ADVERTISEMENT

ಚಿಂತಾಮಣಿ| ದಾಖಲೆಗಳ ಗೊಂದಲ: ಕುಂಟುತ್ತಾ ಸಾಗಿದ ಇ-ಸ್ವತ್ತು ಅಭಿಯಾನ

ಎಂ.ರಾಮಕೃಷ್ಣಪ್ಪ
Published 13 ಜನವರಿ 2026, 4:37 IST
Last Updated 13 ಜನವರಿ 2026, 4:37 IST
<div class="paragraphs"><p>‘ಇ–ಸ್ವತ್ತು </p></div>

‘ಇ–ಸ್ವತ್ತು

   

ಚಿಂತಾಮಣಿ: ಸರ್ಕಾರ ಗ್ರಾಮೀಣ ಭಾಗಗಳಲ್ಲಿ ಗ್ರಾಮ ಪಂಚಾಯಿತಿ ಹಂತದಿಂದಲೇ ಇ-ಖಾತೆ ಅಥವಾ ಇ-ಸ್ವತ್ತು ಅಭಿಯಾನ ಆರಂಭಿಸಿದೆ. ಇದಕ್ಕಾಗಿ ತಂತ್ರಾಂಶ ಇ-ಸ್ವತ್ತು 2.0 ಅಭಿವೃದ್ಧಿಪಡಿಸಿ ‘ಸಿಟಿಜನ್ ಲಾಗಿನ್’ ಎಂದು ಹೆಸರಿಸಲಾಗಿದೆ. ಸಾರ್ವಜನಿಕರು ಇ–ಸ್ವತ್ತಿಗಾಗಿ ನೇರವಾಗಿ ಸಿಟಿಜನ್ ಲಾಗಿನ್ ಮೂಲಕ ಅರ್ಜಿಯನ್ನು ಅಪ್‌ಲೋಡ್ ಮಾಡಬೇಕು.

ತಂತ್ರಾಂಶ ಇ-ಸ್ವತ್ತು 2.1 ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಜತೆಗೆ ದಾಖಲೆಗಳಲ್ಲಿನ ಗೊಂದಲಗಳಿಂದಾಗಿ ಸರ್ಕಾರದ ಮಹತ್ವಾಂಕ್ಷಿ ಕಾರ್ಯಕ್ರಮ ತಾಲ್ಲೂಕಿನಲ್ಲಿ ಇದುವರೆಗೆ ಒಂದೇ ಒಂದು ಇ-ಸ್ವತ್ತು ಸಹ ಆಗಿಲ್ಲ. ಸಾರ್ವಜನಿಕರು ಪದೇ ಪದೇ ಗ್ರಾಮ ಪಂಚಾಯಿತಿಗಳಿಗೆ ಅಲೆದಾಡುತ್ತಿದ್ದಾರೆ.
ಸರ್ಕಾರ ಜಾಹೀರಾತು ಮತ್ತು ಪತ್ರಿಕಾ ಹೇಳಿಕೆ ಮೂಲಕ ಸಾಕಷ್ಟು ಪ್ರಚಾರ ನೀಡಿದ್ದರಿಂದ ಸಾರ್ವಜನಿಕರು ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಅಲೆದು ಅಲೆದು ಸುಸ್ತಾಗಿದ್ದಾರೆ ಅಧಿಕಾರಿಗಳಿಗೂ ಉತ್ತರ ಹೇಳಿ ಹೇಳಿ ಸಾಕಾಗಿದೆ. ಕೆಲವು ಕಡೆ ಪಂಚಾಯಿತಿ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ, ತಿಕ್ಕಾಟ ನಡೆದಿದೆ.

