ADVERTISEMENT

ಹಳ್ಳಿ ಶಾಲಾ ಮಕ್ಕಳ ಇಂಗ್ಲಿಷ್ ನಾಟಕ

ವೈರಲ್ ಆದ ವೀಡಿಯೋ: ಎಲ್ಲರಿಂದ ಮೆಚ್ಚುಗೆ

ಡಿ.ಜಿ.ಮಲ್ಲಿಕಾರ್ಜುನ
Published 1 ಜುಲೈ 2021, 4:22 IST
Last Updated 1 ಜುಲೈ 2021, 4:22 IST
‘ಎ ಬಿಗ್ ‘ನೋ’ ಟು ಡ್ರಗ್ಸ್’ ಇಂಗ್ಲಿಷ್‌ ನಾಟಕದಲ್ಲಿ ಅಭಿನಯಿಸಿದ ಪೆಂಡ್ಲಿವಾರಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು
‘ಎ ಬಿಗ್ ‘ನೋ’ ಟು ಡ್ರಗ್ಸ್’ ಇಂಗ್ಲಿಷ್‌ ನಾಟಕದಲ್ಲಿ ಅಭಿನಯಿಸಿದ ಪೆಂಡ್ಲಿವಾರಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು   

ಶಿಡ್ಲಘಟ್ಟ: ತಾಲ್ಲೂಕಿನ ಪೆಂಡ್ಲಿವಾರಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ‘ನಾಟಕದ ಮೂಲಕ ಇಂಗ್ಲಿಷ್ ಕಲಿಕೆ’ ಎಂಬ ಪರಿಕಲ್ಪನೆಯಲ್ಲಿ ಮಕ್ಕಳಿಂದ ಮಾಡಿಸಿರುವ ನಾಟಕದ ವಿಡಿಯೊ ಇದೀಗ ವೈರಲ್ ಆಗಿದ್ದು, ವಿದೇಶದಲ್ಲೂ ಅಪಾರ ಜನಮನ್ನಣೆಗೆ ಪಾತ್ರವಾಗಿದೆ.

ಮಕ್ಕಳಿಗೆ ಚಟುವಟಿಕೆಗಳ ಮೂಲಕ ಇಂಗ್ಲಿಷ್ ಬೇಸಿಕ್ ಹಾಗೂ ಸಾಹಿತ್ಯದ ಪಾಠ ಮಾಡುವ ಮೈಸೂರಿನ ‘ಚಿಲ್ರ್ಡನ್ಸ್ ಲಿಟರರಿ ಕ್ಲಬ್’ ಈಗಾಗಲೇ ಸಾವಿರಾರು ಕಾರ್ಯಕ್ರಮಗಳನ್ನು ಮಕ್ಕಳಿಗಾಗಿ ನಡೆಸಿದೆ. ಇದರ ಪ್ರಮುಖ ರೂವಾರಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರಾದ ಡಾ.ಆರ್. ಪೂರ್ಣಿಮಾ.

ಈ ಕ್ಲಬ್ ವತಿಯಿಂದ ಆಯೋಜಿಸುವ ಮಕ್ಕಳ ಇಂಗ್ಲಿಷ್ ನಾಟಕಗಳಿಂದ ಹಲವು ಮಕ್ಕಳು ಸರಳವಾಗಿ ಇಂಗ್ಲಿಷ್ ಮಾತನಾಡಲು ಸಾಧ್ಯವಾಗಿದೆ. ಶಿಡ್ಲಘಟ್ಟ ತಾಲ್ಲೂಕಿನ ಕೆಲವು ಮಕ್ಕಳಿಗೆ ಈ ಕ್ಲಬ್ ವತಿಯಿಂದ ನಡೆಸಲಾದ ನಾಟಕ ತರಬೇತಿಯಲ್ಲಿ ಪಾಲ್ಗೊಳ್ಳುವ ಅವಕಾಶವೂ ಲಭಿಸಿದೆ.

