ADVERTISEMENT

‘ಕನ್ನಡ ನಾಡು, ನುಡಿಗೆ ಒತ್ತು’

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 2:22 IST
Last Updated 19 ಜನವರಿ 2021, 2:22 IST
ಬಾಗೇಪಲ್ಲಿ ಪಟ್ಟಣದ ಪ್ರವಾಸಿ ಮಂದಿರದ ಮುಂದೆ ಗಣ್ಯರು ಕರಪತ್ರಗಳನ್ನು ಪ್ರದರ್ಶನ ಮಾಡಿದರು
ಬಾಗೇಪಲ್ಲಿ ಪಟ್ಟಣದ ಪ್ರವಾಸಿ ಮಂದಿರದ ಮುಂದೆ ಗಣ್ಯರು ಕರಪತ್ರಗಳನ್ನು ಪ್ರದರ್ಶನ ಮಾಡಿದರು   

ಬಾಗೇಪಲ್ಲಿ: ‘ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷ ಮತ್ತು ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದೇನೆ. ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ಹೋರಾಟದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದೇನೆ. ಈಗ ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದು, ಸದಸ್ಯರು ನನಗೆ ಬೆಂಬಲ ನೀಡಬೇಕು’ ಎಂದು ಕಸಾಪ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ವ.ಚ. ಚನ್ನೇಗೌಡ ಮನವಿ ಮಾಡಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ಸೋಮವಾರ ಕನ್ನಡ ಸಾಹಿತ್ಯ ಪರಿಷತ್‌ನ ಸದಸ್ಯರು ಹಾಗೂ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಭೇಟಿ ಮಾಡಿ ಮತಯಾಚಿಸಿ ಅವರು ಮಾತನಾಡಿದರು.

ಪ್ರತಿವರ್ಷ ಹಿರಿಯ ಸಾಹಿತಿಗಳನ್ನು ಗುರುತಿಸಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ನೃಪತುಂಗ ಸಾಹಿತ್ಯ ಪ್ರಶಸ್ತಿ ನೀಡುತ್ತಿದೆ. ಇದು ದೇಶದಲ್ಲಿಯೇ ದೊಡ್ಡ ಸಾಹಿತ್ಯ ಪ್ರಶಸ್ತಿಯಾಗಿದೆ. ಯುವ ಬರಹಗಾರರಿಗೆ ₹ 25 ಸಾವಿರವನ್ನು ಮಯೂರ ವರ್ಮ ಹೆಸರಿನಲ್ಲಿ ನಗದು ಪುರಸ್ಕಾರ ನೀಡಲಾಗಿದೆ. ಹಿರಿಯರಿಗೆ ಕರ್ನಾಟಕ ಚೂಡಾಮಣಿ, ರಂಗ ಕಲಾವಿದರಿಗೆ ಡಾ.ರಾಜ್ ಕುಮಾರ್ ರಂಗ ಪ್ರಶಸ್ತಿಗಳನ್ನು ನನ್ನ ಅವಧಿಯಲ್ಲಿ ನೀಡಲಾಗಿದೆ ಎಂದು ತಿಳಿಸಿದರು.

ADVERTISEMENT

‘ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ 4 ವರ್ಷ 8 ತಿಂಗಳು ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಅನುಭವ ಇದೆ. ಅಧ್ಯಕ್ಷರಾದರೆ ಪರಿಷತ್ ಸದಸ್ಯತ್ವವನ್ನು ಹೆಚ್ಚಿಸಲಾಗುವುದು’ ಎಂದು ಹೇಳಿದರು.

ಮತಯಾಚನೆಯಲ್ಲಿ ಕ್ಯಾಥೋಲಿಕ್ ಕನ್ನಡ ಭಾಷಾ ಅಧ್ಯಕ್ಷ ಜೋಸೆಫ್, ಕನ್ನಡ ಕ್ರಿಯಾ ಸಮಿತಿ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸನಾಯ್ಡು, ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷರಾದ ಬಿ.ಆರ್. ನರಸಿಂಹನಾಯ್ಡು, ಬಿ.ಆರ್. ಕೃಷ್ಣ, ಪ್ರಾಧ್ಯಾಪಕ ಡಾ.ಕೆ.ಎಂ. ನಯಾಜ್ ಅಹಮದ್, ಕ್ರಿಯಾ ಸಮಿತಿಯ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ್, ಜಿಲ್ಲಾ ಸಂಚಾಲಕ ಹರೀಶ್, ಸಹ ಕಾರ್ಯದರ್ಶಿ ರವಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.