ADVERTISEMENT

ಇಕೆವೈಸಿ, ಪಡಿತರ ಕಮಿಷನ್ ಬಿಡುಗಡೆ ಮಾಡಿ: ಸರ್ಕಾರಕ್ಕೆ ಪಡಿತರ ವಿತರಕರ ಸಂಘ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 3:27 IST
Last Updated 22 ಅಕ್ಟೋಬರ್ 2021, 3:27 IST

ಚಿಕ್ಕಬಳ್ಳಾಪುರ: ಪಡಿತರ ಚೀಟಿಗೆ ಆಧಾರ್ ದೃಢೀಕರಣ (ಇಕೆವೈಸಿ) ಮಾಡಿರುವ ಹಣ ಹಾಗೂ ಪಡಿತರ ವಿತರಣೆಯ ಕಮಿಷನ್ ಹಣವನ್ನು ಸರ್ಕಾರ ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಎಂ.ಕೆ. ರಾಮಚಂದ್ರ ಆಗ್ರಹಿಸಿದರು. ‌

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಡಿತರ ಚೀಟಿಯಲ್ಲಿರುವ ಒಬ್ಬ ವ್ಯಕ್ತಿಯ ಇಕೆವೈಸಿ ಮಾಡಿದರೆ ಸರ್ಕಾರ ₹ 5 ನೀಡುತ್ತದೆ. ಗರಿಷ್ಠ ₹ 20 ಮಾತ್ರ ನೀಡುತ್ತದೆ. ಅಲ್ಲದೆ ಒಂದು ಕ್ವಿಂಟಲ್ ಪಡಿತರ ಮಾರಾಟ ಮಾಡಿದರೆ ₹ 100 ಕಮಿಷನ್ ನೀಡುತ್ತದೆ. ಪಿಎಂಜಿಕೆವೈ ಕಮಿಷನ್ ಹಣ ಸಹ ಬಿಡುಗಡೆ ಆಗಿಲ್ಲ ಎಂದು ಹೇಳಿದರು.

ಕೇಂದ್ರ ಸರ್ಕಾರದ ಪಿಎಂಜಿಕೆವೈ ಕಮಿಷನ್ ಅನ್ನು 2021ರ ಮೇಯಿಂದ ಅಕ್ಟೋಬರ್‌ವರೆಗೂ ಬಿಡುಗಡೆ ಆಗಿಲ್ಲ. ರಾಜ್ಯ ಸರ್ಕಾರ ಬಾಬತ್ತು ಜುಲೈನಿಂದ ಅಕ್ಟೋಬರ್‌ವರೆಗೆ ಬಿಡುಗಡೆ ಆಗಿಲ್ಲ. ಕಮಿಷನ್ ಬಾರದಿರುವುದರಿಂದ ಪಡಿತರ ವಿತರಕರ ಜೀವನ ನಿರ್ವಹಗೆ ತೊಂದರೆ ಆಗಿದೆ. ಸರ್ಕಾರ ಶೀಘ್ರವೇ ಕಮಿಷನ್ ಹಣ ಬಿಡುಗಡೆಗೆ ಕ್ರಮವಹಿಸಬೇಕು.ಸರ್ವರ್ ಸಮಸ್ಯೆಯೂ ತೀವ್ರವಾಗಿ ಬಾಧಿಸುತ್ತಿದೆ ಎಂದು
ಹೇಳಿದರು.

ADVERTISEMENT

ದೇಶದ ಬೇರೆ ಬೇರೆ ರಾಜ್ಯದಲ್ಲಿ ಕಮಿಷನ್ ಹಣದಲ್ಲಿ ವ್ಯತ್ಯಾಸ ಇದೆ. ಬೇರೆ ರಾಜ್ಯಗಳಲ್ಲಿ ಜಾರಿಯಲ್ಲಿ ಇರುವಂತೆ ನಮ್ಮಲ್ಲಿಯೂ ಕಮಿಷನ್ ಹಣವನ್ನು ಹೆಚ್ಚಿಸಬೇಕು. ಇಕೆವೈಸಿ ಹಣವನ್ನು ಬಿಡುಗಡೆ ಮಾಡಬೇಕು ಎಂದರು.

ಕೋವಿಡ್ ಸಂದರ್ಭದಲ್ಲಿಯೂ ನಾವು ಪಡಿತರವನ್ನು ನೀಡಿದ್ದೇವೆ. ಕೋವಿಡ್ ಕಾರಣದಿಂದ ರಾಜ್ಯದಲ್ಲಿ 100ಕ್ಕೂ ಹೆಚ್ಚು ಪಡಿತರ ವಿತರಕರು ಮೃತಪಟ್ಟಿದ್ದಾರೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿಯೂ ಕೆಲಸ ಮಾಡಿದ್ದೇವೆ. ಸರ್ಕಾರ ವಿತರಕರಿಗೆ ಜೀವ ವಿಮಾ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿಯೇ ಪಡಿತರ ವಿತರಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯು ಮೊದಲ ಸ್ಥಾನದಲ್ಲಿ ಇದೆ. ಇದು ಸಂತೋಷದ ವಿಷಯ ಎಂದು ಹೇಳಿದರು.

ಗುಡಿಬಂಡೆ ತಾಲ್ಲೂಕು ಕಾಟೇನಹಳ್ಳಿಯಲ್ಲಿ ಪಡಿತರ ಚೀಟಿ ಅಂಗಡಿ ನಡೆಸುತ್ತಿರುವ ಮಹಿಳೆಯೊಬ್ಬರು ಪರಿಶಿಷ್ಟ ಸಮುದಾಯದ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದು ಖಂಡನೀಯ. ಇದನ್ನು ಜಿಲ್ಲಾ ಸಂಘ ಖಂಡಿಸುತ್ತದೆ. ಜಿಲ್ಲೆಯಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು ಎಂದು ಹೇಳಿದರು.

ಸಂಘದ ಉಪಾಧ್ಯಕ್ಷರಾದ ಸದಾಶಿವರೆಡ್ಡಿ, ಆರ್‌. ತಿಪ್ಪಾರೆಡ್ಡಿ, ಕಾರ್ಯದರ್ಶಿ ಪಿ. ಶಿವಣ್ಣ, ಖಜಾಂಚಿ ಬಿ.ಕೆ. ವೆಂಕಟೇಶಮೂರ್ತಿ, ದ್ಯಾವಪ್ಪ, ಗೋಪಾಲರೆಡ್ಡಿ, ಸತ್ಯನಾರಾಯಣಶೆಟ್ಟಿ ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.