ಬಾಗೇಪಲ್ಲಿ: ಪಟ್ಟಣದ ಡಿವಿಜಿ ಮುಖ್ಯರಸ್ತೆಯಲ್ಲಿ ಸೋಮವಾರ ಅಂಗಡಿ ಮಾಲೀಕರ ವಸ್ತುಗಳನ್ನು, ಚಪ್ಪರಗಳನ್ನು, ಸೀಮೆಂಟ್ ಕಟ್ಟೆಗಳನ್ನು ಜೆಸಿಬಿ ಯಂತ್ರ ಹಾಗೂ ಟ್ರಾಕ್ಟರ್ ಮೂಲಕ ತೆರವು ಮಾಡಲಾಯಿತು.
ಪಟ್ಟಣದ ಪುರಸಭೆ ಕಾರ್ಯಾಲಯದ ಮುಂಭಾಗದಿಂದ ನ್ಯಾಷನಲ್ ಕಾಲೇಜಿನವರಿಗೂ ಮುಖ್ಯರಸ್ತೆಯ ಇಕ್ಕೆಲಗಳ ಪಾದಚಾರಿ ಮಾರ್ಗದಲ್ಲಿ ಬೀದಿ ವ್ಯಾಪಾರಿಗಳು, ಅಂಗಡಿಗಳ ಮಾಲೀಕರು ಹೂವು, ಹಣ್ಣು, ತರಕಾರಿ ಹಾಗೂ ಇತರ ದಿನಬಳಕೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಇದರಿಂದ ಪಾದಚಾರಿಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು. ಪಾದಚಾರಿ ಮಾರ್ಗದಲ್ಲಿ ಜಾಗವಿಲ್ಲದೆ, ನಡು ರಸ್ತೆಯಲ್ಲಿ ಸಂಚರಿಸಬೇಕಾಗಿತ್ತು. ಈ ಬಗ್ಗೆ ಸಾರ್ವಜನಿಕರು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದರು.
ನಾಲ್ಕು ದಿನಗಳ ಹಿಂದೆಯೇ ಪುರಸಭೆ ಅಧಿಕಾರಿಗಳು ಕರಪತ್ರಗಳನ್ನು ನೀಡಿ ಪಾದಚಾರಿ ರಸ್ತೆ ಅತಿಕ್ರಮಣ ತೆರವು ಮಾಡುವಂತೆ ಧ್ವನಿವರ್ಧಕದ ಮೂಲಕ ಆದೇಶಿಸಿದ್ದರು. ಡಿಸೆಂಬರ್ 5ರ ಒಳಗೆ ಸ್ವಯಂಪ್ರೇರಿತವಾಗಿ ತೆರವು ಮಾಡಿಕೊಳ್ಳಬೇಕು. ಡಿಸೆಂಬರ್ 6ರ ಸೋಮವಾರ ತೆರವು ಕಾರ್ಯಾಚರಣೆ ಮಾಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್ ಎಚ್ಚರಿಕೆ ನೀಡಿದ್ದರು. ಅದರಂತೆ ಸೋಮವಾರ ಬೆಳಗ್ಗೆ ಪುರಸಭಾ ಕಾರ್ಯಾಲಯದ ಮುಂಭಾಗದಿಂದ, ಡಾ.ಎಚ್.ಎನ್. ವೃತ್ತದವರಿಗೂ ಪಾದಚಾರಿ ರಸ್ತೆಯ ಮೇಲೆ ಇರಿಸಿದ ಅಂಗಡಿಗಳು, ಚಪ್ಪರಗಳು, ವಸ್ತುಗಳನ್ನು, ಹೂವು, ಹಣ್ಣು ತರಕಾರಿಗಳನ್ನು, ನಾಮಫಲಕಗಳನ್ನು ತೆರವು ಮಾಡಲಾಯಿತು.
ಕೆಲ ಅಂಗಡಿಯವರು ಸ್ವಯಂಪ್ರೇರಿತವಾಗಿ ವಸ್ತುಗಳನ್ನು ತೆರವು ಮಾಡಿದ್ದರು. ಸಿಮೆಂಟ್, ಕಲ್ಲುಬಂಡಗಳಿಂದ ನಿರ್ಮಿಸಿದ್ದ ಮೆಟ್ಟಿಲುಗಳನ್ನು, ಚಪ್ಪರಗಳನ್ನು ಜೆಸಿಬಿ ಯಂತ್ರದಿಂದ ತೆರವು ಮಾಡಲಾಯಿತು. ಕಲ್ಲು, ಸಿಮೆಂಟ್, ಬ್ಯಾನರ್, ಕಸ, ತ್ಯಾಜ್ಯಗಳನ್ನು ಪೌರಕಾರ್ಮಿಕರು ಟ್ರಾಕ್ಟರ್ ಗಳಿಗೆ ತುಂಬಿಸಿದರು.
'ಪಟ್ಟಣದಲ್ಲಿ ಒಂದೇ ಒಂದು ಮುಖ್ಯರಸ್ತೆ ಇದೆ. ಇದೇ ರಸ್ತೆಯಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಿದೆ. ಬೀದಿಬದಿ ವ್ಯಾಪಾರಸ್ಥರು ಪಾದಚಾರಿ ಮಾರ್ಗದಲ್ಲಿ ರಸ್ತೆ ಅತಿಕ್ರಮಣ ಮಾಡಿ ವ್ಯಾಪಾರ ಮಾಡುತ್ತಿರುವುದರಿಂದ, ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗಿದೆ ಎಂದು ಸಾರ್ವಜನಿಕರು ತಿಳಿಸಿದರು.
ತೆರವು ಮಾಡಿದ ನಂತರ ಮತ್ತೆ ಪಾದಚಾರಿ ರಸ್ತೆಯನ್ನು ಅತಿಕ್ರಮಣ ಮಾಡಿ ವ್ಯಾಪಾರ ಶುರು ಮಾಡಿದರೆ ದಂಡ ವಿಧಿಸಲಾಗುವುದು ಎಂದು ಪುರಸಭಾ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್ 'ಪ್ರಜಾವಾಣಿ'ಗೆ ತಿಳಿಸಿದರು.
'ಮುಖ್ಯರಸ್ತೆಯಲ್ಲಿ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗುವುದು. ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡಿದರೆ ದಂಡ ವಿಧಿಸಲಾಗುವುದು. ವಾಹನ ಸವಾರರು ರಸ್ತೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪಾರ್ಕಿಂಗ್ ಸ್ಥಳಗಳಲ್ಲಿ ಮಾತ್ರ ವಾಹನಗಳನ್ನು ನಿಲ್ಲಿಸಬೇಕು’ ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಪ್ರಶಾಂತ್ ವರ್ಣಿ ಹೇಳಿದರು.
ತೆರವು ಕಾರ್ಯಾಚರಣೆಯಲ್ಲಿ ಪುರಸಭಾ ವ್ಯವಸ್ಥಾಪಕ ಆಂಜನೇಯಲು, ಆರೋಗ್ಯ ನಿರೀಕ್ಷಕಿ ಉಷಾರಾಣಿ, ಅಧಿಕಾರಿ ಅಥಾವುಲ್ಲಾ, ಕೃಷ್ಣಪ್ಪ, ಜಾವೇದ್ ಅಹಮದ್, ಪೌರಕಾರ್ಮಿಕ ಮೇಸ್ತ್ರೀ ಶಿವಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.