ADVERTISEMENT

ಚಿಕ್ಕಬಳ್ಳಾಪುರ | ದ್ರಾಕ್ಷಿ ಬೆಳೆಗಾರರ ಸಂಘ ಶೀಘ್ರ ಸ್ಥಾಪನೆ: ಕೆ.ಸುಧಾಕರ್

ಸ್ತ್ರೀಶಕ್ತಿ ಸಂಘಗಳಿಗೆ ಬಡ್ಡಿರಹಿತ ಸಾಲ: ಸಚಿವ ಡಾ.ಕೆ.ಸುಧಾಕರ್ ಭರವಸೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 6:27 IST
Last Updated 28 ಜನವರಿ 2023, 6:27 IST
ಚಿಕ್ಕಬಳ್ಳಾಪುರ ತಾಲ್ಲೂಕಿನ ಕೊಳವನಹಳ್ಳಿಯಲ್ಲಿ ನಡೆದ ಸ್ತ್ರೀ ಶಕ್ತಿ ಸಂಘಗಳಿಗೆ ಬಡ್ಡಿ ರಹಿತ ಸಾಲ ವಿತರಣೆ ನಡೆಯಿತು
ಚಿಕ್ಕಬಳ್ಳಾಪುರ ತಾಲ್ಲೂಕಿನ ಕೊಳವನಹಳ್ಳಿಯಲ್ಲಿ ನಡೆದ ಸ್ತ್ರೀ ಶಕ್ತಿ ಸಂಘಗಳಿಗೆ ಬಡ್ಡಿ ರಹಿತ ಸಾಲ ವಿತರಣೆ ನಡೆಯಿತು   

ಚಿಕ್ಕಬಳ್ಳಾಪುರ: ಕ್ಷೇತ್ರದಲ್ಲಿ ದ್ರಾಕ್ಷಿ ಬೆಳೆಗಾರರು ಹೆಚ್ಚಿದ್ದಾರೆ. ದ್ರಾಕ್ಷಿ ಬೆಳೆಗಾರರ ಸಹಕಾರ ಸಂಘ ರಚಿಸುವ ಮೂಲಕ ದ್ರಾಕ್ಷಿಗೆ ಸಂಬಂಧಿಸಿದ ಕೈಗಾರಿಕೆ ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್ ಭರವಸೆ ನೀಡಿದರು.

ತಾಲ್ಲೂಕಿನ ಕೊಳವನಹಳ್ಳಿಯಲ್ಲಿ ಶುಕ್ರವಾರ ನಡೆದ ಸ್ತ್ರೀ ಶಕ್ತಿ ಸಂಘಗಳಿಗೆ ಬಡ್ಡಿ ರಹಿತ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಶೇ 80ರಷ್ಟು ರೈತರು ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದುತ್ತಿದ್ದಾರೆ. ಅದೇ ಮಾದರಿಯಲ್ಲಿ ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರ ಕ್ಷೇತ್ರದಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.

ADVERTISEMENT

ಕಳೆದ 15 ವರ್ಷದಿಂದ ಕ್ಷೇತ್ರದಲ್ಲಿ ರಂಗೋಲಿ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಇತ್ತೀಚಿಗೆ ನಡೆದ ಚಿಕ್ಕಬಳ್ಳಾಪುರ ಉತ್ಸವದಲ್ಲಿ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದ್ದು ಇದರಲ್ಲಿ ಭಾಗವಹಿಸಿದ ಎಲ್ಲ ಸ್ಪರ್ಧಿಗಳಿಗೂ ಶೀಘ್ರದಲ್ಲಿಯೇ ಉಡುಗೊರೆಗಳನ್ನು ಮನೆಗೆ ತಲುಪಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ 33 ಸ್ವಸಹಾಯ ಗುಂಪುಗಳಿಗೆ ₹ 1.53 ಕೋಟಿ ಸಾಲದ ಚೆಕ್ ವಿತರಿಸಲಾಯಿತು.

ಫೆಬ್ರವರಿಯಲ್ಲಿ ಪ್ರಧಾನಿ ಜಿಲ್ಲೆಗೆ: ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರುವರಿಯಲ್ಲಿ ವೈದ್ಯಕೀಯ ಶಿಕ್ಷಣ ಕಾಲೇಜು ಉದ್ಘಾಟಿಸುವರು. ಪ್ರಧಾನಿಯವರನ್ನು ಕಾಣಲು ಜಿಲ್ಲೆಯ ಲಕ್ಷಾಂತರ ಜನರು ಅಂದಿನ ಕಾರ್ಯಕ್ರಮಕ್ಕೆ ಬರಲಿದ್ದಾರೆ. ಹಾಗಾಗಿ ಇದಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಡಾ.ಕೆ.ಸುಧಾಕರ್ ತಿಳಿಸಿದರು.

ಕಾಲೇಜು ಉದ್ಘಾಟನೆಗೆ ಗುತ್ತಿಗೆದಾರರು ಸೇರಿದಂತೆ ಸಂಬಂಧಿಸಿದ ಎಲ್ಲರೂ ಶ್ರಮಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ನಾಯಕರಾಗಿ ಬೆಳೆದಿದ್ದಾರೆ. ಹಿಂದುಳಿದ ವರ್ಗಗಳ ಅಗ್ರಗಣ್ಯ ನಾಯಕರಾಗಿದ್ದಾರೆ. ಬೇರೆಯವರ ರೀತಿಯಲ್ಲಿ ಅವರು ಎಂದೂ ಅಹಿಂದ ನಾಯಕ ಎಂದು ಹೇಳಿಲ್ಲ. ಪ್ರಧಾನಿ ಅವರು ದೇಶಕ್ಕೇ ಅತ್ಯಂತ ದೊಡ್ಡ ಅಹಿಂದ ನಾಯಕರಾಗಿದ್ದಾರೆ., ಅಂತಹ ನಾಯಕರು ಕ್ಷೇತ್ರಕ್ಕೆ ಬರುವ ಬಗ್ಗೆ ಜನರಲ್ಲಿಯೂ ಕುತೂಹಲ ಇದೆ ಎಂದು ಹೇಳಿದರು.

ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್, ವಕೀಲ ತಮ್ಮೇಗೌಡ, ದ್ಯಾವಣ್ಣ, ಸತೀಶ್, ಒಕ್ಕಲಿಗರ ಸಂಘದ ಖಜಾಂಚಿ ಮಂಜುನಾಥ್, ನಾರಾಯಣಸ್ವಾಮಿ, ಶಿವಣ್ಣ, ರಾಮಸ್ವಾಮಿ, ಶೈಲೇಂದ್ರ, ಮುರಳಿ, ಸ್ನೇಕ್ ಮಂಜುನಾಥ್, ನಾರಾಯಣಪ್ಪ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.