ಅವರು 11ನೇ ವಾರ್ಡ್‌ನಲ್ಲಿ ಚರಂಡಿ ಸ್ವಚ್ಛತೆ ಪರಿಶೀಲಿಸಿದರು.
ಜಿಲ್ಲಾಧಿಕಾರಿ ಆರ್.ಲತಾ ಅವರು 11ನೇ ವಾರ್ಡ್‌ನಲ್ಲಿ ಚರಂಡಿ ಸ್ವಚ್ಛತೆ ಪರಿಶೀಲಿಸಿದರು.   

ಚಿಕ್ಕಬಳ್ಳಾಪುರ: ಜಿಲ್ಲಾಧಿಕಾರಿ ಆರ್.ಲತಾ ಅವರು ಮಂಗಳವಾರ ನಗರದ 11ನೇ ವಾರ್ಡ್‍ಗೆ ಭೇಟಿ ನೀಡಿ ಸ್ವಚ್ಛತೆ ವ್ಯವಸ್ಥೆ ಪರಿಶೀಲಿಸುವ ಜತೆಗೆ ಸಾರ್ವಜನಿಕರ ಕುಂದುಕೊರತೆ ಆಲಿಸುವ ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹೋಟೆಲ್‌ವೊಂದನ್ನು ಮುಚ್ಚಿಸಿದರು.

ಈ ವೇಳೆ ಮಾತನಾಡಿದ ಅವರು, ‘11ನೇ ವಾರ್ಡ್‌ನ ಎಲ್ಲಾ ರಸ್ತೆಗಳು, ಚರಂಡಿಗಳು, ಮನೆ-ಮನೆ ಕಸ ಸಂಗ್ರಹಣೆ, ತ್ಯಾಜ್ಯ ವಿಂಗಡನೆ, ಹೋಟೆಲ್‌ಗಳ ಶುಚಿತ್ವ, ಎಲ್ಲಾ ಅಂಗಡಿಗಳ ಮುಂದೆ ಕೊರೊನಾ ಅರಿವು ಮೂಡಿಸುವ ಬ್ಯಾನರ್‌ಗಳ ಬಗ್ಗೆ ಪರಿವೀಕ್ಷಣೆ ಮಾಡಿ ವಾರ್ಡಿನ ಸ್ವಚ್ಛತೆ ಪರಿಶೀಲನೆ ಮಾಡಲಾಗುತ್ತಿದೆ’ ಎಂದರು.

‘ಪ್ರತಿಯೊಂದು ವಾರ್ಡ್‍ಗಳಲ್ಲಿಯೂ ಕೋವಿಡ್-19 ತಡೆಯಲು ಕಾರ್ಯಪಡೆ ರಚನೆ ಮಾಡಿದಂತೆ ಸ್ವಚ್ಚತೆ ಕಾಪಾಡಲು ಕ್ಯಾಪ್ಟನ್‍ಗಳನ್ನು ನೇಮಿಸುವ ಮೂಲಕ ನಗರದಲ್ಲಿ ಕಸ ಸುರಿಯುವ ಸ್ಥಳಗಳನ್ನು ಪೂರ್ತಿಯಾಗಿ ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ’ ಎಂದು ಹೇಳಿದರು.

ADVERTISEMENT

‘ನಗರದ ಸಾರ್ವಜನಿಕರಿಗೆ ಕಸ ವಿಲೇವಾರಿಯ ಬಗ್ಗೆ ಅರಿವು ಮೂಡಿಸಿ, ಮನೆಗಳಿಂದಲೇ ಒಣ ಮತ್ತು ಹಸಿ ಕಸವಾಗಿ ವಿಂಗಡಿಸಿ ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಚರಂಡಿ ಮತ್ತು ರಸ್ತೆಗಳು ಸ್ವಚ್ಚವಾಗಿರಬೇಕು ಪ್ಲಾಸ್ಟಿಕ್ ಬಳಕೆಯು ಕಡಿಮೆ ಮಾಡಲು ಅರಿವು ಮೂಡಿಸಬೇಕು. ಇದರಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಯಬಹುದು‘ ಎಂದು ತಿಳಿಸಿದರು.

‘ಪ್ರತಿದಿನ ವಾರ್ಡ್‍ಗಳ ಭೇಟಿ ಮಾಡಿ ಪರಿವೀಕ್ಷಿಸಲಾಗುತ್ತದೆ. ಇದರಿಂದ ನಗರವನ್ನು ಸ್ವಚ್ಚವಾಗಿಡಲು ಹಾಗೂ ಕೊರೊನಾದಂತಹ ಮಹಾಮಾರಿ ಹರಡದಂತೆ ತಡೆಯಲು ಸಹಕಾರಿಯಾಗುತ್ತದೆ’ ಎಂದರು.

ಚಿಕ್ಕಬಳ್ಳಾಪುರ ನಗರಸಭೆ ಆಯುಕ್ತ ಲೋಹಿತ್, ವಾರ್ಡ್ ಸದಸ್ಯರು, ಕಿರಿಯ ಎಂಜಿನಿಯರ್, ಆರೋಗ್ಯ ನಿರೀಕ್ಷಕರು, ನೋಡಲ್ ಅಧಿಕಾರಿಗಳು, ಸ್ವಚ್ಛತಾ ಕ್ಯಾಪ್ಟನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.