ADVERTISEMENT

ತಾಲ್ಲೂಕಿನ ಪೆಂಡ್ಲಿವಾರಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ಇವರ ಇಂಗ್ಲಿಷ್ ನಾಟಕವಾಡಿದ್ದಾರೆ. ಪೂರ್ಣಿಮಾ ಅವರು ಬರೆದು ನಿರ್ದೇಶಿಸಿದ ‘ಎ ಬಿಗ್ ‘ನೋ’ ಟು ಡ್ರಗ್ಸ್’ ಎಂಬ ನಾಟಕವನ್ನು ಮಕ್ಕಳಿಗೆ ತರಬೇತಿ ನೀಡಿದ್ದು ಅದೇ ಶಾಲೆಯ ಶಿಕ್ಷಕಿ ಉಷಾ. ಪೂರ್ಣಿಮಾ ಅವರ ಮಾರ್ಗದರ್ಶನದಲ್ಲಿ ಮೂಡಿಬಂದ ಈ ನಾಟಕದಲ್ಲಿ ಮಕ್ಕಳು ಇಂಗ್ಲಿಷ್ ಸಂಭಾಷಣೆಗಳನ್ನು ಅರಳು ಹುರಿದಂತೆ ಹೇಳುವುದನ್ನು ಕೇಳಿದರೆ ಯಾರಾದರೂ ಅಬ್ಬಾ ಎನ್ನಬೇಕು. ತಾಲ್ಲೂಕಿನ ಗಡಿ ಭಾಗದ ಹಳ್ಳಿ ಮಕ್ಕಳು ಈ ನಾಟಕದಲ್ಲಿ ಪಾತ್ರಧಾರಿಗಳಾಗಿ ಇಂಗ್ಲಿಷ್ ಮಾತುಗಳನ್ನು ಸುಲಲಿತವಾಗಿ ಒಪ್ಪಿಸಿ, ಸೈ ಎನಿಸಿಕೊಂಡಿರುವುದು ಗಮನಾರ್ಹ.

‘2017 ರಲ್ಲಿ ಡಾ.ಪೂರ್ಣಿಮಾ ಅವರು ನಮ್ಮ ಶಾಲೆಗೆ ಬಂದು ‘ನಾಟಕದ ಮೂಲಕ ಇಂಗ್ಲಿಷ್ ಕಲಿಕೆ’ ಎಂಬ ಪರಿಕಲ್ಪನೆಯಲ್ಲಿ ಮಕ್ಕಳಿಗೆ ಅಭಿನಯದ ಮೂಲಕ ಇಂಗ್ಲಿಷ್ ಕಲಿಕೆಯ ಕಾರ್ಯಾಗಾರ ನಡೆಸಿಕೊಟ್ಟರು. ಅದರ ಭಾಗವಾಗಿ ಅವರು ರಚಿಸಿರುವ ‘ಎ ಬಿಗ್ ‘ನೋ’ ಟು ಡ್ರಗ್ಸ್’ ಎಂಬ ನಾಟಕದ ಅಭಿನಯವನ್ನು ತಾವೇ ಮಾಡಿ ತೋರಿಸಿ ಅದರ ತರಬೇತಿ ನೀಡಿದರು. ನಂತರ ಪ್ರತಿನಿತ್ಯ ಅದನ್ನ ಅಭ್ಯಾಸ ಮಾಡಿಸಲು ಹೇಳಿದ್ದರು. ಅದರ ಕುರಿತಾದ ಮಾಹಿತಿಯನ್ನು
ಪಡೆಯುತ್ತಿದ್ದರು.

