ಚಿಕ್ಕಬಳ್ಳಾಪುರ: ರಾಷ್ಟ್ರೀಯ ನೀರಾವರಿ ಕಾಯ್ದೆ, ನದಿಗಳ ಜೋಡಣೆ, ಬಯಲು ಸೀಮೆಗೆ ನೀರಾವರಿ ಸೌಲಭ್ಯ ಸೇರಿದಂತೆ ನೀರಾವರಿ ವಿಚಾರವಾಗಿ ಗಮನ ಸೆಳೆಯಲು ಗೌರಿಬಿದನೂರಿನ ಪರಿಸರವಾದಿ ಚೌಡಪ್ಪ ಅವರು ರಾಜ್ಯದ ಹಲವು ಸಂಸದರನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತಿದ್ದಾರೆ.
ಅವರ ‘ನೀರಿಗಾಗಿ ನವದೆಹಲಿ ಯಾತ್ರೆ’ಯು ಮೂರು ದಿನಗಳ ಹಿಂದೆ ನವದೆಹಲಿ ತಲುಪಿದೆ. ಬುಧವಾರ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಅವರನ್ನೂ ಭೇಟಿ ಮಾಡಿದ್ದಾರೆ. ಪ್ರಧಾನಿ ಕಚೇರಿಗೂ ಮನವಿ ನೀಡಿದ್ದಾರೆ.
ಈ ಭೇಟಿಯ ಕುರಿತು ಎಚ್.ಡಿ.ಕುಮಾರಸ್ವಾಮಿ ತಮ್ಮ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಮಾಹಿತಿ ಸಹ ಹಂಚಿಕೊಂಡಿದ್ದಾರೆ.
ನವದೆಹಲಿಯ ಕರ್ನಾಟಕ ಭವನದಲ್ಲಿ ಚೌಡಪ್ಪ ತಂಗಿದ್ದು ರಾಜ್ಯದ ಹಲವು ಸಂಸದರನ್ನು ಹಾಗೂ ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ನೀರಾವರಿ ಕಾಯ್ದೆ, ಯೋಜನೆಗಳ ಬಗ್ಗೆ ಗಮನ ಸೆಳೆಯಲು ನಿರ್ಧರಿಸಿದ್ದಾರೆ.
‘ನದಿಗಳ ಜೋಡಣೆಯಿಂದ ಅಂತರರಾಜ್ಯ ನದಿ ವಿವಾದಗಳು ಪರಿಹಾರ ಆಗುತ್ತವೆ. ಈ ಮೂಲಕ ಒಕ್ಕೂಟ ವ್ಯವಸ್ಥೆಯು ಬಲಗೊಳ್ಳುತ್ತದೆ. ನದಿ ಜೋಡಣೆಯ ವಿಚಾರವಾಗಿ ಸುಪ್ರೀಂಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದ್ದರೂ ಕೇಂದ್ರ ಸರ್ಕಾರ ಈ ಬಗ್ಗೆ ಕ್ರಮವಹಿಸುತ್ತಿಲ್ಲ’ ಎಂದು ಪರಿಸರವಾದಿ ಚೌಡಪ್ಪ ತಿಳಿಸಿದರು.
ನದಿಜೋಡಣೆಗೆ ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಇದು ನ್ಯಾಯಾಂಗ ನಿಂದನೆ ಆಗುತ್ತದೆ. ರಾಷ್ಟ್ರೀಯ ಜಲ ನೀತಿಯನ್ನು ಸಹ ರೂಪಿಸಬೇಕು ಎಂದರು.
ದಕ್ಷಿಣ ಬಯಲು ಸೀಮೆಯ ಜಿಲ್ಲೆಗಳಾದ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ನಗರ ಜಿಲ್ಲೆಗಳ 18 ನದಿ ಪಾತ್ರದಲ್ಲಿರುವ 9,300 ಕೆರೆಗಳನ್ನು ತುಂಬಿಸಲು 364 ಟಿಎಂಸಿ ಅಡಿ ನೀರು ಅಗತ್ಯ. ಈ ನೀರನ್ನು ಕೃಷ್ಣಾ, ಕಾವೇರಿ, ಪಶ್ಚಿಮವಾಹಿನಿ ಕಣಿವೆಗಳಿಂದ ಗುರುತ್ವಾಕರ್ಷಣೆ ಕಾಲುವೆ ಮೂಲಕ ಹರಿಸಿ ಪರಿಸರ ಸ್ನೇಹಿ ನೀರಾವರಿ ಯೋಜನೆ ರೂಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಕೋರಿದರು.
ಈ ಎಲ್ಲ ವಿಚಾರವಾಗಿ ಕೇಂದ್ರ ಜಲಸಂಪನ್ಮೂಲ ಸಚಿವರು ಸೇರಿದಂತೆ 25ರಿಂದ 30 ಸಂಸದರನ್ನು ಭೇಟಿ ಮಾಡಿ ಮನವಿ ಸಲ್ಲಿಸುವೆ. ಸಂಸದ ಡಾ.ಕೆ.ಸುಧಾಕರ್ ಕರ್ನಾಟಕ ಭವನದಲ್ಲಿ ವಾಸ್ತವ್ಯಕ್ಕೆ ಅವಕಾಶ ಕೊಡಿಸಿದ್ದಾರೆ. ನೀರಾವರಿ ಯೋಜನೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿ ಅವರೂ ತಿಳಿಸಿದ್ದಾರೆ ಎಂದರು.
ನೀರಾವರಿ ಹೋರಾಟಗಾರರಾದ ಚೌಡಪ್ಪ ಈ ಹಿಂದೆಯೂ ಬಯಲು ಸೀಮೆ ನೀರಾವರಿ ವಿಚಾರವಾಗಿ ಕೇಂದ್ರ ಸರ್ಕಾರ ಮತ್ತು ಸಂಸದರ ಗಮನ ಸಳೆಯಲು ನವದೆಹಲಿ ಯಾತ್ರೆ ನಡೆಸಿದ್ದರು.
ಎಚ್.ಡಿ.ಕುಮಾರಸ್ವಾಮಿ ಅವರು ನಾನು ನೀಡಿದ ವರದಿಯ ಬಗ್ಗೆ ಸ್ಪಂದಿಸಿದ್ದಾರೆ. ಈ ವಿಚಾರಗಳನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಬಂಧಿಸಿದ ಸಚಿವರ ಗಮನಕ್ಕೆ ತರುವುದಗಿ ಭರವಸೆ ನೀಡಿದ್ದಾರೆ ಎಂದು ಎಚ್‌ಡಿಕೆ ಭೇಟಿಯ ಬಗ್ಗೆ ಚೌಡಪ್ಪ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.