ADVERTISEMENT

ಸಿಒಡಿ ತನಿಖೆಗೆ ಡಿಎಸ್ಎಸ್ ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 14:54 IST
Last Updated 24 ಸೆಪ್ಟೆಂಬರ್ 2020, 14:54 IST

ಚಿಕ್ಕಬಳ್ಳಾಪುರ: ‘ಎಸ್‌ಸಿಪಿ, ಟಿಎಸ್‌ಪಿ ಯೋಜನೆಗಳ ಅನುದಾನ ದುರ್ಬಳಕೆ ಕುರಿತು ರಾಜ್ಯ ಸರ್ಕಾರ ಸಿಒಡಿ ತನಿಖೆಗೆ ನಡೆಸಬೇಕು ಎಂದು ಒತ್ತಾಯಿಸಿ ಶಾಸಕರು, ಸಂಸದರ ಮನೆ ಹಾಗೂ ಕಚೇರಿಗಳ ಎದುರು ಪ್ರತಿಭಟನೆ, ತಮಟೆ ಚಳುವಳಿ, ಬೀಗಮುದ್ರೆ, ಪ್ರತಿಭಟನಾ ರ್‍ಯಾಲಿಗಳನ್ನು ನಡೆಸಲಾಗುತ್ತದೆ’ ಎಂದು ಡಿಎಸ್‌ಎಸ್‌ ಮುಖಂಡ ಎನ್.ಮುನಿಸ್ವಾಮಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಸ್‌ಸಿಪಿ, ಟಿಎಸ್‌ಪಿ ಯೋಜನೆಗಳ ಅನುದಾನ ದುರ್ಬಳಕೆ ತನಿಖೆಗೆ ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯ ಎಲ್ಲ ತಾಲ್ಲೂಕು ಪಂಚಾಯಿತಿಗಳ ಎದುರು ಡಿಎಸ್‌ಎಸ್‌ ವತಿಯಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಯಾವೊಬ್ಬ ಅಧಿಕಾರಿ ಸಹ ಸೌಜನ್ಯಕ್ಕೂ ಪ್ರತಿಭಟನಾಕಾರರ ಅಹವಾಲು ಆಲಿಸಲು ಮುಂದಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪರಿಶಿಷ್ಟ ಜನರ ಪಾಲಿಗೆ ಕಾಮಧೇನುವಾಗಬೇಕಿದ್ದ ಎಸ್‌ಸಿಪಿ, ಟಿಎಸ್‌ಪಿ ಯೋಜನೆಗಳು ಅಧಿಕಾರಿಗಳ ಪಾಲಿಗೆ ಕಲ್ಪವೃಕ್ಷದಂತಾಗಿದ್ದು, ಅಧಿಕಾರಿಗಳು ಕೊಬ್ಬರಿ ತಿಂದು, ಶೋಷಿತ ಸಮುದಾಯದವರ ಕೈಗೆ ಚಿಪ್ಪು ನೀಡುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

‘ತಲೆತಲಾಂತರಗಳಿಂದ ಪರಿಶಿಷ್ಟ ವರ್ಗ, ಪಂಗಡದವರು ಅನುಭವಿಸುತ್ತ ಬಂದಿರುವ ತಾರತಮ್ಯ ಇಂದಿಗೂ ಕೊನೆಗೊಂಡಿಲ್ಲ. ಆದ್ದರಿಂದ ರಾಜ್ಯದ ಪ್ರತಿಯೊಬ್ಬರಿಗೂ ಅಧಿಕಾರಿಗಳು ಶೋಷಿತ ವರ್ಗಗಳಿಗೆ ಮಾಡುತ್ತಿರುವ ಮೋಸದ ಬಗ್ಗೆ ತಿಳಿಸಲು ಹಂತ ಹಂತವಾಗಿ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಎಸ್‍ಸಿಪಿ, ಟಿಎಸ್‍ಪಿ ಅನುದಾನದಲ್ಲಿ ಕಳೆದ 2014 ರಿಂದ ನಡೆದಿರುವ ಯಾವುದೇ ಕಾಮಗಾರಿಗಳಿಗೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿಲ್ಲ. ಕಾಮಗಾರಿಗಳು ನಡೆಯದೇ ಇದ್ದರೂ ಅನುದಾನ ಬಿಡುಗಡೆ ಮಾಡಿ, ಅಕ್ರಮ ನಡೆಸಲಾಗಿದೆ. ನಿಯಮ ಉಲ್ಲಂಘಿಸಿ ಹೊರರಾಜ್ಯದ ಗುತ್ತಿಗೆದಾರರಿಗೆ ನೀಡಿರುವ ಕಾಮಗಾರಿಗಳು ಕಳಪೆಯಾಗಿವೆ’ ಎಂದು ಆರೋಪಿಸಿದರು.

ಡಿಎಸ್‌ಎಸ್‌ ರಾಜ್ಯ ಘಟಕದ ಸಂಚಾಲಕ ಎನ್.ವೆಂಕಟೇಶ್ ಮಾತನಾಡಿ, ‘ರೈತ ಸಂಘಗಳು ಕರೆ ನೀಡಿರುವ ಮುಷ್ಕರಕ್ಕೆ ಸಮಿತಿಯು ಬೆಂಬಲ ಸೂಚಿಸಿದೆ’ ಎಂದು ಹೇಳಿದರು.

ಚಿಂತಕ ಗೊಲ್ಲಹಳ್ಳಿ ಶಿವಪ್ರಸಾದ್, ಡಿಎಸ್‌ಎಸ್‌ ಜಿಲ್ಲಾ ಸಂಚಾಲಕರಾದ ಸಿ.ಜಿ.ಗಂಗಪ್ಪ, ಬಿ.ವಿ.ಆನಂದ್, ಖಜಾಂಚಿ ಪಿ.ನರಸಿಂಹಮೂರ್ತಿ, ಪದಾಧಿಕಾರಿಗಳಾದ ತ್ಯಾಗರಾಜ್, ಪಿ.ಎಂ.ವೆಂಕಟೇಶ್, ಕಣಿತಹಳ್ಳಿ ಮುನಿಯಪ್ಪ, ಸಿ.ವಿ.ವೆಂಕಟೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.