ADVERTISEMENT

ಸಾರ್ವಜನಿಕರು ಕ್ರಯಪತ್ರ, ಗಿಫ್ಟ್ ಡೀಡ್, ಇ.ಸಿ, ಆಧಾರ್ ಕಾರ್ಡ್ ದಾಖಲೆಗಳೊಂದಿಗೆ ನೇರವಾಗಿ ಆನ್ ಲೈನ್ ನಲ್ಲಿ ಲಾಗಿನ್ ಆಗಬೇಕು. ದಾಖಲೆಗಳನ್ನು ಪರಿಶೀಲಿಸಿ ಕ್ರಮಬದ್ಧವಾಗಿದ್ದರೆ ಅಲ್ಲಿಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಾಗಿನ್ ಗೆ ಹೋಗುತ್ತದೆ. ಅಭಿವೃದ್ಧಿ ಅಧಿಕಾರಿ ಪರಿಶೀಲನೆ ನಡೆಸಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಲಾಗಿನ್ ಗೆ ಕಳುಹಿಸುತ್ತಾರೆ. ಅವರು ತೆರಿಗೆ ನಿಗದಿಪಡಿಸಿ ಅಂಗೀಕರಿಸಿದ ನಂತರ ಮತ್ತೆ ಅಭಿವೃದ್ಧಿ ಅಧಿಕಾರಿ ಲಾಗಿನ್ ಮೂಲಕ ಸಿಟಿಜನ್ ಲಾಗಿನ್ ಗೆ ವಾಪಸ್ ಬರುತ್ತದೆ. ತೆರಿಗೆ ಬಾಕಿ ಚುಕ್ತಾ ಮಾಡಿ ಇ-ಸ್ವತ್ತಿನ ಪ್ರಿಂಟ್ ಡೌನ್ಲೋಡ್ ಮಾಡಿಕೊಳ್ಳಬಹುದು. ಮೊದಲ ಹಂತದ ಸಿಟಿಜನ್ ಲಾಗಿನ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿವೆ. ದಾಖಲೆಗಳನ್ನು ಅಪ್ ಲೋಡ್ ಮಾಡಿದರೆ ಸೇವ್ ಆಗುವುದಿಲ್ಲ. ಕಾದು ಕಾದು ವಾಪಸ್ ತೆರಳಬೇಕಾಗಿದೆ ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಸ್ವತ್ತಿನ ಇ.ಸಿ ಪಡೆಯಲು, ಬೆಸ್ಕಾಂ ಬಿಲ್ ಅಪ್ ಲೋಡ್ ಮಾಡಲು ಸಹ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ. ಮನೆಗಳ ದಾಖಲೆಗಳನ್ನು ಒದಗಿಸುವುದು ದೊಡ್ಡ ಗಂಡಾಂತರವಾಗಿ ಪರಿಣಮಿಸಿದೆ. ಗ್ರಾಮೀಣ ಭಾಗಗಳಲ್ಲಿ ಶೇ75ರಷ್ಟು ಮನೆಗಳ ದಾಖಲೆಗಳೇ ಇರುವುದಿಲ್ಲ. ತಾತಮುತ್ತಾತಂದಿರ ಕಾಲದಿಂದಲೂ ತಾತ, ಮಗ, ಮೊಮ್ಮಗ ಹೀಗೆ ಒಬ್ಬರ ನಂತರ ಮತ್ತೊಬ್ಬರು ವಾಸವಾಗಿರುತ್ತಾರೆ. ಅವರಲ್ಲಿ ಕ್ರಯಪತ್ರ, ಗಿಫ್ಟ್ ಡೀಡ್ ಮಾಡಿಸುವ ಅರಿವೇ ಇಲ್ಲ. ಸರ್ಕಾರದ ಹಂತದಲ್ಲೇ ಇದಕ್ಕೆ ಪರಿಹಾರವನ್ನು ಕಂಡುಹಿಡಿಯಬೇಕಾಗಿದೆ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಯೊಬ್ಬರು ಹೇಳಿದರು.

ಆನ್‌ಲೈನ್ ತಂತ್ರಾಂಶ ಬಳಕೆಯ ಸ್ನೇಹಿಯಾಗಿರಬೇಕು. ಕೆಲವು ಕಡೆ ಆನ್‌ಲೈನ್‌ನಲ್ಲಿ ಅರ್ಜಿಗಳು ಅಪ್ ಲೋಡ್ ಮಾಡಿದ್ದರೂ ಅಭಿವೃದ್ಧಿ ಅಧಿಕಾರಿಗಳ ಲಾಗಿನ್‌ಗೆ ಬಂದಿಲ್ಲ. ಅರ್ಜಿಗಳ ಪ್ರೊಸೆಸ್ ಸಮರ್ಪಕವಾಗಿ ಮುಕ್ತಾಯವಾಗುತ್ತಿಲ್ಲ. ಲಾಗಿನ್‌ಗೆ ಬಂದ ನಂತರ ದಿಶಾಂಕ್ ಆಪ್ ನಲ್ಲಿ ಸರ್ವೆ ಮಾಡಬೇಕು. ಜನರು ಅಲೆದು ಅಲೆದು ನಮ್ಮ ಮೇಲೆ ಮುಗಿಬೀಳುತ್ತಿದ್ದಾರೆ. ಏನು ಮಾಡಬೇಕು ಎಂದು ದಾರಿ ಕಾಣುತ್ತಿಲ್ಲ ಎಂದು ಹೆಸರು ಹೇಳಲಿಚ್ಛಿಸಿದ ಮತ್ತೊಬ್ಬ ಅಭಿವೃದ್ಧಿ ಅಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು.

ಈ ಮೊದಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಾಗಿನ್ ಮೂಲಕವೇ ಅರ್ಜಿ ಸಲ್ಲಿಕೆ ಆಗುತ್ತಿದ್ದವು. ಅದೇ ಲಗಿನ್ ಅನ್ನು ಅಪ್ ಗ್ರೇಡ್ ಮಾಡಿದ್ದರೆ ಬಹುತೇಕ ಸಮಸ್ಯೆಗಳು ನಿವಾರಣೆ ಆಗುತ್ತಿದ್ದವು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.