ಆ ವರ್ಷದ ಮಕ್ಕಳಿಗೆ ಎರಡೇ ತಿಂಗಳಲ್ಲಿ ಕಲಿಸಿದೆವು. ಆಗ ನಾನು ಮತ್ತು ನನ್ನ ಗಂಡ (ಶಿಕ್ಷಕ ವಿನೋದ್ ಕುಮಾರ್) ಪೆಂಡ್ಲಿವಾರಹಳ್ಳಿಯಲ್ಲೆ ವಾಸ್ತವ್ಯ ಹೂಡಿದ್ದೆವು. ಇಬ್ಬರೂ ಸಂಜೆ ವೇಳೆ ಮಕ್ಕಳಿಗೆ ಹೇಳಿಕೊಡುತ್ತಿದ್ದೆವು. ರಜೆಯ ನಂತರ ಪುನಃ ಶಾಲೆಗೆ ಹೋದಾಗ ಆ ಹಿರಿಯ ವಿದ್ಯಾರ್ಥಿಗಳಿಗೆ ಕಲಿಸುವಾಗ ನೋಡಿ‌ ನೋಡಿ, ಕೇಳಿ ಕೇಳಿ, ಕಿರಿಯ ವಿದ್ಯಾರ್ಥಿಗಳು ತಮಗೆ ತಾವೇ ನಾಟಕದ ಸಂಭಾಷಣೆಗಳನ್ನು ಗಿಣಿ ಪಾಠದಂತೆ ಹೇಳಿಕೊಳ್ಳುತ್ತಿದ್ದರು. ಅವರ ಆಸಕ್ತಿ ನೋಡಿ ಈ ಬ್ಯಾಚ್ ವಿದ್ಯಾರ್ಥಿಗಳಿಗೆ ಪುನಃ ತರಬೇತಿ ನೀಡಿ, ವೀಡಿಯೋ ಮಾಡಿ ಅಪ್ ಲೋಡ್ ಮಾಡಿದೆವು ಎಂದು ಶಿಕ್ಷಕಿ ಉಷಾ ತಿಳಿಸಿದರು.

ನಮ್ಮ ಶಾಲೆಯ ಮಕ್ಕಳ ಇಂತಹ ಪ್ರತಿಭೆ ಎಲ್ಲೆಡೆ ಮೆಚ್ಚುಗೆ ಪಡೆಯುತ್ತಿರುವದರಿಂದ ಮತ್ತು ಕೊರೊನಾ ಕಾಲದಲ್ಲೂ ಉತ್ತಮವಾಗಿ ವಿದ್ಯಾಗಮ ಕಾರ್ಯಕ್ರಮದಡಿಯಲ್ಲಿ ಮಕ್ಕಳಿಗೆ ಕಲಿಕಾ ಚಟುವಟಿಕೆಗಳನ್ನ ಹಮ್ಮಿಕೊಂಡಿದ್ದರಿಂದ, ಊರಲ್ಲಿನ ಪೋಷಕರು ಈ ವರ್ಷ ಖಾಸಗಿ ಶಾಲೆಗೆ ಹೋಗುತ್ತಿದ್ದ ಮೂವರು ಮಕ್ಕಳನ್ನು ನಮ್ಮ ಶಾಲೆಗೆ ಸೇರಿಸಿದ್ದಾರೆ. ನಾಟಕದ ಪಾತ್ರಧಾರಿಗಳು ತ್ರಿಷಾ, ನಿಶಾಂತ್ (4 ನೇ ತರಗತಿ), ತನುಶ್ರೀ, ಯಶ್ವಂತ್, ಕಿರಣ್ (3 ನೇ ತರಗತಿ), ಇಂದು, ವಿನಯ್ (2 ನೇ ತರಗತಿ) ಯಲ್ಲಿ ಕಲಿಯುತ್ತಿದ್ದಾರೆ. ಶಿಕ್ಷಕ ಚನ್ನಕೃಷ್ಣ ಸಹಕಾರ ಇದೆ ಎಂದು ಅವರು ವಿವರಿಸಿದರು.

ವೀಡಿಯೋ ಲಿಂಕ್ : https://www.youtube.com/watch?v=RhbgtA2IzAs

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.